ನವದೆಹಲಿ:
ಖ್ಯಾತ ಪತ್ರಕರ್ತ, ಕೇಂದ್ರದ ಮಾಜಿ ಸಚಿವ ಹಾಗೂ ವಿಶ್ವವಾಣಿ ಅಂಕಣಕಾರ ಎಂ ಜೆ ಅಕ್ಬರ್ ಅವರು ಬರೆದ ʼಆಫ್ಟರ್ ಮಿ, ಕೆಯೋಸ್: ಆಸ್ಟ್ರಾಲಜಿ ಇನ್ ದಿ ಮೊಗಲ್ ಎಂಪೈರ್ʼ ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚೆಗೆ ದಿಲ್ಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ನಡೆಯಿತು. ರಕ್ಷಣಾ ಸಚಿವ ರಾಜನಾಥ ಸಿಂಗ್, ಕಮ್ಯೂನಿಕೇಶನ್ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಬಿಹಾರ ರಾಜ್ಯಪಾಲ ಆರೀಫ್ ಮೊಹಮದ್ ಖಾನ್, ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯದ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮತ್ತಿತರರು ಭಾಗವಹಿಸಿದರು.
ʼಅದೊಂದು “ಹೈಪ್ರೊಫೈಲ್” ಪುಸ್ತಕ ಬಿಡುಗಡೆ ಸಮಾರಂಭ. ರಕ್ಷಣಾ ಸಚಿವ ರಾಜನಾಥ ಸಿಂಗ್, ಕಮ್ಯೂನಿಕೇಶನ್ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಬಿಹಾರ ರಾಜ್ಯಪಾಲ ಆರೀಫ್ ಮೊಹಮದ್ ಖಾನ್, ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯದ ಅಧ್ಯಕ್ಷ ನೃಪೇಂದ್ರ ಮಿಶ್ರಾ ವೇದಿಕೆಯಲ್ಲಿದ್ದರು. ಜತೆಯಲ್ಲಿ ಸಮಾರಂಭದ ಕೇಂದ್ರ ಬಿಂದು ಎಂ.ಜೆ.ಅಕ್ಬರ್.
ಸಭೆಯಲ್ಲಿ ಮಾಜಿ ಸಚಿವರು, ಹಾಲಿ ಮತ್ತು ನಿವೃತ್ತ ಐಎಎಸ್ – ಐಪಿಎಸ್ ಅಧಿಕಾರಿಗಳು, ಹಾಲಿ ಮತ್ತು ನಿವೃತ್ತ ರಾಜತಾಂತ್ರಿಕರು, ನಿವೃತ್ತ ರಾಜ್ಯಪಾಲರು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ವಕ್ತಾರರು, ಪತ್ರಿಕಾ ಮಾಲೀಕರು, ಖ್ಯಾತ ಲೇಖಕರು… ಒಟ್ಟಾರೆ ಗಣ್ಯರ ದಂಡು.
ಅತ್ಯಂತ ಶಿಸ್ತಿನಿಂದ, ಅಚ್ಚುಕಟ್ಟಾಗಿ ರೂಪಿಸಿದ ಕಾರ್ಯಕ್ರಮ. ಯಾರೂ ಹದಿನೈದು ನಿಮಿಷಕ್ಕಿಂತ ಹೆಚ್ಚು ಮಾತಾಡಲಿಲ್ಲ. ನಾನು ನೋಡಿದ ಪೈಕಿ, ಕಾರ್ಯಕ್ರಮ ನಿರೂಪಕರು ಅತ್ಯಂತ ಕಡಿಮೆ ಮಾತಾಡಿದ ಸಮಾರಂಭ.ಕೊನೆಯಲ್ಲಿ ಪುಸ್ತಕ ಬಿಡುಗಡೆ. ಇಡೀ ಕಾರ್ಯಕ್ರಮ ಒಂದೂವರೆ ಗಂಟೆಯೊಳಗೆ ಮುಗಿದು ಹೋಯಿತು. ದೃಷ್ಟಿ ಬೊಟ್ಟು ಎಂಬಂತೆ, ಎಲ್ಲೂ ಸಣ್ಣ ಲೋಪವೂ ಇರಲಿಲ್ಲ. ಕೃತಿ ಮತ್ತು ಕೃತಿಕಾರರನ್ನು ಬಿಟ್ಟು ಯಾರೂ ಬೇರೆ ವಿಷಯ ಮಾತಾಡಲಿಲ್ಲ.
ಈ ಕಾರ್ಯಕ್ರಮಕ್ಕೆ ಎಂ.ಜೆ.ಅಕ್ಬರ್ ನನ್ನನ್ನೂ ಆಹ್ವಾನಿಸಿದ್ದರು, ಹೋಗಿದ್ದೆ. ಪ್ರೀತಿಯಿಂದ ಹಸ್ತಾಕ್ಷರ ಹಾಕಿ ನನಗೂ ಒಂದು ಪುಸ್ತಕ ಕೊಟ್ಟರು. ಪುಸ್ತಕದ Acknowledgement ನಲ್ಲಿ ನನ್ನನ್ನು ಸ್ಮರಿಸಿಕೊಂಡಿದ್ದರು. ಹೋಗಿದ್ದು ಸಾರ್ಥಕ ಎನಿಸಿತು. ಒಂದು ಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧನ್ಯತೆ.ʼ








