ಮಧುಗಿರಿ :
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಜಯಮಂಗಲಿ ಕೃಷ್ಣಮೃಗ ವನ್ಯ ಧಾಮಕ್ಕೆ ಹೊಂದಿಕೊಂಡಿರುವ ಸ.ನಂ.ಜಮೀನುಗಳಲ್ಲಿನ ಹುಲ್ಲುಗಾವಲು ಪ್ರದೇಶಕ್ಕೆ ಭಾನುವಾರ ಅಗ್ನಿ ಅನಾಹುತ ಸಂಭವಿಸಿದೆ.
ಜಯಮಂಗಲಿ ಕೃಷ್ಣ ಮೃಗ ವನ್ಯಜೀವಿ ಧಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಕೃಷ್ಣ ಮೃಗಗಳು ವಾಸಿಸುತ್ತಿವೆ. ರಾಜ್ಯದ ಕೆಲವೇ ಕಡೆಗಳಲ್ಲಿ ಕಂಡು ಬರುವ ಅಪರೂಪದ ಪಕ್ಷಿ ಸಂಪತ್ತುಗಳನ್ನು ಇಲ್ಲಿ ಕಾಣಬಹುದಾಗಿದ್ದು, ದೇಶ ವಿದೇಶಗಳಿಂದ ವನ್ಯ ಪ್ರಾಣಿ ಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ. ಇಂತಹ ಪ್ರದೇಶದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ನೂರಾರು ಎಕರೆ ಹುಲ್ಲುಗಾವಲು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ಬೆಂಕಿಗಾಹುತಿಯಾಗಿರುವ ಪ್ರದೇಶವು ಕೃಷ್ಣ ಮೃಗಗಳು ವಿಹರಿಸುವ ಹುಲ್ಲುಗಾವಲಾಗಿದ್ದು, ಕೃಷ್ಣ ಮೃಗಗಳ ಜೀವಕ್ಕೆ ಆಪತ್ತುಂಟಾಗಿದೆ. ನೂರಾರು ಸಂಖ್ಯೆಯಲ್ಲಿ ಪಕ್ಷಿಗಳು, ಅವುಗಳ ಮೊಟ್ಟೆ, ಮರಿಗಳು ಸುಟ್ಟು ಕರಕಲಾಗಿವೆ. ಬೆಂಕಿಯ ಕೆನ್ನಾಲಿಗೆಯು ರಸ್ತೆಗೂ ವ್ಯಾಪಿಸಿದೆ. ಸ್ಥಳೀಯರು ಬೆಂಕಿಯನ್ನು ಗಮನಿಸಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರಾದರೂ ಗಂಟೆ ಕಳೆದರೂ ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದಿರಲಿಲ್ಲ. ಬದಲಾಗಿ ಅಗ್ನಿ ಶಾಮಕ ವಾಹನ ಕೆಟ್ಟು ನಿಂತಿದೆ ಎಂಬ ಉತ್ತರ ಬಂದಿತೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲ ಘಟನೆ ನಡೆದರೂ ಸಮೀಪದಲ್ಲಿ ಇರಬೇಕಾದ ಕೃಷ್ಣಮೃಗ ಧಾಮದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿರಲಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಈ ಘಟನೆಯಿಂದಾಗಿ ನೂರಾರು ಎಕರೆ ಹುಲ್ಲುಗಾವಲು ಪ್ರದೇಶ ಅಗ್ನಿಗಾಹುತಿಯಾಗಿದ್ದು, ನೂರಾರು ಬಗೆಯ ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿರಬಹುದೆಂದು ಪಕ್ಷಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
