‘ವಾರದೊಳಗೆ ಸೋಂಕು ಶೇ.5ಕ್ಕೆ ಇಳಿಸಿ’ – ಸಂಸದ ಜಿ.ಎಸ್. ಬಸವರಾಜು

 ಮಧುಗಿರಿ :

     ತಾಲ್ಲೂಕಿನಲ್ಲಿ ಇನ್ನೊಂದು ವಾರದೊಳಗೆ ಕೊರೋನಾ ಸೋಂಕಿತರ ಸಂಖ್ಯೆ ಶೇಕಡ 5ರಷ್ಟು ಇರಬೇಕು. ಇದಕ್ಕಾಗಿ ತಾಲ್ಲೂಕು ಆಡಳಿತ ಮತ್ತು ಪಿಡಿಓಗಳು, ಇತರೆ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಶ್ರಮ ವಹಿಸಿ ಕೆಲಸ ಮಾಡಬೇಕೆಂದು ಸಂಸದ ಜಿ.ಎಸ್. ಬಸವರಾಜು ತಿಳಿಸಿದರು.

      ಸೋಮವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ, ಪಿಡಿಓಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಲ್ಲಿಯವರೆಗೆ ಹಗಳಿರುಳು ಶ್ರಮ ವಹಿದ ಎಲ್ಲಾ ಅಧಿಕಾರಿಗಳು, ವ್ಯೆದ್ಯರು, ಅಂಗನವಾಡಿ, ಆಶಾ ಕಾರ್ಯಕರ್ತರು, ಪಿಡಿಓಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಕೊರೋನಾ ಪರೀಕ್ಷೆ ನಡೆಸಿದ ಬಳಿಕ ಸೋಂಕಿತನನ್ನು ಬೇಗ ಪತ್ತೆ ಹಚ್ಚುತ್ತೀರಿ. ಆರ್‍ಟಿಪಿಸಿಆರ್ ನೆಗೆಟಿವ್ ಬಂದವರ ವರದಿ ತಡವಾಗಿ ಬರುತ್ತಿರುವುದರಿಂದ ಆತಂಕ ಹೆಚ್ಚಾಗುತ್ತಿದ್ದು, ಬೇಗ ವರದಿ ನೀಡಿದರೆ ಸಾರ್ವಜನಿಕರು ನಿರಾಳರಾಗುತ್ತಾರೆ. ಸೋಂಕಿತರು ಪತ್ತೆಯಾದ ತಕ್ಷಣ ಆಶಾ ಕಾರ್ಯಕರ್ತರು ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಬೇಕು. ಇವರಿಗೆ ಪೊಲೀಸರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಲಸಿಕೆ ಬಗ್ಗೆ ಅಪಪ್ರಚಾರ ಬೇಡ :

      ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ, ಟಾಸ್ಕ್‍ಫೋರ್ಸ್ ಸಭೆಗಳನ್ನು ನಿರಂತರವಾಗಿ ಮಾಡಿ, ಸೋಂಕಿತರು ಹೆಚ್ಚಿರುವ ಗ್ರಾಮಗಳಲ್ಲಿ ಆಯೋಜಿಸಿದರೆ ಒಳಿತು. ಲಾಕ್‍ಡೌನ್‍ನಿಂದಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಇದನ್ನು ಶೇ. ಝ್ಹೀರೊಗೆ ತರಲು ಎಲ್ಲರೂ ಪ್ರಯತ್ನ ಮಾಡಬೇಕು. ಲಸಿಕೆ ಬಗ್ಗೆ ಇದು ಮೋದಿ ಸಿದ್ಧಪಡಿಸಿದ ಡಿಸ್ಟಿಲ್ ವಾಟರ್ ಎಂದು ವಿಪಕ್ಷಗಳು ಅಪಪ್ರಚಾರ ಮಾಡಿದ ಫಲ 35 ಲಕ್ಷದಷ್ಟು ಲಸಿಕೆ ಆಫ್ರಿಕಾಕ್ಕೆ ಕಳುಹಿಸಿಕೊಡಲಾಗಿತ್ತು. ದಕ್ಷಿಣ ಭಾರತದಲ್ಲೇ ಕರ್ನಾಟಕದಲ್ಲಿಯೇ ಲಸಿಕೆ ಹೆಚ್ಚು ಹಾಕಿರುವುದು. ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರು ಕರ್ನಾಟಕಕ್ಕೆ ಲಸಿಕೆ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆಂದು ಹೇಳಿಕೆ ನೀಡುತ್ತಿರುವುದು ಸತ್ಯಕ್ಕೆ ದೂರವಾದ ವಿಚಾರವೆಂದರು.

      ಮಧುಗಿರಿ ನನಗೆ ರಾಜಕೀಯ ಪುನರ್ಜನ್ಮ ನೀಡಿದ ತಾಲ್ಲೂಕು ಎಂದೆಂದಿಗೂ ಮರೆಯುವುದಿಲ್ಲ. ಕೇಂದ್ರ ಸರ್ಕಾರದ ಆರ್‍ಡಿಪಿಆರ್ ಇಲಾಖೆಯ ಮೂಲಕ ಮತ್ತಿತರ ಇಲಾಖೆಯ ಮೂಲಕ ‘ಜಲ ಜೀವನ್ ಮಿಷನ್’ ಎಂಬ ಹೊಸ ಯೋಜನೆ ಮಂಜೂರಾತಿಗೆ ಸಿದ್ಧವಾಗಿದ್ದು, ಈ ಯೋಜನೆ ಜಾರಿಯಾದರೆ ಮಧುಗಿರಿ ತಾಲ್ಲೂಕಿನಲ್ಲಿರುವ ಪ್ರತಿಯೊಂದು ಮನೆಮನೆಗೂನಲ್ಲಿ ನೀರು ಸಂಪರ್ಕ ಮತ್ತು ಸಮೀಪದ ಕೆರೆಗಳು ತುಂಬಲಿವೆ. ನನ್ನ ಲೋಕಸಭಾ ವ್ಯಾಪ್ತಿಯಲ್ಲಿ ಅತಿ ಕಡು ಬಡವರು ವಾಸವಿರುವ ಕ್ಷೇತ್ರ ಮಧುಗಿರಿಯಾಗಿದ್ದು, ಇಲ್ಲಿ ನೀರಾವರಿಯ ಕೊರತೆ ಕಾಣುತ್ತಿದೆ. ನೇತ್ರಾವತಿ ಎರಡನೆ ತಿರುವಿನ ಯೋಜನೆ ಜಾರಿಗೊಳಿಸಿ ಗೂಬಲಗುಟ್ಟೆ ಮತ್ತು ತಿಮ್ಮನಹಳ್ಳಿ ಕೆರೆಗೆ ನೀರನ್ನು ತಂದರೆ, ತಾಲ್ಲೂಕು ನೀರಾವರಿಯಿಂದ ಸಮೃದ್ಧಿಯಾಗಲಿದೆ. ಈಗ ಬಹುತೇಕ ಬಳ್ಳಾರಿ ಜಾಲಿ ಗಿಡಗಳು ಎಲ್ಲಾ ಜಮೀನುಗಳಲ್ಲಿ ಬೆಳೆದಿದ್ದು, ಸರ್ಕಾರ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಅವನ್ನು ತೆರವು ಮಾಡಿಸಲು ವಿಶೇಷ ಯೋಜನೆ ಮಾಡಬೇಕಾಗಿದೆ. ಜೂನ್ ಒಂದರಿಂದ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಕೆರೆಗೆ ಹೇಮಾವತಿ ನೀರನ್ನು ಹರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ಯೋಜನೆ ಜಾರಿಗೆ ಬಂದರೂ ಮಧುಗಿರಿಗೆ ಪ್ರಥಮ ಆದ್ಯತೆ ನೀಡುತ್ತಿದ್ದೇನೆ. ಸಂಸದನಾಗಿ ಆಯ್ಕೆಯಾದ ಎರಡು ವರ್ಷಗಳಲ್ಲಿ ನಾನು ಸಂಸತ್ತು ಪ್ರವೇಶಿಸಿದ್ದು ಕೇವಲ ಒಂದೂವರೆ ತಿಂಗಳು ಮಾತ್ರ, ಉಳಿದ ದಿನಗಳನ್ನು ಕೊರೋನಾ ಕಸಿದಿದೆ ಎಂದರು.

 ಮಧುಗಿರಿ ಆಸ್ಪತ್ರೆ ಮೇಲ್ದರ್ಜೆಗೆ:

      ಇತ್ತೀಚೆಗೆ ರಾಜ್ಯದ ಆರೋಗ್ಯ ಸಚಿವರು ತುಮಕೂರಿಗೆ ಭೇಟಿ ನೀಡಿದಾಗ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ 0.5ಕೆ ಯೂನಿಟ್‍ನ ಆ್ಯಕ್ಸಿಜನ್ ಆಸ್ಪತ್ರೆಯಲ್ಲೇ ತಯಾರಿಸುವ ಒಂದು ಘಟಕ ಮಂಜೂರು ಮಾಡಲಾಗಿದೆ. ಇದು ಜಾರಿಗೊಂಡರೆ ಗರ್ಭಿಣಿ ಮತ್ತು ಅಪಘಾತ ಮತ್ತಿತರ ಶಸ್ತ್ರಚಿಕಿತ್ಸೆಗಳು ಇಲ್ಲೆ ಮಾಡಬಹುದಾಗಿದೆ. ಶಾಸಕ ಎಂ ವಿ ವೀರಭದ್ರಯ್ಯ ಯಾರದೋ ಮಾತು ಕೇಳಿ ಬೆಂಗಳೂರಿನಲ್ಲಿ ಕುಳಿತುಕೊಂಡು ಮಧುಗಿರಿ ಕೆರೆಗೆ ಹೇಮಾವತಿ ನೀರು ಬಿಡುವ ಮೋಟಾರ್‍ಗಳನ್ನು ಕದ್ದಿದ್ದಾರೆ ಎಂಬ ಹೇಳಿಕೆ ನೀಡಿದ್ದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಪಿಡಿಓಗಳು ಕೇಂದ್ರ ಸ್ಥಾನದಲ್ಲಿರುವುದಿಲ್ಲವೆಂಬ ದೂರುಗಳು ಕೇಳಿ ಬರುತ್ತಿದ್ದು, ತುಮಕೂರು ಮತ್ತು ಬೆಂಗಳೂರಿನಿಂದ ಆಗಮಿಸುತ್ತಿದ್ದಾರೆ. ಜನರೆ ಇವರ ಸಹಿಗಾಗಿ ಇವರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನಿಷ್ಠ ಇನ್ನು ಮುಂದಾದರೂ ತಾಲ್ಲೂಕು ಕೇಂದ್ರಗಳಲ್ಲಿ ವಾಸ ಮಾಡಿ ಗ್ರಾಮೀಣ ಜನತೆಯ ಕಷ್ಟಕ್ಕೆ ಸ್ಪಂದಿಸುವಂತೆ ಸೂಚಿಸಿದರು.

      ಸಿದ್ದಾಪುರ ಗ್ರಾಪಂ ಅಧ್ಯಕ್ಷ ವೀರಣ್ಣ ಮಾತನಾಡಿ, ಕೊರೊನಾ ಸೋಂಕು ಹರಡದಂತೆ ಟಾಸ್ಕ್‍ಫೋರ್ಸ್‍ನಲ್ಲಿರುವ ಆಶಾ-ಅಂಗನವಾಡಿ ಕಾಯಕರ್ತರು, ವೈದ್ಯರು, ಪಿಡಿಓಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸುತ್ತಿದ್ದಾರೆ. ಆದರೆ ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಗ್ರಾಮೀಣ ಭಾಗದಲ್ಲಿ ಎಲ್ಲೂ ಕಾಣಿಸಲಿಲ್ಲ. ಇತ್ತೀಚೆಗೆ ಸಿದ್ದಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿದ ಆಹಾರ ಕಿಟ್‍ಗಳು ಅವರ ಸ್ವಂತ ಖರ್ಚಿನದೊ ಅಥವಾ ಗ್ರಾಮ ಪಂಚಾಯತಿ ಅನುದಾನದ್ದೊ ಗೊತ್ತಿಲ್ಲ. ಹಲವು ಮಾಹಿತಿ ಪ್ರಕಾರ ಪಿಡಿಓಗಳಿಂದ ವಸೂಲಿ ದಂಧೆ ಮೂಲಕ ಕಿಟ್‍ಗಳನ್ನು ತಯಾರಿಸಿ ನೀಡಿದ್ದಾರೆ. ಕೇಂದ್ರ ಸರ್ಕಾರ ಕೊರೋನಾ ವಿಚಾರವಾಗಿ ಬಿಡುಗಡೆ ಮಾಡಿದ ರೂ. ಐವತ್ತು ಸಾವಿರ ಅನುದಾನ ಇನ್ನೂ ನಮ್ಮ ಗ್ರಾಮ ಪಂಚಾಯಿತಿ ತಲುಪಿಲ್ಲ. ಮಧುಗಿರಿ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದ್ದು, ಇಲ್ಲಿನ ವೈದ್ಯಾಧಿಕಾರಿಗಳು ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು ಯಾವುದೇ ಸಂದರ್ಭದಲ್ಲೂ ಸಾರ್ವಜನಿಕರ ದೂರವಾಣಿ ಕರೆಗೆ ಸ್ಪಂದಿಸುವುದಿಲ್ಲವೆಂದು ಸಂಸದರ ಸಮ್ಮುಖದಲ್ಲಿ ಆರೋಪಿಸಿದರು.

      ಕ್ರಿಬ್ಕೋ ನಿರ್ದೇಶಕ ಆರ್. ರಾಜೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಗ್ರಾಪಂ ಅಧ್ಯಕ್ಷ ಪಂಚಾಕ್ಷರಯ್ಯ, ನಾಗರಾಜು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿವೈಎಸ್ಪಿ ಕೆ.ಜಿ ರಾಮಕೃಷ್ಣ, ತಹಸೀಲ್ದಾರ್ ವೈ. ರವಿ, ತಾಪಂ ಇಓ ದೊಡ್ಡಸಿದ್ದಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ್ ಬಾಬು, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಗಂಗಾಧರ್, ಸಿಡಿಪಿಓ ಅನಿತಾ, ಸಿಪಿಐ ಎಂ.ಎಸ್.ಸರ್ದಾರ್, ಆಹಾರ ಶಿರಸ್ತೇದಾರ್ ಗಣೇಶ್, ತೋಟಗಾರಿಕೆ ಇಲಾಖೆ ಅಧಿಕಾರಿ ವಿಶ್ವನಾಥ್ ಗೌಡ, ಕೃಷಿ ಇಲಾಖಾಧಿಕಾರಿ ಹನುಮಂತರಾಯಪ್ಪ, ಪುರಸಭಾ ಮುಖ್ಯಾಧಿಕಾರಿ ಅಮರನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಚಿಕ್ಕರಂಗಪ್ಪ, ತಾಪಂನ ಎಡಿಎ ಮಧುಸೂದನ, ಪಿಡಿಓಗಳಾದ ಶಿಲ್ಪ, ಆಲ್ಮಾಸ್, ಸತ್ಯನಾರಾಯಣರಾಜು, ಗೌಡಪ್ಪ, ಶಿವಕುಮಾರ್, ವೆಂಕಟಾಚಲಪತಿ, ನವೀನ್, ಧನಂಜಯ, ಕುಮಾರಸ್ವಾಮಿ, ಮುಖಂಡರುಗಳಾದ ಡಿ.ಎಚ್.ನಾಗರಾಜು, ಆನಂದ ಕೃಷ್ಣ, ಕುಲುಮೆ ಉಮೇಶ್, ಎಸ್‍ಬಿಟಿ ರಾಮು, ವೆಂಕಟಾಪುರ ಗೋವಿಂದ ರಾಜು, ಆನಂದ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link