ಚಾಮರಾಜನಗರ
ಮಲೆ ಮಹದೇಶ್ವರ ಬೆಟ್ಟ ಹೆಸರು ಕೇಳಿದರೆ ಸಾಕು, ಶಿವನ ಭಕ್ತರ ಕಿವಿಗಳು ನೆಟ್ಟಗಾಗುತ್ತವೆ. ಮಾದಪ್ಪನಿಗೆ ಇರುವ ಭಕ್ತರ ಸಂಖ್ಯೆ ಅಪಾರ. ಆದರೆ ಸದಾ ಒಂದಿಲ್ಲೊಂದು ಎಡವಟ್ಟಿನಿಂದ ಮಾದಪ್ಪನ ಬೆಟ್ಟ ಸುದ್ದಿ ಆಗುತ್ತಲೇ ಇದೆ. ಇದೀಗ ಅಂತಹದೇ ಒಂದು ಕಾಂಟ್ರವರ್ಸಿಯಿಂದ ಮತ್ತೊಮ್ಮೆ ಮಲೆ ಮಹದೇಶ್ವರ ಬೆಟ್ಟ ಸುದ್ದಿಯಾಗಿದೆ. ಅದೇನೆಂದರೆ 108 ಅಡಿ ಮಹದೇಶ್ವರರ ಪುತ್ಥಳಿ ಕೆಳಗೆ ನಿರ್ಮಾಣವಾಗಿರುವ ಮ್ಯೂಸಿಯಂ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.
ಮಾದಪ್ಪನ ಇತಿಹಾಸ ಸಾರುವ ಕಲಾಕೃತಿಗಳು ಮ್ಯೂಸಿಯಂನಲ್ಲಿದೆ. ಆ ಕಲಾಕೃತಿಗಳಲ್ಲಿ ರಾಮಮೊಗಪ್ಪ ದಂಪತಿಯ ಕಲಾಕೃತಿ ನಿರ್ಮಾಣ ಆಗದೆ ಇರುವುದು ಆ ವಂಶಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸರಗೂರು ಮಠದ ಸಿದ್ದಪ್ಪ ನ್ಯಾಯಾಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಮೂರ್ತಿ ದೇವದಾಸ್ ಅವರು ಪುತ್ಥಳಿಗೆ ಅವಕಾಶ ನೀಡುವಂತೆ ಪ್ರಾಧಿಕಾರ ಹಾಗೂ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಇನ್ನು ನ್ಯಾಯಾಲಯ ಪ್ರಶ್ನೆ ಮಾಡುತ್ತಿದ್ದಂತೆ ಪ್ರಾಧಿಕಾರದ ಪರ ವಕೀಲರು ಮ್ಯೂಸಿಯಂ ಸಂಪೂರ್ಣವಾಗಿಲ್ಲ ಎಂದು ಸಬೂಬು ನೀಡಿದ್ದರು. ಆದರೆ ಈಗ ಮ್ಯೂಸಿಯಂ ಸಂಪೂರ್ಣವಾಗಿದ್ದು, ಇದೇ ಏಪ್ರಿಲ್ 24 ರಂದು ಉದ್ಗಾಟನೆ ಕೂಡ ಆಗುತ್ತಿದೆ. ಆದರೆ ಇದು ಅಪೂರ್ಣಗೊಂಡ ಮ್ಯೂಸಿಯಂ ಯಾವುದೇ ಕಾರಣಕ್ಕೂ ಉದ್ಘಾಟನೆ ಮಾಡಬಾರದು ಎಂದು ರಾಮಮೋಗಪ್ಪ ವಂಶಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಪ್ರಾಧಿಕಾರದ ಅಧ್ಯಕ್ಷರಾಗಿರುವ ಸಿಎಂ ಸಿದ್ದರಾಮಯ್ಯ, ಒಂದು ವೇಳೆ ಮ್ಯೂಸಿಯಂ ಉದ್ಘಾಟನೆ ಮಾಡಿದರೆ ಕಟ್ಮೆಂಟ್ ಆಫ್ ಕೋರ್ಟ್ ಆಗುವ ಸಾಧ್ಯೆತೆಯಿದೆ.
ಮಹದೇಶ್ವರರಿಗೆ ಮೊದಲು ಎಣ್ಣೆ ಮಜ್ಜನ ಮಾಡಿಸಿದ್ದು, ಮಹದೇಶ್ವರನ ಪೂಜೆಗೆ ಮಹಿಳೆಯರಿಗೂ ಅವಕಾಶವನ್ನ ಕಲ್ಪಿಸಿದ್ದು, ಇದೇ ರಾಮಮೊಗಪ್ಪ ಕುಟುಂಬ. ಆದರೆ ಈ ಕುಟುಂಬವನ್ನ ಕಡೆಗಣನೆ ಮಾಡಿರುವುದು ಎಷ್ಟು ಸರಿ ಎನ್ನುವುದು ಅವರ ವಂಶಸ್ಥರ ಪ್ರಶ್ನೆಯಾಗಿದೆ. ನಿಜಕ್ಕೂ ಏಪ್ರಿಲ್ 24 ರಂದು ಮ್ಯೂಸಿಯಂ ಉದ್ಗಾಟನೆಯಾಗುತ್ತಾ ಎಂಬ ಪ್ರಶ್ನೆ ಕಾಡುತ್ತಿದ್ದು, ಇದಕ್ಕೆ ಮಲೆ ಮಹದೇಶ್ವರ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವೆ ಉತ್ತರಿಸಬೆಕಾಗಿದೆ.








