ಮಧುಗಿರಿ : ಸ್ಟಾಕ್ ಇದ್ದೂ 24 ಗಂಟೆ ಸತಾಯಿಸಿ ಆ್ಯಕ್ಸಿಜನ್ ನೀಡಿಕೆ

 ಮಧುಗಿರಿ :

      ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಚಿಕಿತ್ಸಾ ಕೇಂದ್ರದಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡುತ್ತಾರೆ, ಆದರೆ ಸೋಂಕಿತರೊಬ್ಬರಿಗೆ ಆಕ್ಸಿಜನ್‍ಗಾಗಿ 24 ಗಂಟೆ ಕಾಯಿಸಿ, ನಂತರ ಆಕ್ಸಿಜನ್ ನೀಡಿರುವ ಘಟನೆ ಕಂಡು ಬಂದಿದೆ.

      ತಾಲ್ಲೂಕಿನ ಗರಣಿ ಗ್ರಾಮ ಲಂಬಾಣಿ ತಾಂಡದ ಸೋಂಕಿತ ಅಶ್ವತ್ಥ ಎಂಬುವವರು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ತೀವ್ರವಾಗಿ ನರಳಾಡುತ್ತಿದ್ದರೂ ಕೂಡ ವೈದ್ಯರು ಅವರ ಹತ್ತಿರ ಸುಳಿದಿಲ್ಲ ಎಂದು ಆರೋಪಿಸಲಾಗಿದ್ದು, ಅವರ ಪತ್ನಿ ನಾಗಮಣಿಗೆ ವೈದ್ಯರು ರೋಗಿಯನ್ನು ಬಿಡುಗಡೆ ಮಾಡುತ್ತೇವೆ, ಬೇರೆಡೆಗೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ. ನಂತರ ಸೋಂಕಿತ ವ್ಯಕ್ತಿ ಸಮಾಜ ಸೇವಕರಾಗಿದ್ದು, ಪತ್ರಕರ್ತರ ಗಮನಕ್ಕೆ ಈ ವಿಷಯವನ್ನು ತಿಳಿಸಿದ್ದಾರೆ.

      ಪತ್ರಕರ್ತರು ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ವಿಚಾರಿಸಿದರೆ ಆಕ್ಸಿಜನ್ ಕೊರತೆ ಇಲ್ಲ ಎಂಬ ಸಿದ್ಧ ಉತ್ತರ ನೀಡಿದರು. ಈ ಬಗ್ಗೆ ಕ್ರಾಸ್ ಚೆಕ್ ಮಾಡಿದಾಗ ಸೋಂಕಿತನಿಗೆ 24 ಗಂಟೆ ಮುಂಚೆಯೇ ಆಕ್ಸಿಜನ್ ಅವಶ್ಯಕತೆ ಇದ್ದರೂ ನೀಡಿರಲಿಲ್ಲ. ಮಂಗಳವಾರ ಮಧ್ಯಾಹ್ನ 1:30 ರಲ್ಲಿ ಸೋಂಕಿತನಿಗೆ ಆಕ್ಸಿಜನ್ ಒದಗಿಸಲಾಗಿದೆ. ಹಾಗಾದರೆ ಇತ್ತೀಚೆಗೆ ಶಾಸಕ ಎಂ.ವಿ.ವೀರಭದ್ರಯ್ಯನವರ ಹೇಳಿಕೆ ಸತ್ಯವೆ ಎಂಬ ಅನುಮಾನಗಳು ಮೂಡುತ್ತಿವೆ.

     ಸೋಮವಾರ ನಿರೀಕ್ಷಣಾ ಮಂದಿರದಲ್ಲಿ ತಾಲ್ಲೂಕಿನಲ್ಲಿ ಕೊರೋನಾ ವೈರಸ್ ಹರಡದಂತೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನೀಡಿದ ಮಾಹಿತಿ ಕೇವಲ ಅಂಕಿ ಅಂಶಗಳಿಗಷ್ಟೇ ಸೀಮಿತವಾಯಿತೆ? ಪತ್ರಕರ್ತರನ್ನು ದೂರವಿಟ್ಟು ಸಭೆ ನಡೆಸಿ ನಂತರ ಮಾಹಿತಿ ನೀಡಿದ್ದು ಪ್ರಚಾರಕ್ಕಾಗಿಯೆ ಎಂಬ ಸಂದೇಹಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸ್ಯಾನಿಟೈಸಿಂಗ್ : ಪುರಸಭಾ ವ್ಯಾಪ್ತಿಯ ಹೆಚ್ಚು ಜನಸಾಂದ್ರತೆ ಇರುವ ಜಾಗಗಳಾದ ಖಾಸಗಿ ಬಸ್ ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್ ಮುಂಭಾಗದಲಿ ಪುರಸಭೆ ಮತ್ತು ಅಗ್ನಿಶಾಮಕ ದಳದ ವತಿಯಿಂದ ನಾಲ್ಕು ಸಾವಿರ ಲೀಟರ್ ಸ್ಯಾನಿಟೈಸಿಂಗ್ ಮಾಡಲಾಗಿದೆ.

ಕೋವಿಡ್ ಕೇರ್ ಸೆಂಟರ್‍ಗೆ ಸಿದ್ದತೆ :

      ಪಟ್ಟಣದ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಸರ್ಕಾರಿ ಹಾಸ್ಟೆಲ್‍ನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸ್ಮೈಲ್ ಪ್ಲೀಸ್ ! :

      ದಿನ ಬೆಳಗ್ಗೆ ಎದ್ದರೆ ಇವರ ಎದುರುು ನಿಂತು ಸ್ವಲ್ಪ ಕ್ಯಾಮರಾ ನೋಡಿ ಸಿಎಂ ಸರ್, ಮಿನಿಸ್ಟರ್ ಅಂತ ಹೇಳಿ ಇವರಿಗೆ ಪ್ರಚಾರ ಕೊಟ್ಟು ಇವರನ್ನು ನಾವು ಬೆಳುಸ್ತೀವಿ. ಈ ಹೊತ್ತು ನಾವು ಸತತವಾಗಿ 2ನೇ ವರ್ಷ ದರಿದ್ರ ಕೊರೋನ ದಿಂದ ಕಷ್ಟದಲ್ಲಿ ಇದ್ದೀವಿ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಕ್ಯಾಮರಾಗೆ ಬಂಡವಾಳ ಹಾಕಿದ್ದೀವಿ. ಇಎಂಐ ಕಟ್ಟೋಕೆ ಅಂತಾ ಸಿಗೋದು ಮಾರ್ಚ್, ಏಪ್ರಿಲ್, ಮೇ 3 ತಿಂಗಳು ಮಾತ್ರ. ಆದ್ರೆ ಈ ಹೆಮ್ಮಾರಿ ಇದನ್ನು ಕಸಿದುಕೊಂಡಿದ್ದು, ನಮ್ಮಗಳ ಪಾಡು ಅತಂತ್ರ ಸ್ಥಿತಿ ತಲುಪಿದೆ.

      ಬದುಕು ಮೂರಾಬಟ್ಟೆ ಆಗಿದೆ. ನಿಮ್ಮ ಎದುರೆ ಇದ್ದರೂ ನಿಮ್ಮ ಕಣ್ಣು ಕಾಣುತ್ತಿಲ್ಲ. ನಿಮ್ಮ ಕಿವಿ ಕೇಳುತಿಲ್ಲ. ಯಾಹೊತ್ತೂ ಕೈ ಚಾಚಿ ಬೇಡಿಲ್ಲ. ನಮ್ಮ ವೃತ್ತಿಬಾಂಧವರ ಪರಿಸ್ಥಿತಿ ಕೈ ಮೀರಿ ಹೋಗಿದೆ.

       ಇಲ್ಲಿ ಎಲ್ಲಾ ಜಾತಿಯ ಜನರಿದ್ದೇವೆ. ಬದುಕು ಮುಂದುವರಿಸಲು ಸರ್ಕಾರದಿಂದ ನಮ್ಮ ಫೋಟೋ ಮತ್ತು ವೀಡಿಯೋಗ್ರಾಫರ್ಸ್‍ಗೆ ಅನುಕೂಲ ಮಾಡಿಕೊಡಿ ಎಂದು ತಾಲ್ಲೂಕು ಸ್ಟೂಡಿಯೋ ಮಾಲೀಕರ ಸಂಘದವರು ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಕೊರೋನ ಕೊರೋನ ಕುರಿತು :

      ಜಿಂಕೆಯ ಓಡುವ ವೇಗ ಪ್ರತಿ ಘಂಟೆಗೆ 90 ಕಿಲೋಮೀಟರ್, ಆದೇ ಹುಲಿ ಓಡುವ ವೇಗ ಪ್ರತಿ ಘಂಟೆಗೆ 60 ಕಿಲೋಮೀಟರ್. ಆದರೂ ಜಿಂಕೆಯನ್ನು ಹುಲಿ ತನ್ನ ಆಹಾರಕ್ಕಾಗಿ ಬೇಟೆಯಾಡಿ ಕೊಂದು ಹಾಕುತ್ತದೆ. ಜಿಂಕೆ ತಾನು ಹುಲಿಗಿಂತ ವೇಗವಾಗಿ ಓಡಿದರೂ ಕೂಡ ಹುಲಿಯ ಆಹಾರಕ್ಕಾಗಿ ಬಲಿಯಾಗುತ್ತದೆ. ಯಾಕೆಂದರೆ ಜಿಂಕೆಯ ಮನಸ್ಸಿನಲ್ಲಿ ತನಗಿಂತ ಹುಲಿಯ ಶಕ್ತಿಯೇ ಹೆಚ್ಚು ಅನ್ನುವ ಭಯ ತುಂಬಿರುತ್ತೆ. ಆ ಕಾರಣಕ್ಕಾಗಿಯೇ ಜಿಂಕೆ ತಾನು ಹುಲಿಯಿಂದ ತಪ್ಪಿಸಿಕೊಳ್ಳಲು ಓಡುವಾಗ ಹಿಂದೆ ಹಿಂದೆ ತಿರುಗಿ ಹುಲಿಯನ್ನು ನೋಡುತ್ತಿರುತ್ತದೆ. ನಂತರ ಹುಲಿಗೆ ಬಲಿಯಾಗುತ್ತದೆ.

      ಕೊರೋನವೆಂಬ ಮಹಾಮಾರಿಯೂ ಹಾಗೇನೆ. ನಮ್ಮ ಶರೀರದೊಳಗೆ ಸಾಕಷ್ಟು ಇಮ್ಯೂನಿಟಿ ಪವರ್ ಇದ್ದರೂ ಕೂಡ ಭಯದಿಂದ ಕೊರೋನಾಕ್ಕೆ ಕೆಲವರು ಬಲಿಯಾಗುತ್ತಾರೆ. ಅಯ್ಯೋ ಮುಂದೇನಾಗುತ್ತದೋ ಅನ್ನುವ ಭಯ ನಮ್ಮ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಇನ್ನೂ ಸಾರ್ವಜನಿಕರೆ ನೀವು ಅನಾರೋಗ್ಯ ಪೀಡಿತರಾದಾಗ ಆಸ್ಪತ್ರೆಯಲ್ಲಿ ಬೆಡ್, ಐಸಿಯು ವಾರ್ಡ್, ಆಕ್ಸಿಜನ್, ವೆಂಟಿಲೆಟರ್ ಸಿಕ್ಕಿಲ್ಲವೆಂದು ವೈದ್ಯರೊಂದಿಗೆ ಗಲಾಟೆ, ಹೋರಾಟ ಮಾಡಬೇಡಿ, ಯಾಕೆಂದರೆ ನೀವು ಆರೋಗ್ಯವಾಗಿದ್ದಾಗ ಹೋರಾಟ ಮಾಡಿದ್ದು ಮಸೀದಿ, ಮಂದಿರ, ಚರ್ಚ್, ಜಾತಿ ಮೀಸಲಾತಿ ಮುಂತಾದವುಗಳಿಗಾಗಿಯೆ ಹೊರತು ಆಸ್ಪತ್ರೆ, ಶಾಲೆ, ಕಾಲೇಜುಗಳಿಗಾಗಿ ಅಲ್ಲ ಮುಂತಾಗಿ, ರಾಜ್ಯ ಕೇಂದ್ರ ಸರ್ಕಾರಗಳ ವಿರುದ್ಧ ಸಾರ್ವಜನಿಕರಿಂದ ಆರೋಪಗಳ ಸುರಿಮಳೆ ಹಾಗೂ ದೊರೆಯ ಬಹುದಾದಂತಹ ಸೌಲಭ್ಯಗಳ ಕೊರತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವರು ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವುದನ್ನು ಪ್ರಸ್ತುತ ಸಾಮಾಜಿಕ ಜಾಲ ತಾಣಗಳಲ್ಲಿ ಕಾಣಬಹುದಾಗಿದೆ.

      ಕಳೆದ ಒಂದು ವಾರದಿಂದ ಶತಕ ದಾಟುತ್ತಿದ್ದ ಕೊರೊನಾ ಸೊಂಕಿತರ ಪ್ರಮಾಣದಲ್ಲಿ ಲಾಕ್‍ಡೌನ್‍ನಿಂದಾಗಿ ಸ್ವಲ್ಪ ಇಳಿಮುಖವಾಗುತ್ತಿದ್ದು, ಪ್ರತಿ ನಿತ್ಯ ಸೋಂಕಿತರ ಪ್ರಮಾಣ ಕುರಿತು ಮಾಹಿತಿಗಳನ್ನು ಕೇಳಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ರಾತ್ರಿ ಚೆನ್ನಾಗಿದ್ದ ವ್ಯಕ್ತಿ ಬೆಳಗ್ಗೆಯೇ ಮೃತ ಪಡುತ್ತಿರುವಂತಹ ಸಂಗತಿಗಳಿಂದ ಕೆಲವರು ವಿಚಲಿತರಾಗುತ್ತಿದ್ದಾರೆ. ಇನ್ನೂ ತಾಲ್ಲೂಕಿನ ಕೆಲ ಜನ ಪತ್ರಿನಿಧಿಗಳು ಆಸ್ಪತ್ರೆಯ ಬಳಿಯೆ ತೆರಳುತ್ತಿಲ್ಲ. ವಾಸ್ತವ ಸ್ಥಿತಿಗತಿಗಳನ್ನು ನೋಡುತ್ತಿಲ್ಲ. ತಮಗೆ ಮತ ನೀಡಿದ ಮತದಾರರ ಕಷ್ಟ ಸುಖಗಳನ್ನು ಕೇಳುತ್ತಿಲ್ಲ. ಕೇವಲ ಅಧಿಕಾರಿಗಳು ನೀಡುವ ಮಾಹಿತಿಗಳಿಂದ ಸಂತೃಪ್ತಿ ಪಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಅಧಿಕಾರಿಗಳು, ಹೇಳುವುದು ಒಂದು-ಮಾಡುವುದು ಇನ್ನೊಂದು ಎಂಬಂತಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

      ಕೊರೊನಾ ಇದೆಯೊ ಇಲ್ಲವೊ ಗೊತ್ತಿಲ್ಲ, ಭೂ ತಾಯಿಯು ಹೆಚ್ಚಾಗುತ್ತಿರುವ ಜನಸಂಖ್ಯೆಯ ಭಾರವನ್ನು ತಾಳಲಾಗುತ್ತಿಲ್ಲ. ಈ ಹಿಂದೆ ಕಂಡಂತಹ ಕಾಲರಾ, ಪ್ಲೇಗಿಗಿನ್ನ ಭಯಂಕರವಾಗುತ್ತಿದೆ ಈ ಮಹಾಮಾರಿ. ಒಟ್ಟಾರೆ ಕಳೆದ ವರ್ಷದಿಂದ ಇಲ್ಲಿಯ ವರೆವಿಗೂ ಸಾಮಾನ್ಯ ಜನರ ಜೀವನ ದುಸ್ತರವಾಗಿದ್ದು, ಸರಕಾರ ಸಹಾಯ ಹಸ್ತ ಚಾಚುತ್ತದೆಯೊ ಕೈ ಚೆಲ್ಲಿ ಕೂರುತ್ತದೆಯೊ ಎಂಬುದೆ ತಿಳಿಯಲಾಗುತ್ತಿಲ್ಲ. ಕೊರೊನಾ ವಿರುದ್ಧ ಹೋರಾಟದ ಅನಿವಾರ್ಯತೆ ಎದುರಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link