ಹಳ್ಳಿಗಳಲ್ಲಿ ಮತದಾನಕ್ಕೆ ಕಾಣದ ಉತ್ಸಾಹ

ತುಮಕೂರು

     ರಾಷ್ಟ್ರದ ಆಡಳಿತ ನಿರ್ಧಾರ ಮಾಡುವ ಮಹತ್ವದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ನೀರಸ ಮತದಾನ ಕಂಡುಬಂದಿತು. ಹಳ್ಳಿಯ ಮತದಾರರು ತಮ್ಮ ಹಕ್ಕು ಚಲಾಯಿಸಲು ಹೇಳಿಕೊಳ್ಳುವಂತಹ ಉತ್ಸಾಹ ತೋರಲಿಲ್ಲ. ಅಲ್ಲಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಜಗಳಗಳಾದರೂ ಸ್ಥಳದಲ್ಲಿದ್ದ ಪೊಲೀಸರು ಹತೋಟಿ ಮಾಡಿ, ಶಾಂತಿಯುತ ಮತದಾನಕ್ಕೆ ಅನುವು ಮಾಡಿಕೊಟ್ಟರು.

      ಕೆಲ ಮತಕೇಂದ್ರಗಳಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಉಂಟಾಗಿ ಕೆಲ ಕಾಲ ಮತದಾನಕ್ಕೆ ಅಡ್ಡಿಯಾಯಿತು. ತಾಂತ್ರಿಕ ಸಿಬ್ಬಂದಿ ದೋಷ ಸರಿಪಡಿಸಿ ಮತದಾನ ಪ್ರಕ್ರಿಯೆ ಮುಂದುವರೆಯುವಂತೆ ನೋಡಿಕೊಂಡರು.

     ಕೆಲ ಕೇಂದ್ರಗಳಲ್ಲಿ ಬೆಳಿಗ್ಗೆಯೇ ಸಾಲುಗಟ್ಟಿ ನಿಂತು ಮತದಾರರು ಹಕ್ಕು ಚಲಾಯಿಸಿದರು. ಮಧ್ಯಾಹ್ನ ಬಿಸಿಲು ಏರುತ್ತಿದ್ದಂತೆ ಸಂಖ್ಯೆ ಕಡಿಮೆಯಾಯಿತು. ಹಲವೆಡೆ ಮತಕೇಂದ್ರ ಸಿಬ್ಬಂದಿ ಮತದಾರರಿಗಾಗಿ ಕಾಯುವಂತಾಗಿತ್ತು. ಮತದಾನದ ಬಗ್ಗೆ ಜಾಗೃತಿ ಮೂಡಿದ್ದರೂ, ಮತದಾನದ ಮಹತ್ವದ ಅರಿವಿದ್ದವರೂ ನಿರೀಕ್ಷಿಸಿದಷ್ಟು ಜನ ಮತಗಟ್ಟೆಕಡೆ ಬರಲಿಲ್ಲ ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಸಮಧಾನಗೊಂಡರು.

      ಜಿಲ್ಲಾ ಪಂಚಾಯ್ತಿ, ವಿಧಾನ ಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳೇ ಮತದಾರರ ಮನೆ ಬಾಗಿಲಿಗೆ ಬಂದು ಮತ ಯಾಚಿಸುತ್ತಿದ್ದರು. ಇದು ಲೋಕಸಭಾ ಚುನಾವಣೆ. ವ್ಯಾಪ್ತಿ ದೊಡ್ಡದು, ಅಭ್ಯರ್ಥಿಗಳು ಖುದ್ದು ಎಲ್ಲರ ಮನೆ ಬಾಗಿಲಿಗೆ ಬರಲು ಸಾಧ್ಯವಿಲ್ಲ. ಒಂದರ್ಥದಲ್ಲಿ ಲೋಕಸಭೆ ಚುನಾವಣೆ ಸಾಮಾನ್ಯ ಮತದಾರರಿಗೆ ಕೈಗೆಟುಕದು ಎನ್ನುವ ಭಾವನೆ ಹಲವರಲ್ಲಿ ಇದ್ದಂತಿತ್ತು. ಆ ಚುನಾವಣೆಗಳಲ್ಲಿ ಪಕ್ಷಗಳ ಯುವ ಕಾರ್ಯಕರ್ತರು ಮತಗಟ್ಟೆಗೆ ಬಾರದ ಮತದಾರರನ್ನು ಪತ್ತೆ ಮಾಡಿ, ಮತಹಾಕಲು ಮನವೊಲಿಸಿ, ಬಲವಂತ ಮಾಡಿ ಕರೆತರುತ್ತಿದ್ದರು, ಈ ಚುನಾವಣೆಯಲ್ಲಿ ಅಂತಹ ಕಾರ್ಯಕರ್ತರು ಹೆಚ್ಚಿನ ಹಳ್ಳಿಗಳಲ್ಲಿ ಕಂಡುಬರಲಿಲ್ಲ.

      ಈ ಚುನಾವಣೆ ಪ್ರಚಾರ ಎಲ್ಲಾ ಮತದಾರರನ್ನು ಪೂರ್ಣ ತಲುಪಲಿಲ್ಲವೇನೊ, ನಮ್ಮನ್ನ ‘ಕ್ಯಾರೆ’ ಅನ್ನೋರಿಲ್ಲ, ನಮ್ಮನ್ನ ಓಟು ಕೇಳಿದವರೇ ಇಲ್ಲ ಎಂದು ಹಲವರು ಗೊಣಗಿಕೊಂಡಿದ್ದೂ ಉಂಟು. ಆಮೇಲೆ ಹೋಗೋಣ, ಕೆಲಸ ಮುಗಿಸಿ ಹೋಗೋಣ, ಬಿಸಿಲು ಕಮ್ಮಿ ಆದ ಮೇಲೆ ಹೋದರಾಯಿತು ಎಂದು ಉದಾಸೀನ ಮಾಡಿಕೊಂಡ ಅನೇಕರು ಮತದಾನದಿಂದ ವಂಚಿತರಾದರು. ಇಷ್ಟರ ಮಧ್ಯೆ ಹಳ್ಳಿಗಳ ನವ ಮತದಾರರು ಉತ್ಸಾಹದಿಂದ ಮತ ಚಲಾಯಿಸಿ ಹೆಮ್ಮೆಯಿಂದ ಬೀಗಿದರು, ವಯೋವೃದ್ಧರನ್ನು ಮತಗಟ್ಟೆಗೆ ಕರೆತರಲು ಸಹಾಯ ಮಡಿದರು.

     ಗುಬ್ಬಿ ತಾಲ್ಲೂಕು ಚೇಳೂರು ಮತ್ತಿತರ ಕಡೆ ಶಾಲಾ ವಿದ್ಯಾರ್ಥಿಗಳು ಸ್ವಯಂಸೇವಕರಂತೆ ಮತಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ನಿರಾಸಕ್ತರು, ಅಶಕ್ತರು ಮತಕೇಂದ್ರಕ್ಕೆ ಬರಲು ನೆರವಾದರು. ಮತದಾನ ಮಾಡಿ ಎಂದು ಮತದಾನದ ಮಹತ್ವ ಹೇಳಿ ಮನವೊಲಿಸಿ, ಮತದಾನಕ್ಕೆ ಪ್ರೋತ್ಸಾಹಿಸಿದರು.

      ಬೆಳ್ಳಾವಿ, ಚೇಳೂರು, ನಿಟ್ಟೂರು, ಸಿ ಎಸ್ ಪುರ, ಹೆಬ್ಬೂರು, ನಾಗವಲ್ಲಿ ಗೂಳೂರು ಮುಂತಾದ ಕಡೆ ಬಿರುಸಿನ ಮತದಾನವಾಯಿತು. ಮತಗಟ್ಟೆ ಬಳಿ ಮತದಾರರ ಸಂಖ್ಯೆಯ ಚೀಟಿ ಬರೆದುಕೊಡಲು ಸೇರಿದ್ದ ಜೆಡಿಎಸ್ ಕಾರ್ಯಕರ್ತರು ಹಸಿರು ಶಾಲು, ಬಿಜೆಪಿಯವರು ಕೇಸರಿ ಶಾಲು ಹಾಕಿಕೊಂಡು ಗಮನ ಸೆಳೆದರು.

      ಮಹಿಳಾ ಮತದಾರರು ಹೆಚ್ಚಿರುವ ಬೆಳ್ಳಾವಿಯ ಸಖಿ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಇಲ್ಲಿ ಮಹಿಳೆಯರು, ಪುರುಷರು ಪ್ರತ್ಯೇಕ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಮಧ್ಯಾಹ್ನ 12ಗಂಟೆ ಸುಮಾರಿಗೆ ಇಲ್ಲಿ ಶೇಕಡ 20ರಷ್ಟು ಮತ ದಾಖಲಾಗಿತ್ತು. ಸಿ ಎಸ್ ಪುರ ಮತಗಟ್ಟೆಯಲ್ಲಿ ಬಿರುಸಿನ ಮತದಾನವಾಯಿತು. ಇಲ್ಲಿ ಮಧ್ಯಾಹ್ನ 12.30ರ ವೇಳೆಗಾಗಲೇ ಶೇಕಡ 48ರಷ್ಟು ಮತದಾನವಾಗಿತ್ತು. ವಿವಿಧೆಡೆ ವಯೋವೃದ್ದರನ್ನು ಅವರ ಮೊಮ್ಮಕ್ಕಳು ಕರೆತಂದು ಮತದಾನಕ್ಕೆ ಸಹಾಯ ಮಾಡುತ್ತಿದ್ದದ್ದು ಕಂಡು ಬಂದಿತು.

       ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲೂ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು, ಯಾವುದೇ ಗಲಾಟೆಗೆ ಅವಕಾಶವಾಗದಂತೆ ಪೊಲೀಸರು ಪರಿಸ್ಥಿತಿ ನಿರ್ವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap