ಹೊಸಪೇಟೆ :
ಹಿಂದುಳಿದ ವರ್ಗಗಳ ಒಕ್ಕೂಟ ಹಾಗು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ)ದ ಕಾರ್ಯಕರ್ತರು ಜಂಟಿಯಾಗಿ ಶುಕ್ರವಾರ ವಿವಿಧ ಬೇಡಿಕೆ ಈಡೇರಿಸುವಂತೆ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ವಿಜಯನಗರ ಅರಸರ ಕಾಲದಿಂದ ರಾಯ, ಬಸವ, ಬೆಲ್ಲ, ತುರ್ತಾ ಕಾಲುವೆಗಳಿಗೆ ವರ್ಷ ಪೂರ್ತಿ ತುಂಗಭದ್ರಾ ನದಿಯಿಂದ ನೀರು ಬಿಡಲಾಗುತ್ತಾ ಬರುತ್ತಿದೆ. ಬಚಾವತ್ ನ್ಯಾಯಾಧಿಕರಣ ತೀರ್ಪಿನಂತೆ ಹೊಸಪೇಟೆ ನಗರಕ್ಕೆ ಕುಡಿಯುವ ನೀರಿಗಾಗಿ 5 ಟಿ.ಎಂ.ಸಿ.ನೀರು ನಗದಿ ಪಡಿಸಲಾಗಿದೆ.ಆದರೆ ಕಳೆದ ಕೆಲ ವರ್ಷಗಳಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ ಎಂಬ ನೆಪ ಮುಂದೊಡ್ಡಿ ಬೇಸಿಗೆಯಲ್ಲಿ ಕಾಲುವೆಗಳಿಗೆ ನೀರು ಪೂರೈಕೆ ಕಡಿತಗೊಳಿಸುತ್ತಿರುವುದರಿಂದ ಬೆಳೆಗಳು ನೀರಿಲ್ಲದೇ ಒಣಗಿ ರೈತರು ಅಪಾರ ನಷ್ಟ ಎದುರಿಸುವಂತಾಗಿದೆ. ಅಧಿಕಾರಿಗಳು ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡು ವಿಜಯನಗರ ಕಾಲುವೆಗಳಿಗೆ ನೀರು ವರ್ಷ ಪೂರ್ತಿ ಬಿಡಬೇಕೆಂದು ಒತ್ತಾಯಿಸಿದರು.
ಈ ಬಾರಿ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಸುಮಾರು 200 ಟಿಎಂಸಿ ನೀರು ನದಿಗೆ ಬಿಡಲಾಗಿದೆ. ಈಗಾಗಲೇ ಕಾಲುವೆಗಳಿಗೆ 87 ಟಿಎಂಸಿ ನೀರು ಬಿಡಲಾಗಿದೆ. ಇನ್ನೂ 64ಟಿಎಂಸಿ ನೀರು ಸಂಗ್ರಹವಿದೆ. ಅದಕ್ಕಾಗಿ ಅಧಿಕಾರಿಗಳು ಯಾವ ಸಬೂಬು ಹೇಳದೇ ರೈತರ 2ನೇ ಬೆಳೆಗೆ ನೀರು ಬಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಖಾಜಿಹುಸೇನಿ ನಿಯಾಜಿ, ಜಿಲ್ಲಾ ಉಪಾಧ್ಯಕ್ಷ ಎಂ.ದಾನೇಶ್, ತಾಲೂಕು ಅಧ್ಯಕ್ಷ ಎಂ.ಜಡೆಪ್ಪ, ಹಿಂದುಳಿದ ವರ್ಗ ಒಕ್ಕೂಟಕದ ಅಧ್ಯಕ್ಷರಾದ ವೈ.ಯಮುನೇಶ್, ಪ್ರಧಾನ ಕಾರ್ಯದರ್ಶಿ ರವಿಶಂಕರ್ ದೇವರಮನೆ, ಡಿ.ಚಂದ್ರಶೇಖರ್ ಮಲ್ಲಿಕಾರ್ಜುನ, ಜೆ.ಕೆ.ಜಹಿರುದ್ದೀನ್, ಕೆ.ಹನುಮಂತ ರೆಡ್ಡಿ, ಜೆ.ಕೊಟ್ರಪ್ಪ, ದುರ್ಗಪ್ಪ, ತಾಯಪ್ಪ, ಸೋಮಣ್ಣ ಯಾದವ್, ಬಿ.ಹನುಮಂತಪ್ಪ, ಜಾದವ್, ಬಿಸಾಟಿ ಮೂರ್ತಿ, ಎನ್.ಅಂಕ್ಲೇಶ, ಪ್ರಹಲ್ಲಾದ್‍ಸ್ವಾಮಿ, ಕೆ.ಜಯಪ್ಪ, ಎಸ್.ತಿಪ್ಪೇಸ್ವಾಮಿ, ಸೋಮರೆಡ್ಡಿ, ಕೆ.ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ