ತುಮಕೂರು :
ನಗರದ 22ನೇ ವಾರ್ಡಿನ ವ್ಯಾಪ್ತಿಗೆ ಒಳಪಡುವ ಬಿ.ಹೆಚ್. ರಸ್ತೆಯ ವಾಲ್ಮೀಕಿ ನಗರ ಬಡಾವಣೆಯ ಮುಖ್ಯ ದ್ವಾರದ ಸಮೀಪ ಮುಖ್ಯ ರಸ್ತೆಗೆ ಒತ್ತುವರಿಯಾಗಿದ್ದು, ಈ ಪ್ರದೇಶವನ್ನು ತುಮಕೂರು ಮಹಾನಗರಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ವತಿಯಿಂದ ತೆರವುಗೊಳಿಸುವ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಮಹಾನಗರಪಾಲಿಕೆಯ ಆಯುಕ್ತರಾದ ರೇಣುಕಾರವರು, ನಗರದ ಬಿ.ಎಚ್. ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಪುಟ್ಬಾತ್ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಈ ಭಾಗದಲ್ಲಿ ಕೆಲವರು ಒತ್ತುವರಿಯಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡು ಹಣ್ಣು, ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ, ಇಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಕೊಳ್ಳಲು ಬರುವ ಗ್ರಾಹಕರು ರಸ್ತೆಗೆ ಹೊಂದಿಕೊಂಡಂತೆ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಜೊತೆಗೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕೂಡ ನಡೆಯುತ್ತಿವೆ ಹೀಗಾಗಿ ಒತ್ತುವರಿಯಾದ ಪ್ರದೇಶವನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇದಕ್ಕೆ ಸ್ಥಳೀಯ ಸಾರ್ವಜನಿಕರು ತುಮಕೂರು ಮಹಾನಗರ ಪಾಲಿಕೆಗೆ ಒತ್ತುವರಿಯಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯನ್ನು ಮಾಡಿದ್ದರು. ಈ ವೇಳೆ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪಾಲಿಕೆ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಒತ್ತುವರಿಯಾಗಿರುವ ಭಾಗಕ್ಕೆ ಮಾರ್ಕ್ ಮಾಡಿದ್ದಾರೆ ಎಂದರು.
ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿದವರಿಗೆ ಯಾವುದೇ ರೀತಿಯಾದಂತಹ ಸೂಚನೆ ನೀಡದೆ ತೆರವುಗೊಳಿಸುವ ಅಧಿಕಾರವನ್ನು ಕಾನೂನು ನಮಗೆ ನೀಡಿದ, ಹೀಗಾಗಿ ನೇರವಾಗಿ ತೆರವುಗೊಳಿಸಲು ಮುಂದಾಗಿದ್ದೇವೆ, ಇದಕ್ಕೆ ಯಾರು ಅಡ್ಡಿಪಡಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಇನ್ನು ಒತ್ತುವರಿ ಮಾಡಿದ ಅಂಡಿಗಳ ತೆರವಿಗೆ ಒಂದು ಗಂಟೆಯ ಸಮಯಾವಕಾಶವನ್ನು ನೀಡಿದ್ದು ಅಷ್ಟರಲ್ಲಿ ತಮ್ಮ ವಸ್ತುಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾಗಿ ಹೇಳಿದರು.
ಇನ್ನು ಈ ವೇಳೆ 22 ನೇ ವಾರ್ಡಿನ ಕಾರ್ಪೋ ರೇಟರ್ ಶ್ರೀನಿವಾಸ್ ಮೂರ್ತಿ ಮಾತನಾಡಿ, ನನ್ನ ವಾರ್ಡಿನ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಒಂದು ಸರ್ವಿಸ್ ರಸ್ತೆ ಇರಲಿಲ್ಲ, ಪಾರ್ಕಿಂಗ್ ರಸ್ತೆ ಇರಲಿಲ್ಲ, ನಮ್ಮ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಎಷ್ಟು ಪ್ರದೇಶ ಎನ್‍ಕ್ರೋಚ್ ಆಗಿದೆಯೋ ಅಷ್ಟು ಪ್ರದೇಶವನ್ನು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದೆವು ಎಂದರು.
ಇಂದು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿಯಾಗಿರುವ ಅಂಗಡಿಗಳ ಮಾಲೀಕರಿಗೆ ಸೂಚನೆಯನ್ನು ನೀಡಲಾಗಿದೆ. ಕಳೆದ ಒಂದು ವಾರಗಳ ಹಿಂದೆ ಇವರಿಗೆ ವಾರ್ನಿಂಗ್ ನೀಡಲಾಗಿತ್ತು, ಆದರೆ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೂಡ ಮನವಿಯನ್ನು ನೀಡಿದ್ದೆವು ಎಂದು ತಿಳಿಸಿದರು.
ನಮಗೆ ಸರ್ವಿಸ್ ರಸ್ತೆ, ಪಾರ್ಕಿಂಗ್ ವ್ಯವಸ್ಥೆ, ವಾಕಿಂಗ್ ಪಾತ್ ವೇ ವ್ಯವಸ್ಥೆ ಮಾಡಿಕೊಡಬೇಕಿದೆ, ಇನ್ನೂ ನಮ್ಮ ವ್ಯಾಪ್ತಿಯಲ್ಲಿ ಸುಮಾರು 20 ರಿಂದ 25 ಅಂಗಡಿಗಳು ಒತ್ತುವರಿಯಾಗಿವೆ. ಸೂಕ್ತ ದಾಖಲೆಯ ಪರಿಶೀಲನೆ ನಡೆಸಿ, ಎಷ್ಟು ಒತ್ತುವರಿಯಾಗಿದೆಯೋ ಅಲ್ಲಿ ಮಾರ್ಕ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರಾದ ಪ್ರಕಾಶ್ ಅವರು, ಈ ಒತ್ತುವರಿ ಕಾರ್ಯ ಸಾರ್ವಜನಿಕ ಆಸ್ತಿಯನ್ನು ಸಾರ್ವಜನಿಕರ ಸದುದ್ದೇಶಕ್ಕೆ ಬಳಸುವಂತಹ ಉದ್ದೇಶವೇ ಹೊರತು ಯಾರ ವಿರುದ್ಧವೂ ಅಲ್ಲ. ರಸ್ತೆಯ ಸೂಕ್ತ ಅಳತೆ ಮಾಡಿಸಿ ಒಂದುವೇಳೆ ಅತಿಕ್ರಮ ಪ್ರವೇಶ ಮಾಡಿದರೆ ಅದನ್ನು ಸೂಕ್ತ ರೀತಿಯಲ್ಲಿ ತೆರವುಗೊಳಿಸಿ ಮುಂದಿನ ಸಾರ್ವಜನಿಕ ಹಿತಾಸಕ್ತಿಯಿಂದ ಅನುಕೂಲ ಮಾಡಿಕೊಡಬೇಕು ಎನ್ನುವುದು ನಮ್ಮೆಲ್ಲ ನಾಗರಿಕರ ಆಗ್ರಹ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯರು ನಾಗರಿಕರು ಜಮಾಯಿಸಿದ್ದು, ಇನ್ನು ಅಂಗಡಿ ಬಳಕೆ ಮಾಡುತ್ತಿರುವವರು ಮಾಲೀಕರು ಬರುತ್ತಾರೆ, ಒಂದೆರಡು ದಿನ ಸಮಯಾವಕಾಶ ಕೊಡಿ ಎಂದು ಮನವಿ ಮಾಡುತ್ತಿರುವುದು ಕೂಡ ಕಂಡುಬಂದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
