ಗ್ರಾಪಂ ಸದಸ್ಯ-ಪಿಡಿಓರಿಂದ ನರೇಗಾ ಉದ್ದೇಶ ಮಣ್ಣುಪಾಲು

 ಮಧುಗಿರಿ :

ಕರಿಯಮ್ಮನ ಕಟ್ಟೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ನಡೆಸಿರುವುದು.

      ನರೇಗಾ ಯೋಜನೆಯ ಮೂಲ ಉದ್ದೇಶಗಳನ್ನು ಗಾಳಿ ತೂರಿ ಕಾರ್ಮಿಕರನ್ನು ನಿಯೋಜಿಸದೆ ಯಂತ್ರದ ಸಹಾಯದಿಂದ ಕೆರೆಯನ್ನು ಅಭಿವೃದ್ಧಿ ಪಡಿಸಲು ಗ್ರಾಪಂ ಸದಸ್ಯರೊಬ್ಬರು ಮುಂದಾಗಿದ್ದಾರೆಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.

ತಾಲ್ಲೂಕಿನ ಪುರವರ ಹೋಬಳಿ ಸಂಕಾಪುರ ಗ್ರಾಮದಲ್ಲಿ 2021-22ನೆ ಸಾಲಿನಲ್ಲಿ ಅಂದಾಜು 3 ಲಕ್ಷ ರೂ.ಗಳಲ್ಲಿ ಸಂಖ್ಯೆ 1525005026/ತಿಛಿ/93393042892423058 ನರೇಗಾ ಯೋಜನೆಯಡಿಯಲ್ಲಿ ಕರಿಯಮ್ಮನ ಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. 71 ಮಾನವ ದಿನಗಳ ಮಾನವ ಸೃಜನೆಯೊಂದಿಗೆ ನೀರಿನ ಸಂರಕ್ಷಣೆ ಮತ್ತು ನೀರಿನ ಕೊಯ್ಲು ಪದ್ಧತಿಯ ಕಾಮಗಾರಿಗೆ ಈಗಾಗಲೇ ಪುರವರ ಗ್ರಾಪಂ ಪಿಡಿಓ ಅನುಮೋದನೆ ನೀಡಿದ್ದಾರೆ.

      ಆದರೆ ಈ ಕೆರೆಯನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ನರೇಗಾ ಯೋಜನೆಯ ಮೂಲ ಉದ್ದೇಶಗಳಿಗೆ ಅನುಗುಣವಾಗಿ ಕಾಮಗಾರಿಯಲ್ಲಿ ಕಾರ್ಮಿಕರನ್ನು ತೊಡಗಿಸದೆ ಸಂಪೂರ್ಣವಾಗಿ ಜೆಸಿಬಿ ಯಂತ್ರದ ಮೂಲಕ ಕೆರೆಯಲ್ಲಿ ಗುಂಡಿ ಹಾಗೂ ಸಣ್ಣ ಪುಟ್ಟ ಬೇಲಿಯನ್ನು ಜೆಸಿಬಿ ಯಂತ್ರದ ಮೂಲಕ ಸ್ವಚ್ಛಗೊಳಿಸಿ ಕಾಮಗಾರಿಯನ್ನು ನಡೆಸಿದ್ದಾರೆ.

      ಕಾಮಗಾರಿ ಮುಗಿಯುವ ಮುಂಚೆಯೆ ಅಂದಾಜು ವೆಚ್ಚ ಹಾಗೂ ಮತ್ತಿತರ ಕಾಮಗಾರಿಯ ವಿವರಗಳನ್ನು ಸೂಚಿಸುವ ನರೇಗಾ ನಾಮ ಫಲಕವನ್ನು ಹಾಕಲಾಗಿದೆ. ಅಲ್ಲದೆ ಇತ್ತೀಚೆಗೆ ಸುರಿದ ಮಳೆಗೆ ಈ ನಾಮ ಪಲಕದ ಬಣ್ಣವೂ ಕೂಡ ಮಾಸ ತೊಡಗಿದೆ. ಸ್ಥಳೀಯ ಗ್ರಾಪಂ ಸದಸ್ಯನೊಬ್ಬನ ಉಸ್ತುವಾರಿಯಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಅಭಿವೃದ್ಧಿಯ ನೆಪದಲ್ಲಿ ಕನಿಷ್ಠ ಕೂಲಿ ಕಾರ್ಮಿಕರನ್ನು ಬಳಕೆ ಮಾಡದೆ ಜೆಸಿಬಿ ಯಂತ್ರವನ್ನು ಬಳಸಿದ್ದಾರೆಂದು ಆರೋಪ ಮಾಡಲಾಗಿದೆ.

ಬಣ್ಣ ಮಾಸಿರುವ ನರೇಗಾ ಕಾಮಗಾರಿಯ ವಿವರಗಳುಳ್ಳ ನಾಮ ಫಲಕ.

     ತಾಲ್ಲೂಕಿನಲ್ಲಿ ನಡೆಯುತ್ತಿರುವ ಹಾಗೂ ನಡೆದಿರುವ ಬಹುತೇಕ ನರೇಗಾ ಕಾಮಗಾರಿಗಳಲ್ಲಿ ಕೆಲ ಗ್ರಾಪಂ ಸದಸ್ಯರು ಇತರರ ಹೆಸರಿನಲ್ಲಿ ತಾವೇ ಬಂಡವಾಳ ಹೂಡಿ ಕಾಮಗಾರಿ ನಡೆಸುತ್ತಿದ್ದಾರೆ. ಕನಿಷ್ಠ ಕೂಲಿಯ ಜಾಬ್ ಕಾರ್ಡ್ ಹೊಂದಿರುವವರು ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಇನ್ನೂ ಕೆಲ ಕಾಮಗಾರಿಗಳನ್ನು ನಡೆಸುವವರು ಕಾಮಗಾರಿಗೆ ಅಗತ್ಯವಿರುವ ಜಾಬ್ ಕಾರ್ಡ್‍ಗಳನ್ನು ಕೂಲಿ ಕಾರ್ಮಿಕರಿಗೆ ನೀಡದೆ ತಮ್ಮ ಬಳಿಯಲ್ಲಿಯೇ ಇಟ್ಟಕೊಂಡು ಕಾಮಗಾರಿಗಳನ್ನು ನಡೆಸುತ್ತಿರುವ ಬಗ್ಗೆ ಗಂಭೀರವಾದ ಆರೋಪಗಳು ಸಹ ಕೇಳಿ ಬರುತ್ತಿವೆ.

     ಸರಕಾರವೇನೋ ಕೋವಿಡ್‍ನ ಕಷ್ಟಕರ ವಾತಾವರಣದಲ್ಲಿ ಕನಿಷ್ಟ ಕೂಲಿಯೊಂದಿಗೆ ಬಡವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ನರೇಗಾ ಯೋಜನೆಗೆ ಅತ್ಯಂತ ಪ್ರಾಮುಖ್ಯತೆ ನೀಡುತ್ತಿದೆ. ಆದರೆ ಕೆಲ ಗ್ರಾಪಂ ಸದಸ್ಯರೆ ಪಿಡಿಓ ಹಾಗೂ ಕಾರ್ಮಿಕರ ನಡುವೆ ಮಧ್ಯವರ್ತಿಗಳಂತೆ ವರ್ತಿಸುತ್ತಿದ್ದಾರೆ. ಇನ್ನೂ ಕಾಮಗಾರಿಗಳಿಂದ ಮಂಜೂರಾಗುವ ಅಷ್ಟೋ ಇಷ್ಟೋ ಅಲ್ಪ ಕೂಲಿ ಹಣವನ್ನು ಕಾರ್ಮಿಕರಿಗೆ ನೀಡಿ ಪಂಗನಾಮ ಹಾಕುತ್ತಿದ್ದು ಮೂಲ ಕಾರ್ಮಿಕರಿಗೆ ನರೇಗಾದಲ್ಲಿ ದೊರೆಯ ಬೇಕಾದ ಕನಿಷ್ಠ ಕೂಲಿಯೂ ಸಹ ಸರಿಯಾಗಿ ಕೈ ಸೇರುತ್ತಿಲ್ಲ.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap