ಡಿಸಿಎಂ ಹಾಗೂ ಶಿಕ್ಷಣ ಸಚಿವರ ವಿರುದ್ದ ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು

ಬೆಂಗಳೂರು

     ಬೆಂಗಳೂರು ಶಿಕ್ಷಕರ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಬೆಂಗಳೂರು ನಗರ ಜಿಲ್ಲೆ ಡಿಡಿಪಿಐ, ಬಿಇಒಗಳ ಜೊತೆ ಸಭೆ ಸೇರಿಸಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಚುನಾವಣಾ ಅಧಿಕಾರಿಗಳಿಗೆ ಜೆಡಿಎಸ್ ಮುಖಂಡರು ದೂರು ನೀಡಿದ್ದಾರೆ.

    ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಮಧು ಬಂಗಾರಪ್ಪ ಹಾಗೂ ಕಾಂಗ್ರೆಸ್‌ ಮುಖಂಡರು ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಪ್ರಭಾವ ಬೀರುತ್ತಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

    ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಮತ್ತು ಮಧು ಬಂಗಾರಪ್ಪ, ಶಿಕ್ಷಣ ಮಂತ್ರಿಗಳು ಇವರುಗಳು ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆಯ 3 ಜಿಲ್ಲೆಗಳಾದ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಯ ಡಿಡಿಪಿಐಗಳು ಮತ್ತು ಬಿ.ಇ.ಓ.ಗಳನ್ನು ಗೌಪ್ಯವಾಗಿ ಸಭೆ ಸೇರಿಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿಸುವಂತೆ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.

    ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು ಕೆ.ಆರ್. ಸರ್ಕಲ್‌ನಲ್ಲಿ 3 ಜಿಲ್ಲೆಯ ಡಿ.ಡಿ.ಪಿ.ಐ. ಮತ್ತು ಬಿ.ಇ.ಓ.ಗಳನ್ನು ಕರೆದು ಸಭೆ ಮಾಡಿರುತ್ತಾರೆ. ಡಿ.ಕೆ. ಶಿವಕುಮಾರ್‌ರವರು ತಮ್ಮ ಮನೆಯಲ್ಲಿ ರಾತ್ರಿ 7 ಗಂಟೆಗೆ ಬೆಂಗಳೂರು ನಗರ ಉತ್ತರ ಮತ್ತು ದಕ್ಷಿಣ, ರಾಮನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿ.ಡಿ.ಪಿ.ಐ.. ಬಿ.ಓ.. ಮತ್ತು ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳನ್ನು ಕರೆದು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣನವರಿಗೆ ಮತ ಹಾಕಿಸುವಂತೆ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.

   ಕರ್ನಾಟಕ ಸರ್ಕಾರ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಪರೋಕ್ಷವಾಗಿ ಮತದಾರರನ್ನು ಓಲೈಸುವ ಪ್ರಯತ್ನ ಮಾಡಿರುತ್ತಾರೆ. ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ. ಸಭೆಯನ್ನು ಮಾಡದಂತೆ ಮತ್ತು ಸಂಬಂಧಪಟ್ಟವರಿಗೆ ಹಾಗೂ ಚುನಾವಣಾ ಅಕ್ರಮ ಮಾಡದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಜೆಡಿಎಸ್‌ ಆಗ್ರಹಿಸಿದೆ.

  ಬೆಂಗಳೂರು ಶಿಕ್ಷಕರ ಉಪ ಚುನಾವಣೆಯಲ್ಲಿ ಶಿಕ್ಷಕ ಮತದಾರರಿಗೆ ಬೆಳ್ಳಿ ಬಟ್ಟಲುಗಳನ್ನು ನೀಡಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣರವರು ಅವರ ಏಜೆಂಟರ್‌ಗಳ ಮೂಲಕ 3 ಜಿಲ್ಲೆಯ ಎಲ್ಲಾ ಕ್ಷೇತ್ರದ ಎಲ್ಲಾ ಶಾಲೆಗಳಲ್ಲಿ ಹಂಚಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಎಂ.ಸಿ.ಸಿ. ಟೀಂರವರಿಗೆ ಮೌಖಿಕವಾಗಿ ಮತ್ತು ವಾಟ್ಸ್ಆಪ್ ಮೂಲಕ ಸಂದೇಶ ಕಳುಹಿಸಿರುತ್ತೇವೆ. ಆದಾಗ್ಯ ಇದುವರೆಗೆ ಕ್ರಮ ಜರುಗಿಸಿರುವುದಿಲ್ಲ.

  ಕಾಂಗ್ರೆಸ್ ಅಭ್ಯರ್ಥಿ ಪರ ಕೆಲವು ಅಧಿಕಾರಿಗಳು ಭಾಗವಹಿಸಿ ಗಿಫ್ಟ್‌ ಹಂಚಿಕೆ ಮಾಡಿಸುತ್ತಿದ್ದಾರೆ. ಕರ್ನಾಟಕ ಸರ್ಕಾರ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಪರೋಕ್ಷವಾಗಿ ಮತದಾರರನ್ನು ಓಲೈಸುವ ಪ್ರಯತ್ನ ಮಾಡಿರುತ್ತಾರೆ. ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ. ಈ ಕೂಡಲೇ ದಾಸ್ತಾನು ಮಾಡಿರುವವರನ್ನು ಹಂಚಿಕೆ ಮಾಡುತ್ತಿರುವವರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ದೂರಿನಲ್ಲಿ ಆಗ್ರಹಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap