ಮಧುಗಿರಿ : ಕೊಳಗೇರಿಯಂತಾದ ಬೆಸ್ಕಾಂ ವಸತಿ ಗೃಹಗಳು

 ಮಧುಗಿರಿ : 

      ಜನರ ಮನೆಗಳಿಗೆ ಬೆಳಕು ನೀಡುವ ಇಲಾಖೆ ಸಿಬ್ಬಂದಿಯ 34 ವಸತಿ ಗೃಹಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಿದ್ದು, ಇಲ್ಲಿ ವಾಸವಿರುವ ನೌಕರರ ಕುಟುಂಬದವರ ಜೀವನ ನಿರ್ವಹಣೆ ದುಸ್ತರವಾಗಿದೆ.

      ಪಟ್ಟಣದ ಏಕಶಿಲಾ ಬೆಟ್ಟದ ತಪ್ಪಲಿನಲ್ಲಿ ಕೂಗಳತೆಯ ದೂರದಲ್ಲಿ, ಬೆಸ್ಕಾಂ ಇಲಾಖೆಯ ಹಿಂಭಾಗದಲ್ಲಿ ವಸತಿ ಗೃಹಗಳಿದ್ದು, ಈ ಗೃಹಗಳ ಸುತ್ತ-ಮುತ್ತ ಸೂಕ್ತವಾದ ಬೀದಿ ದೀಪ, ಚರಂಡಿ ವ್ಯವಸ್ಥೆ, ಶೌಚಾಲಯಗಳ ನಿರ್ವಹಣೆಯಿಲ್ಲದೆ ಸೊರಗುತ್ತಿವೆ.
ಈ ಗೃಹ ನಿರ್ವಹಣೆಯನ್ನು ಕೆಪಿಟಿಸಿಎಲ್ ಇಲಾಖೆಯ ಸಿವಿಲ್ ತಂಡ ನಿರ್ವಹಣೆ ಮಾಡುತ್ತಿದ್ದು, ವರ್ಷಕ್ಕೊಮ್ಮೆ ಭೇಟಿ ನೀಡಿ ಮಳೆ ಬಂದಾಗ ಸೋರುವ ಈ ಗೃಹಗಳಿಗೆ ತೇಪೆ ಹಾಕಿ, ಸುಣ್ಣ ಬಣ್ಣ ಬಳಿದು ಹೋದವರು ಮತ್ತೆ ಬರುವುದು ಮೇಲಧಿಕಾರಿಗಳ ಆದೇಶ ಬಂದಾಗ ಮಾತ್ರ. ಅಲ್ಲಿಯವರೆವಿಗೂ ನೌಕರರ ಕುಟುಂಬ ವರ್ಗದವರ ಪರಿಸ್ಥಿತಿ ಅಧೋಗತಿ.

       ಇಲಾಖೆಯ ಸಿಬ್ಬಂದಿ ವೇತನದಲ್ಲಿ ಪ್ರತಿ ತಿಂಗಳು ಸುಮಾರು 4 ಸಾವಿರದಿಂದ 6 ಸಾವಿರದವರೆವಿಗೂ ಕಟಾವು ಮಾಡಿಕೊಳ್ಳುತ್ತಿರುವ ನಿಗಮವು, ವಸತಿ ಗೃಹಗಳ ಸೂಕ್ತ ನಿರ್ವಹಣೆ ಮಾಡಲು ಮುಂದಾಗುತ್ತಿಲ್ಲ ಎಂಬ ಆರೋಪ ಕುಟುಂಬ ವರ್ಗದವರದ್ದು.

      ಕಳೆದ ವರ್ಷ ನಿಗಮದ ವತಿಯಿಂದಲೆ ವಸತಿ ಗೃಹಗಳಲ್ಲಿನ ಶೌಚಾಲಯಗಳಿಗೆ ಯುಜಿಡಿ ಕಾಮಗಾರಿಯನ್ನು ನೆರವೇರಿಸಿದ್ದು, ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿದರೂ ಒಂದು ದಿನವಾದರೂ ಸಹ ಶೌಚಾಲಯದ ನೀರು ಇದೂವರೆವಿಗೂ ನಿಗದಿತ ಜಾಗಕ್ಕೆ ಹರಿದಿಲ್ಲ. ಈ ಅವೈಜ್ಞಾನಿಕ ಕಾಮಗಾರಿಯ ಬಿಲ್ ಸರಿಯಾದ ಸಮಯಕ್ಕೆ ಗುತ್ತಿಗೆದಾರನಿಗೆ ಪಾವತಿಯಾಗಿದೆ ಎನ್ನಲಾಗುತ್ತಿದೆ
ಶೌಚಾಲಯವಿದ್ದರೂ ಸಹ ವಸತಿ ಗೃಹಗಳಲ್ಲಿ ವಾಸವಿರುವ ನೌಕರರೆ ತಮ್ಮ ಸ್ವಂತ ಖರ್ಚಿನಿಂದ ಮತ್ತೊಮ್ಮೆ ಪಿಟ್‍ಗಳಿಗೆ ಸಂಪರ್ಕ ಕಲ್ಪಿಸಿಕೊಂಡಿದ್ದಾರೆ. ಲಕ್ಷಾಂತರ ರೂ.ಗಳಲ್ಲಿ ಖರ್ಚು ಮಾಡಿದ ಕಾಮಗಾರಿಯು ಈಗ ಹಳ್ಳ ಹಿಡಿದಿದೆ. ಇನ್ನೂ ಪುರಸಭೆಯ ವತಿಯಿಂದ ಕಸ ಸಂಗ್ರಹಣೆಯೊಂದು ಬಿಟ್ಟರೆ ಮತ್ತೆ ಯಾವ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿನ ಕುಟುಂಬ ವರ್ಗದವರು ಕೇಳುವ ಹಾಗಿಲ್ಲ.

       ವಸತಿ ಗೃಹಗಳ ನಾಗರಿಕರು ಪುರಸಭೆಯ ವತಿಯಿಂದ ನೀಡುವ ವಾಸ ಸ್ಥಳ ಪ್ರಮಾಣ ಪತ್ರ ಹಾಗೂ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಕೊಡಿ ಎಂದು ಕೇಳಲು ಹೋದರೆ, ನಿಮ್ಮ ಮನೆಗಳ ನಿರ್ವಹಣೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಇಲ್ಲ್ಲವಾದರೆ ನೀವೆ ಮೊದಲು ಕಂದಾಯ ಕಟ್ಟಿ, ಆನಂತರ ನಿಮಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲಾಗುವುದು ಎಂಬ ಸಿದ್ಧ ಉತ್ತರ ಪುರಸಭೆಯ ಅಧಿಕಾರಿಗಳದ್ದು.

     ವಸತಿ ಗೃಹಗಳ ಸುತ್ತ-ಮುತ್ತ ಅನುಪಯುಕ್ತ ಗಿಡ ಗೆಂಟೆಗಳು ಎತ್ತರಕ್ಕೆ ಬೆಳೆದು ನಿಂತಿದ್ದು, ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ಆಗಾಗ ಇವುಗಳ ದರ್ಶನ ಭಾಗ್ಯವನ್ನು ಬರಿಗಣ್ಣಿನಲ್ಲಿ ನೋಡ ಬಹುದಾಗಿದೆ. ಮನೆಗಳ ಸುತ್ತ-ಮುತ್ತ ಕಿರಿದಾದ ಮೋರಿಗಳಿದ್ದು, ನೀರು ಸರಿಯಾಗಿ ಹರಿಯುತ್ತಿಲ್ಲ. ರಾತ್ರಿಯಾದರೆ ಸಾಕು ಸೊಳ್ಳೆಗಳ ದಂಡು ಕಂಡು ಬರುತ್ತಿದೆ. ಕೆಲ ಕುಟುಂಬ ವರ್ಗದವರು ಈ ಸೊಳ್ಳೆಗಳ ಕಾಟದಿಂದ ಹೊತ್ತಲ್ಲದ ಹೊತ್ತಿನಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಯ ಬಾಗಿಲು ಬಡಿದಿರುವಂತಹ ಘಟನೆಗಳು ನಡೆದಿವೆ.

      ಇನ್ನೂ ಕಳೆದ ಕೆಲ ದಿನಗಳಿಂದ ವಸತಿಗೃಹಗಳ ರಸ್ತೆಗಳಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಯು ನಡೆಯುತ್ತಿದ್ದು ಅವೈಜ್ಞಾನಿಕವಾಗಿದೆ. ಮೊದಲು ಸರಿಯಾದ ಚರಂಡಿ ವ್ಯವಸ್ಥೆಯನ್ನು ಮಾಡಿಸಿ ನಂತರ ಸಿ.ಸಿ ರಸ್ತೆ ಮಾಡಬಹುದಾಗಿತ್ತು. ಆದರೆ ಈಗ ನಿರ್ಮಾಣ ಮಾಡುತ್ತಿರುವ ಕಾಂಕ್ರಿಟ್ ರಸ್ತೆಯಿಂದ ಮಳೆ ಬಂದಾಗ ಮಳೆಯ ನೀರು ಸರಾಗವಾಗಿ ಹರಿಯದೆ, ಮನೆಗಳ ಮುಂದೆ ನಿಲ್ಲುತ್ತದೆ ಎಂಬ ಆರೋಪ ಬೆಸ್ಕಾಂ ನೌಕರರ ಕುಟುಂಬದವರದ್ದು.

      ಉಪವಿಭಾಗವನ್ನು ಹೊಂದಿರುವ ಬೆಸ್ಕಾಂ ಇಲಾಖೆಯ ಆವರಣದಲ್ಲಿ ಕೆಲ ವರ್ಷಗಳ ಹಿಂದೆ ನಿರ್ಮಾಣವಾದ ಸುಸ್ಥಿತಿಯಲ್ಲಿರುವ ಸಿಬ್ಬಂದಿವರ್ಗದವರ ವಿಶ್ರಾಂತಿ ಗೃಹವು, ಈಗ ಸೂಕ್ತ ನಿರ್ವಹಣೆಯಿಲ್ಲದೆ ಅನುಪಯುಕ್ತವಾಗಿದೆ. ಇದರ ಸುತ್ತ ಮುತ್ತಲು ಗಿಡಗೆಂಟೆಗಳು ಬೆಳೆದು ನಿಂತಿವೆ.

     ಇಲಾಖೆಗೆ ಸೇರಿದ ಈ ವಿಶಾಲವಾದ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಹಳೆಯ ಮತ್ತು ಅನುಪಯುಕ್ತ ವಾಹನಗಳು, ವಿದ್ಯುತ್ ಪರಿಕರಗಳು ಇದ್ದು, ವಸತಿಗೃಹಗಳ ಅಂದವನ್ನು ಪಾಳುಗೈದಿವೆ. ಈ ಆವರಣದಲ್ಲಿ ಯಾವುದೊ ಕೊಳಕು ಲೋಕವೊಂದು ಸೃಷ್ಟಿಯಾದಂತೆ ಭಾಸವಾಗುತ್ತಿದೆ. ಸಂಬಂಧಪಟ್ಟವರು ಗಮನ ಹರಿಸಿ ಸಮಸ್ಯೆಗಳನ್ನು ಹೋಗಲಾಡಿಸಬೇಕಾಗಿದೆ.

      ವಸತಿಗೃಹಗಳು ಕೆಪಿಟಿಸಿಎಲ್ ವ್ಯಾಪ್ತಿಗೆ ಒಳಪಟ್ಟಿದ್ದು, ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವಂತೆ ಮತ್ತೊಮ್ಮೆ ಸಂಬಂಧಪಟ್ಟವರೊಂದಿಗೆ ಪತ್ರ ವ್ಯವಹಾರ ನಡೆಸಲಾಗುವುದು ಹಾಗೂ ಕೂಡಲೆ ವೈಯಕ್ತಿಕವಾಗಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.

-ಸೈಯದ್ ಮಹಮದ್, ಇಇ, ಬೆಸ್ಕಾಂ ಉಪವಿಭಾಗ, ಮಧುಗಿರಿ.

      ನೌಕರರು ವಾಸವಿರುವ ವಸತಿಗೃಹಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಹಲವಾರು ಬಾರಿ ಪತ್ರ ವ್ಯವಹಾರ ನಡೆಸಲಾಗಿದೆ. ಆದರೂ ಸಂಬಂಧಪಟ್ಟವರು ಇದೂವರೆವಿಗೂ ಈ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ.


-ಆರ್.ರಾಮಯ್ಯ, ಅಧ್ಯಕ್ಷರು, ಕೆಪಿಟಿಸಿಎಲ್ ನೌಕರ ಸಂಘ, ಮಧುಗಿರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap