ಬೆಂಗಳೂರು:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಸಲ್ಲಿಸಿದ್ದ ಮನೆ ಊಟದ ಕುರಿತ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸಂಪರ್ಕಿಸುವಂತೆ ಆದೇಶಿಸಿದೆ.
‘ಮನೆ ಊಟ, ಹಾಸಿಗೆ ಮತ್ತು ಬಟ್ಟೆ ಪಡೆಯಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿರುವ ನಟ ದರ್ಶನ್ ತೂಗುದೀಪ ಶ್ರೀನಿವಾಸ್ ತಮ್ಮ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಲಿ’ ಎಂದು ಶುಕ್ರವಾರ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಜೈಲಿನಲ್ಲಿರುವ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು, ‘ಕರ್ನಾಟಕ ಬಂದಿಖಾನೆ ಕಾಯ್ದೆ–1963ರ ಕಲಂ 30ರ ಅಡಿ ವಿಚಾರಣಾಧೀನ ಕೈದಿ ಮನೆ ಊಟ, ಹಾಸಿಗೆ ಇತ್ಯಾದಿ ಪಡೆಯಲು ಅರ್ಹರಾಗಿರುತ್ತಾರೆ. ದರ್ಶನ್ ಅವರಿಗೆ ಸದ್ಯ ಜೈಲಿನ ಊಟದಿಂದ ಆರೋಗ್ಯದಲ್ಲಿ ವ್ಯತ್ಯಯವುಂಟಾಗಿದೆ. ಹಾಗಾಗಿ, ಅವರಿಗೆ ಮನೆ ಊಟ ಪಡೆಯಲು ನಿರ್ದೇಶಿಸಬೇಕು. ಕೈದಿಯು ತನಗೆ ಬೇಕಾದ ಊಟ ಪಡೆಯುವುದು ಆತನ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು.
ಇನ್ನು ದರ್ಶನ್ ಪರ ವಕೀಲರ ವಾದಕ್ಕೆ ಆಕ್ಷೇಪಿಸಿದ ಪ್ರಾಸಿಕ್ಯೂಷನ್ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಜಿ.ಭಾನುಪ್ರಕಾಶ್ ಹಾಗೂ ಮತ್ತೊಬ್ಬ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನಕುಮಾರ್, ‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 5 ಸಾವಿರ ಕೈದಿಗಳಿದ್ದಾರೆ. ಅವರೆಲ್ಲರೂ ಇದೇ ರೀತಿ ಕೇಳುತ್ತಾ ಹೋದರೆ ಏನು ಮಾಡುವುದು. ಅಷ್ಟಕ್ಕೂ ಕೈದಿಗಳಿಗೆ ಸರ್ಕಾರ ಉತ್ತಮವಾದ ಪೌಷ್ಟಿಕ ಆಹಾರವನ್ನೇ ನೀಡುತ್ತಿದೆ’ ಎಂದರು.
ಆರೋಪಿಯು ಮನೆ ಆಹಾರಕ್ಕಾಗಿ ಕಾರಾಗೃಹಗಳ ಇನ್ಸ್‌ಪೆಕ್ಟರ್ ಜನರಲ್‌ಗೆ ಪ್ರಾತಿನಿಧ್ಯವನ್ನು ನೀಡಬಹುದು ಮತ್ತು ಅದನ್ನು ಪರಿಗಣಿಸದಿದ್ದರೆ, ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಬೇಕು. ಆದರೆ ಅವರು ನೇರವಾಗಿ ಹೈಕೋರ್ಟ್ ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಷನ್ ಅರ್ಜಿಗೆ ಪೀಠ ಆಕ್ಷೇಪಿಸಿತ್ತು.
ಇದಲ್ಲದೆ, ಜೈಲು ಕೈಪಿಡಿಯಂತೆ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ ಹಾಸಿಗೆ ಮತ್ತು ಬಟ್ಟೆಗೆ ಅರ್ಹರಲ್ಲ ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ಆರೋಪಿಗಳಿಗೆ ಮನೆಯಿಂದ ಊಟಕ್ಕೆ ಅವಕಾಶ ನೀಡಿದರೆ ತಪ್ಪಾದರೆ ಯಾರು ಹೊಣೆ ಹೊರುತ್ತಾರೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಅರ್ಜಿದಾರರು ಮೊದಲಿಗೆ ಈ ಮನವಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಿ. ತುರ್ತಿದ್ದರೆ ನಾಳೆಯೇ ಅರ್ಜಿ ಸಲ್ಲಿಸಬಹುದು. ಇದಕ್ಕೆ ಪ್ರಾಸಿಕ್ಯೂಷನ್ ಇದೇ 22ರಂದು ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಲಾಗುವುದು’ ಎಂದರು. ಅಂತೆಯೇ, ‘ಈ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಇದೇ 27ರ ಒಳಗೆ ಪರಿಶೀಲಿಸಬೇಕು’ ಎಂದು ನಿರ್ದೇಶಿಸಿ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದರು.
