ಮಧುಗಿರಿ :
2 ಎಕರೆ 15 ಗುಂಟೆ ಸರಕಾರಿ ಜಮೀನನ್ನು ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಹೆಸರಿಗೆ ಕಾಯ್ದಿರಿಸಿದ ಜಮೀನಿನ ಮಂಜೂರಾತಿ ಆದೇಶ ಪತ್ರವನ್ನು ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್ವರ ಗೌಡ ಪಾಟೀಲ್‍ರವರಿಗೆ ತಹಸೀಲ್ದಾರ್ ವೈ.ರವಿ ರವರು ಹಸ್ತಾಂತರಿಸಿದರು.
ಮಧುಗಿರಿ ಕಸಬಾ ವ್ಯಾಪ್ತಿಯ ಹರಿಹರ ರೊಪ್ಪ ಗ್ರಾಮದ ಸ.ನಂ. 7 ರಲ್ಲಿ 2 ಎಕರೆ 15 ಗುಂಟೆ ಜಮೀನನ್ನು ಕಂದಾಯ ಇಲಾಖೆಯಿಂದ ನ್ಯಾಯಾಂಗ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.
ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ್ ಮಾತನಾಡಿ, ಹೈಕೋರ್ಟಿನ ಆಡಳಿತಾತ್ಮಕ ನ್ಯಾಯಾಧೀಶರಾಗಿದ್ದ ವೀರಪ್ಪನವರ ನಿರ್ದೇಶನ ಆದೇಶದಂತೆ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶರ ಆದೇಶದಂತೆ 2ಎಕರೆ 15 ಗುಂಟೆ ಜಾಗ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯದ ಕಟ್ಟಡಗಳು, ವಕೀಲರ ಸಂಘದ ಕಟ್ಟಡ, ನ್ಯಾಯಾಧೀಶರುಗಳಿಗೆ ವಸತಿ ಸಮುಚ್ಛಯ ಸಿಬ್ಬಂದಿಗೆ ವಸತಿ ಸಮುಚ್ಛಯ ಕಟ್ಟಲು ಅನುಕೂಲವಾಗಲಿದೆ.
ಪ್ರಸ್ತುತ ನ್ಯಾಯಾಲಯವು ಒಟ್ಟು 8 ಎಕರೆ ಜಾಗವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಈ ತಾಲ್ಲೂಕು ಜಿಲ್ಲಾ ಕೇಂದ್ರವಾದರೆ ನ್ಯಾಯಾಂಗ ಇಲಾಖೆಯ ಹೆಚ್ಚಿನ ಕಟ್ಟಡಗಳ ಲಭ್ಯತೆ ಬೇಕಾಗಿರುವುದರಿಂದ ಈ ಸ್ಥಳವನ್ನು ನಿಗದಿಗೊಳಿಸಿರುವುದು ಸಂತೋಷಕರವಾದ ವಿಚಾರ. ಈ ಕಾರ್ಯಕ್ಕೆ ಸಹಕಾರ ನೀಡಿದ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ ಮತ್ತು ರೆವಿನ್ಯೂ ಇನ್‍ಸ್ಪೆಕ್ಟರ್‍ರವರುಗಳಿಗೆ ಧನ್ಯವಾದ ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ಸಿ. ಕೃಷ್ಣಾ ರೆಡ್ಡಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ನ್ಯಾಯಾಂಗ ಇಲಾಖೆ ಮತ್ತು ಕಂದಾಯ ಇಲಾಖೆ ಯವರು ನಿರಂತರ ಸಂಪರ್ಕದಿಂದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ವೀರಪ್ಪನವರ ಕಾಳಜಿಯಿಂದಾಗಿ ಈ ಜಾಗ ಮಂಜೂರಾತಿ ಆಗಿದೆ. ಇದರ ಜೊತೆಗೆ ನಮ್ಮ ನ್ಯಾಯಾಲಯದ ನ್ಯಾಯಾಧೀಶರುಗಳು ಮತ್ತು ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶರ ಸಹಕಾರದಿಂದ ಜಾಗ ಮಂಜೂರಾತಿಯಾಯಿತು ಎಂದರು.
ಮಧುಗಿರಿ ಜಿಲ್ಲಾ ಕೇಂದ್ರವಾಗುವ ದೂರದೃಷ್ಟಿಯ ಉದ್ದೇಶದಿಂದ ಈ ಸ್ಥಳ ನ್ಯಾಯಾಲಯದ ಸನಿಹದಲ್ಲೇ ದೊರಕಿರುವುದು ಸಂತಸ ತಂದಿದೆ. ಇದು ತುಮಕೂರು ಜಿಲ್ಲಾ ನ್ಯಾಯಾಧೀಶರ ಹೆಸರಿನಲ್ಲಿರುವುದರಿಂದ ಯಾರೂ ಹಸ್ತಕ್ಷೇಪ ಮಾಡು ವಂತಿಲ್ಲವೆಂದರು.
ವಕೀಲರ ಸಂಘಕ್ಕೆ ಹತ್ತು ಗುಂಟೆ ಜಾಗ ಕೊಡಿ ಎಂದು ತಹಸೀಲ್ದಾರ್‍ಗೆ ವಕೀಲರ ಸಂಘದಿಂದ ಮನವಿ ಮಾಡಿದ್ದೆವು. ಆದರೆ ನಮ್ಮ ಅರ್ಜಿ ವಿಲೇವಾರಿಗೆ ಅರಣ್ಯ ಇಲಾಖೆಯವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕಾರಣ ಅರ್ಜಿ ವಿಲೇವಾರಿಯಾಗದೆ ಹಿಂಬರಹ ಪಡೆದೆವು. ಕಾರ್ಯಕ್ರಮವೊಂದಕ್ಕೆ ಮಧುಗಿರಿಗೆ ಆಗಮಿಸಿದ್ದ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ವೀರಪ್ಪನವರಿಗೆ ವಕೀಲರ ಸಂಘದಿಂದ ಮನವಿ ಸಲ್ಲಿಸಿದ್ದರ ಪ್ರತಿಫಲ ನಮಗೆ ಈ ಜಾಗ ದೊರೆತಿದೆ ಎಂದರು.
ನ್ಯಾಯಾಧೀಶ ಸಾಗರ್ ಗೌಡ ಪಾಟೀಲ್, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ವಕೀಲರ ಸಂಘದ ಕಾರ್ಯದರ್ಶಿ ಎಂ.ವಿ. ದಯಾನಂದ ಸಾಗರ್, ಲೋಕೋಪಯೋಗಿ ಇಲಾಖೆಯ ಎಇಇ ರಾಜಗೋಪಾಲ್, ರೆವೆನ್ಯೂ ಇನ್‍ಸ್ಪೆಕ್ಟರ್ ಜಿ. ಜಯರಾಮಯ್ಯ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ