ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿಲ್ಲ: ಗೃಹ ಸಚಿವ ಜಿ.ಪರಮೇಶ್ವರ

ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ನಿರ್ಣಾಯಕ ಸ್ಥಾನದಲ್ಲಿದ್ದಾರೆ :ಎಲ್ಲ ಹುದ್ದೆಗಳಿಗೂ ಖರ್ಗೆ ಅವರು ಸಮರ್ಥರು

ಬೆಂಗಳೂರು

    ಮುಂದಿನ ಎರಡೂವರೆ ವರ್ಷಗಳಲ್ಲಿ ಕ್ಷೇತ್ರವಾರು ಏನೆಲ್ಲ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂಬುದರ ಕುರಿತು ಮುಖ್ಯಮಂತ್ರಿಯವರು ಕರೆದಿರುವ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

    ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಇಂದಿನಿಂದ ನಮ್ಮ ಪಕ್ಷದ ಶಾಸಕರುಗಳ ಜೊತೆ ಜಿಲ್ಲಾವಾರು ಕರೆದು ಸಭೆ ನಡೆಸಲಿದ್ದಾರೆ. ಶಾಸಕರುಗಳಿಗೆ 50 ಕೋಟಿ ರೂ. ಅನುದಾನ ನೀಡಲು ತೀರ್ಮಾನ ಮಾಡಿದ್ದಾರೆ. ಬೇರೆ ಅಭಿವೃದ್ಧಿ ಕಾರ್ಯಗಳು, ಪಕ್ಷದ ಸಂಘಟನೆಯ ಬಗ್ಗೆ ಮಾತನಾಡುತ್ತಾರೆ. ಇದು ಹೊಸದೇನು ಅಲ್ಲ. ಹಿಂದೆಯೂ ಕೂಡ 2013 ರಿಂದ 2018ರವರೆಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ಮಾಡಿದ್ದರು. ನಾನು ಆಗ ಅಧ್ಯಕ್ಷನಾಗಿದ್ದೆ. ನಾವೆಲ್ಲ ಶಾಸಕರುಗಳ ಜೊತೆ ಸಮಸ್ಯೆಗಳನ್ನು ಆಲಿಸಿದ್ದೇವು ಎಂದು ಹೇಳಿದರು.

   ಐದು ವರ್ಷದ ಅವಧಿಯಲ್ಲಿ ಮಧ್ಯಕ್ಕೆ ಬಂದಿದ್ದೇವೆ. ಬಹಳ ಮುಖ್ಯವಾಗುತ್ತದೆ. ಮುಂದಿನ ಎರಡುವರೆ ವರ್ಷಗಳಲ್ಲಿ ಕ್ಷೇತ್ರವಾರು ಏನೆಲ್ಲ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದು ಚರ್ಚೆ ಮಾಡಲಾಗುತ್ತದೆ. ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಇರುತ್ತಾರೆ ಎಂದರು.

   ಸಭೆಯ ನಡೆಸುವ ಕುರಿತು ಎಐಸಿಸಿ ಅಧ್ಯಕ್ಷರು ನಮ್ಮ ಪಕ್ಷದ ಸಂಘಟನೆಯ ಬಗ್ಗೆ ಹೇಳದಿದ್ದರೆ ಮತ್ತೇನು ಹೇಳುತ್ತಾರೆ. ಸಭೆ ನಡೆಸಲು ಅವರು ಸೂಚನೆ ಕೊಟ್ಟಿದ್ದರೆ ತಪ್ಪೇನು ಇಲ್ಲ. ಚುನಾವಣೆ ಸಂದರ್ಭದಲ್ಲಿ ಪಕ್ಷ ಎಂದುಕೊಂಡು ಜನಗಳ ಮುಂದೆ ಹೋಗಿದ್ದೇವೆ. ಆಗ ಜನಗಳಿಗೆ ಭರವಸೆಗಳನ್ನು ಕೊಟ್ಟಿದ್ದೇವೆ. ಅದೆಲ್ಲವನ್ನು ಪಕ್ಷ ರೆಗ್ಯೂಲೆಟ್ ಮಾಡಬೇಕಲ್ಲವೆ. ಕೇಳುವುದರಲ್ಲಿ ತಪ್ಪೇನಿದೆ ಎಂದರು.

  ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಈವರೆಗೆ ಮಾತಾಡಿರುವವರು, ಅವರ ಹಂತಕ್ಕೆ ತಲುಪಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಷ್ಟೇ ಅಲ್ಲದೆ, ಇಡೀ ರಾಷ್ಟ್ರ ರಾಜಕಾರಣದಲ್ಲಿ ಖರ್ಗೆಯವರು ಹಿರಿಯ ಮುಖಂಡರು. ಅದನ್ನು ಪರಿಗಣಿಸಬೇಕಾಗುತ್ತದೆ. ಅವರ ಹೇಳಿಕೆಯ ಮೇಲೆ ಟೀಕೆ ಮಾಡುವುದು ಅಷ್ಟೊಂದು ಸರಿಯಲ್ಲ. ಎಲ್ಲ ಹುದ್ದೆಗಳಿಗೂ ಅವರು ಸಮರ್ಥರಿದ್ದಾರೆ.‌ ಸುದೀರ್ಘವಾದ 50 ವರ್ಷದ ರಾಜಕಾರಣ ಮಾಡಿರುವುದರಿಂದ ಅಪಾರವಾದ ಅನುಭವವಿದೆ. ಅವರ ಹೇಳಿಕೆಯನ್ನು ತಪ್ಪಾಗಿ ಭಾವಿಸುವುದು ಸರಿಯಲ್ಲ ಎಂದು ಹೇಳಿದರು.

   ಕೆಲವರು ರಾಜ್ಯಕ್ಕೆ ಬರಲಿ. ಸಿಎಂ ಆಗಲಿ ಎನ್ನುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನಿಲ್ಲ. ಅವರು ನಮ್ಮ ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ತೀರ್ಮಾನ ಮಾಡುವವರು ಎಐಸಿಸಿ ಅಧ್ಯಕ್ಷರು. ಹಾಗಾಗಿ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತೀವಿ ಅಂತ ಹೇಳಿದರೆ, ತಪ್ಪು ಅಂತ ಯಾರು ಅರ್ಥೈಸಬಾರದು ಎಂದರು.

    ಬಹಳ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇಂತಹ ಘಟನೆಗಳು ಮುಂದೆ ಆಗಬಾರದು. ಇವತ್ತು ರಮ್ಯಾ ಅವರಿಗೆ ಆಗಿರಬಹುದು, ನಾಳೆ ಬೇರೆಯವರಿಗೂ ಆಗಬಹುದು. ಇದಕ್ಕೆ ಕಡಿವಾಣ ಹಾಕಬೇಕಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡುತ್ತಾರೆ. ನಾನು ಸಹ ಕಮಿಷನರ್‌ಗೆ ಸೂಚನೆ ಕೊಡುತ್ತೇನೆ. ಇಂತದ್ದೆಲ್ಲ ನಡೆಯಬಾರದು ಎಂದರು.

   ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಕುರಿತು ಮೈಕೆಲ್ ಡಿ.ಕುನ್ಹಾ ಅವರ ವರದಿಯ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಅಗಿದೆ. ಚರ್ಚೆ ಬಳಿಕ ತೀರ್ಮಾನ ತೆಗೆದುಕೊಂಡಿದೆ. ಅಮಾನತು ವಾಪಸ್ ಪಡೆದು, ವಿಚಾರಣೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಒಬ್ಬರು ಅಧಿಕಾರಿ ಸಿಎಟಿ (ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ) ಗೆ ಹೋಗಿದ್ದ ಕಾರಣಕ್ಕಾಗಿ ಈ ಅವಕಾಶ ಸಿಕ್ಕಿಲ್ಲ. ಬೇರೆ ಅಧಿಕಾರಿಗಳಂತೆ ಆದೇಶ ವಾಪಸ್ ಪಡೆಯಲು ಸಿಎಟಿ ಯಿಂದ ನಿರ್ದೇಶನ ಬಂದರೆ ಪರಿಗಣಿಸುತ್ತೇವೆ. ಅಮಾನತು ಆದೇಶ ವಾಪಸ್ ನಾವೇ ತೀರ್ಮಾನ ಮಾಡಿರುವುದರಿಂದ ಹಿನ್ನೆಡೆ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದರು.

    ಅಮಾನತು ಆಡಳಿತಾತ್ಮಕ ನಿರ್ಧಾರ. ಅದನ್ನು ವಾಪಸ್ ಪಡೆಯಲಾಗಿದೆ. ತನಿಖೆ ಮುಂದುವರಿದಿದ್ದು, ಇಲಾಖಾ ವಿಚಾರಣೆ ಮಾಡುತ್ತಾರೆ. ಬಿ.ದಯಾನಂದ್ ಅವರಿಗೆ ಅದೇ (ಕಮಿಷನರ್) ಹುದ್ದೆಯನ್ನು ನೀಡುವುದಿಲ್ಲ. ಮತ್ತೆ ಕಮಿಷನರ್ ಮಾಡುವುದಿಲ್ಲ. ಅವರ ಸೇವಾಹಿರಿತನಕ್ಕೆ  ಸಮಾನವಾದ ಹುದ್ದೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

   ರಾಜ್ಯದಲ್ಲಿ ಗೊಬ್ಬರ ಸಮಸ್ಯೆಯ ಕುರಿತು ಮಾತನಾಡಿ, ಹೆಚ್ಚು ಹಣ ತೆಗೆದುಕೊಂಡು, ಕಾಳಸಂತೆಯಲ್ಲಿ ಯಾರು ಗೊಬ್ಬರ ಮಾರಾಟ ಮಾಡುತ್ತಾರೆ ಅಂತವರ ಮೇಲೆ ಕೇಸ್ ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ, ಕೃಷಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ಕೃಷಿ ಸಚಿವರು ಸೂಚಿಸಿದ್ದಾರೆ. ಈ ಬಾರಿ ಉತ್ತಮವಾಗಿ ಮುಂಗಾರು ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ಜಾಸ್ತಿಯಾಗಿದೆ. ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಅದಕ್ಕೆ ತಕ್ಕನಾಗಿ ಪೂರೈಕೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಕೂಡ ನಮಗೆ ಸಹಕರಿಸಬೇಕು. ನಮಗೆ ಅಗತ್ಯವಾದಷ್ಟು ಗೊಬ್ಬರ ನೀಡಬೇಕು ಎಂದು ಹೇಳಿದರು.

   ಧರ್ಮಸ್ಥಳ ವಿಚಾರದ ಕುರಿತು ಮಾತನಾಡಿ, ಎಸ್ಐಟಿ ತನಿಖೆ ಮುಂದುವರಿಯುತ್ತದೆ. ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಮೊದಲೇ ಹೇಳಿದ್ದೇನೆ. ತನಿಖೆಯ ಮಧ್ಯದಲ್ಲಿ ಯಾರು, ಏನು ಹೇಳಿಕೆ ಕೊಡಲು ಆಗುವುದಿಲ್ಲ ಎಂದರು.ನಮ್ಮ ಜಿಲ್ಲೆಯ ಶಾಸಕರುಗಳೊಂದಿಗಿನ ಸಭೆ 5 ಗಂಟೆಗೆ ಇದೆ. ನಮ್ಮದು ಕ್ಷೇತ್ರವಲ್ಲವೇ. ಸಮಸ್ಯೆ ಇದ್ದೇ ಇರುತ್ತದೆ. ಕ್ಷೇತ್ರದ ಕಷ್ಟ ಸುಖಗಳನ್ನು ಸಭೆಯಲ್ಲಿ ಹೇಳಿಕೊಳ್ಳುತ್ತೇವೆ‌ ಎಂದರು.

Recent Articles

spot_img

Related Stories

Share via
Copy link