ಮಧುಗಿರಿ :
ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ, ಸರಬರಾಜು ಇಂತಹ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಸಿಬ್ಬಂದಿಯು ನಿರಂತರವಾಗಿ ಮಾಹಿತಿ ಸಂಗ್ರಹಿಸಿ ಗಸ್ತು ಕಾರ್ಯ ನಡೆಸುತ್ತಿದ್ದಾರೆ. ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿ ತಾಡಿ ಗ್ರಾಮದಲ್ಲಿ, ನೆಲಮಂಗಲ ತಾಲ್ಲೂಕಿನಿಂದ ತಂದು, ನೆರೆಯ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮದ್ಯ ಸಂಗ್ರಹಿಸಿರುವುದು ಪತ್ತೆಯಾಗಿದೆ.
ಖಚಿತ ಮಾಹಿತಿ ಮೇರೆಗೆ ತಾಡಿ ಗ್ರಾಮದ ಎನ್.ನಾಗೇಂದ್ರ, ನರಸಿಂಹಪ್ಪ ಅಲಿಯಾಸ್ ಹೊಸಹಳ್ಳಿ ನರಸಿಂಹಪ್ಪರವರಿಗೆ ಸೇರಿದ ಮನೆಯಲ್ಲಿ ಅಕ್ರಮವಾಗಿ 155 ಲೀಟರ್ (18 ಬಾಕ್ಸ್‍ಗಳು) ಮದ್ಯವನ್ನು ಮಾರಾಟದ ಉದ್ದೇಶಕ್ಕಾಗಿ ಶೇಖರಿಸಿಟ್ಟಿರುವುದು ಕಂಡು ಬಂದಿದೆ. ಆರೋಪಿಯು ತಲೆಮರೆಸಿ ಕೊಂಡಿರುತ್ತಾರೆ. ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್-32 ಮತ್ತು 34 ರಡಿಯಲ್ಲಿ ಮಧುಗಿರಿ ಅಬಕಾರಿ ಉಪ ನಿರೀಕ್ಷಕರು ಪ್ರಕರಣವನ್ನು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆಯು ಮಧುಗಿರಿ ಉಪ ವಿಭಾಗದ ಅಬಕಾರಿ ಉಪಅಧೀಕ್ಷಕ ಆರ್.ಸುರೇಶ್ ಮಾರ್ಗದರ್ಶನದಲ್ಲಿ ನಡೆದಿದೆ.
ದಾಳಿ ಕಾರ್ಯದಲ್ಲಿ ಅಬಕಾರಿ ನಿರೀಕ್ಷಕ ನಾಗರಾಜು ಹೆಚ್.ಕೆ., ರಾಮಮೂರ್ತಿ ಎಸ್., ಅಬಕಾರಿ ಉಪ ನಿರೀಕ್ಷಕ ನಾಗಲಿಂಗಾಚಾರ್ ಹಾಗೂ ಸಿಬ್ಬಂದಿಯಾದ ಯೋಗಾನಂದ, ಹನುಮಂತರೆಡ್ಡಿ, ಸಿ.ಎನ್.ಕುಮಾರ್, ರಾಜೇಶ್, ಮಹಂತೇಶ್, ಶ್ರೀಶೈಲಾಪೂಜಾರಿ, ಖಾನ್, ಜಗದೀಶ್‍ರವರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ