ಮಧುಗಿರಿ :
ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ಬಾಡಿಗೆ ಕರಾರು ಅವಧಿ ಮುಗಿದು ಮರು ಹರಾಜಿನಲ್ಲಿ ರೋಸ್ಟರ್ ಪದ್ಧತಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಡಿಗೆದಾರರಿಗೆ ಅವಕಾಶ ಕಲ್ಪಿಸಿಕೊಡುವಂತೆ ಹೈಕೋರ್ಟ್‍ನಲ್ಲಿ ಆದೇಶವಾಗಿ ಒಂದೂವರೆ ವರ್ಷದ ನಂತರ ಬುಧವಾರದಂದು ಪುರಸಭೆಯ ಮುಖ್ಯಾಧಿಕಾರಿಗಳ ತಂಡ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ನಲ್ವತ್ತೆಂಟು ಅಂಗಡಿಗಳಿಗೆ ಪುರಸಭೆಯು ಬೀಗ ಜಡಿದು ಕ್ರಮ ಕೈಗೊಂಡ ಘಟನೆ ನಡೆಯಿತು.
ಡೂಂಲೈಟ್ ವೃತ್ತ, ಟೌನ್ ಹಾಲ್ ರಸ್ತೆ, ಐಡಿಎಸ್‍ಎಂಸಿ ಯೋಜನೆಯಡಿಯಲ್ಲಿ ನಿರ್ಮಿಸಲಾಗಿರುವ ತರಕಾರಿ ಮಾರುಕಟ್ಟೆ, ಹೈಸ್ಕೂಲ್ ರಸ್ತೆ, ಖಾಸಗಿ ಬಸ್ ನಿಲ್ದಾಣ, ಟಿವಿವಿ ವೃತ್ತ, ನೃಪತುಂಗ ವೃತ್ತದ ಸಮೀಪ ಒಟ್ಟು ನೂರ ಹನ್ನೊಂದು ವಾಣಿಜ್ಯ ಮಳಿಗೆಗಳು ಇವೆ. ಅದರಲ್ಲಿ ನಲವತ್ತೆಂಟು ಅಂಗಡಿಗಳಿಗೆ ಪುರಸಭೆಯ ವತಿಯಿಂದ ಹಾಗೂ ಅಂಗಡಿ ಮಾಲೀಕರ ವತಿಯಿಂದ ತಲಾ ಒಂದೊಂದು ಬೀಗ ಹಾಕಿ ಸೀಲ್ ಮಾಡಲಾಯಿತು. ಈ ಸಂದರ್ಭದಲ್ಲಿ ಯಾವೊಬ್ಬ ಅಂಗಡಿ ಮಾಲೀಕರೂ ಪುರಸಭೆಯ ಕ್ರಮಕ್ಕೆ ವಿರೋಧ ವ್ಯಕ್ತ ಪಡಿಸಲಿಲ್ಲ ಹಾಗೂ ಅಧಿಕಾರಿಗಳಿಗೆ ಅಂಗಡಿ ಮಾಲೀಕರು ಸಹಕಾರ ನೀಡಿದ ದೃಶ್ಯಗಳು ಕಂಡು ಬಂದವು.
ಉಳಿದ ಮೂವತ್ತೆರಡು ಅಂಗಡಿಗಳ ಬಾಡಿಗೆದಾರರು ಇತ್ತೀಚೆಗೆ ಪುರಸಭೆಯ ವತಿಯಿಂದ ನೀಡಿದ ನೋಟಿಸ್ ಪ್ರತಿಗಳ ಆಧಾರದ ಮೇಲೆ ಮೇಲೆ ನ್ಯಾಯಾಲಯದಿಂದ ಯಥಾಸ್ಥಿತಿ ತಡೆಯಾಜ್ಞೆ ತಂದಿದ್ದಾರೆಂದು, ಇನ್ನುಳಿದಂತೆ ಮೂವತ್ತೊಂದು ಮಳಿಗೆಯವರು ಬಾಡಿಗೆಯನ್ನು ಸೂಕ್ತ ಸಮಯದಲ್ಲಿ ಬಾಡಿಗೆ ಕಟ್ಟಿದ್ದಾರೆಂಬ ಮಾಹಿತಿಯಿಂದಾಗಿ ಅಂಗಡಿಗಳಿಗೆ ಬೀಗ ಹಾಕಲಿಲ್ಲ. ಬಲಾಢ್ಯರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು, ತಡೆಯಾಜ್ಞೆ ತರಲು ಪುರಸಭೆಯಲ್ಲಿನ ಕೆಲ ಅಧಿಕಾರಿಗಳು ಮತ್ತು ಕೆಲ ಪುರಸಭಾ ಸದಸ್ಯರು ಬೆಂಬಲಿಸಿದ್ದಾರೆನ್ನಲಾಗಿದೆ.
ಸೀಲ್ ಮಾಡಿರುವ ಅಂಗಡಿಗಳ ಮಾಲೀಕರು ಖುದ್ದಾಗಿ ಬಂದು ಅಂಗಡಿ ಖಾಲಿ ಮಾಡುತ್ತೇವೆ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟರೆ ಅಂಗಡಿಗಳಲ್ಲಿನ ಸಾಮಾನು ಸರಂಜಾಮುಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗುವುದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಹೇಳಿದ್ದುಂಟು. ಈಗ ನೀಡಿರುವ ತಡೆಯಾಜ್ಞೆಯು ಬಹಳ ದಿನಗಳವರೆಗೆ ಇರುವುದಿಲ್ಲವೆಂದು ಮುಂದಾದರೂ ಪುರಸಭೆಗೆ ಸೇರಿದ ಅವಧಿ ಮೀರಿದ ಅಂಗಡಿ ಮಳಿಗೆಗಳನ್ನು ಅಧಿಕಾರಿಗಳು ತೆರವುಗೊಳಿಸುತ್ತಾರೆ ಮತ್ತೆ ಹರಾಜು ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದವು.
ಈ ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ ಹಾಗೂ ತಂಡ ಮತ್ತು ಪೊಲಿಸ್ ಇಲಾಖೆಯ ವೃತ್ತ ನಿರೀಕ್ಷಕ ಎಂ.ಎಸ್.ಸರ್ದಾರ್, ಬಡವನಹಳ್ಳಿ ಪಿಐ ಹನುಮಂತರಾಯಪ್ಪ, ಕೊಡಿಗೇನಹಳ್ಳಿ ಪಿಎಸ್‍ಐ ಫಾಲಾಕ್ಷ ಪ್ರಭು, ಮಧುಗಿರಿ ಪಿಎಸ್‍ಐ ಮಂಗಳಗೌರಮ್ಮ, ಮಿಡಿಗೇಶಿ ಪಿಎಸ್‍ಐ ಹನುಮಂತರಾಯಪ್ಪ ಹಾಗೂ ಪೊಲೀಸರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ