ನವದೆಹಲಿ:
ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಸ್ವಪಕ್ಷ ಮತ್ತು ಸ್ವಪಕ್ಷ ನಾಯಕರ ವಿರುದ್ಧವೇ ವಿವಾದಾತ್ಮಕ ಹೇಳಿಕೆ ನೀಡಿ ಮುಜುಗರಕ್ಕೀಡು ಮಾಡುವುದು ಇತ್ತೀಚೆಗೆ ಸರ್ವೇ ಸಾಮಾನ್ಯ ಎಂಬಂತಾಗಿದೆ. ಇದೀಗ ಮತ್ತೆ ಪಕ್ಷದ ನಾಯಕರ ಬಗ್ಗೆ ಅವರು ಕೊಟ್ಟಿರುವ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕೇಂಬ್ರಿಡ್ಜ್ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಎರಡು ಬಾರಿ ಫೇಲ್ ಆಗಿದ್ದರು ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅಲ್ಲದೇ ಸ್ವಪಕ್ಷ ನಾಯಕರೇ ಅಯ್ಯರ್ ವಿರುದ್ಧ ಕಿಡಿಕಾರಿದ್ದಾರೆ.
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಣಿಶಂಕರ್ ಅಯ್ಯರ್ ಅವರು, ಮಣಿಶಂಕರ್ ಅಯ್ಯರ್ ಒಬ್ಬ ಪೈಲಟ್ ಆಗಿದ್ದರು. ಆದರೆ ಅವರು ಎರಡು ಬಾರಿ ಫೇಲ್ ಆಗಿದ್ದರು. ನಾನು ಕೇಂಬ್ರಿಡ್ಜ್‌ನಲ್ಲಿ ಅವರೊಂದಿಗೆ ಇದ್ದೆ. ಅವರು ಅಲ್ಲಿ ಫೇಲ್ ಆಗಿದ್ದರು. ಕೇಂಬ್ರಿಡ್ಜ್‌ನಲ್ಲಿ ವಿಫಲರಾಗುವುದು ತುಂಬಾ ಕಷ್ಟ. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುವುದು ಸುಲಭ. ಏಕೆಂದರೆ ವಿಶ್ವವಿದ್ಯಾನಿಲಯವು ತನ್ನ ಇಮೇಜ್ ಅನ್ನು ಉಳಿಸಿಕೊಳ್ಳಲು ಬಯಸುತ್ತದೆ ಮತ್ತು ಎಲ್ಲರೂ ಕನಿಷ್ಠ ಉತ್ತೀರ್ಣರಾಗುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತದೆ. ನಂತರ ಅವರು ಲಂಡನ್‌ನ ಇಂಪೀರಿಯಲ್ ಕಾಲೇಜಿಗೆ ಹೋದರು. ಅಲ್ಲಿ ಮತ್ತೆ ವಿಫಲರಾದರು. ಹಾಗಾದರೆ ಅಂತಹ ವ್ಯಕ್ತಿ ಪ್ರಧಾನಿಯಾಗುವುದು ಹೇಗೆ ಎಂದು ನಾನು ಯೋಚಿಸಿದೆ? ಎಂದಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ, ಕಾರ್ಯತಂತ್ರ ರೂಪಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿದೆಯೇ ಎಂಬ ಪ್ರಶ್ನೆಗೆ ಅಯ್ಯರ್ ಉತ್ತರಿಸಿದ ಅವರು, ರಾಜೀವ್ ಗಾಂಧಿ ಕೂಡ ಕೇಂಬ್ರಿಡ್ಜ್ ಮತ್ತು ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಫೇಲ್ ಆಗಿದ್ದರು ಎಂದು ತಿಳಿಸಿದರು.
ಇನ್ನು ಅಯ್ಯರ್ ಹೇಳಿಕೆ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಯಾಗಿದ್ದಾರೆ. ಪಕ್ಷದ ಹಿರಿಯ ಹರೀಶ್ ರಾವತ್ ಪ್ರತಿಕ್ರಿಯಿಸಿ, ಅಯ್ಯರ್ ಅವರನ್ನು ಹತಾಶೆಗೊಂಡ ವ್ಯಕ್ತಿ ಎಂದು ಕರೆದರು ಮತ್ತು ರಾಜೀವ್ ಗಾಂಧಿ ದೇಶಕ್ಕೆ ಆಧುನಿಕ ದೃಷ್ಟಿಕೋನವನ್ನು ನೀಡಿದರು. ಅವರು ಆರ್ಥಿಕತೆಯ ಉದಾರೀಕರಣಕ್ಕೂ ಕ್ರಮಗಳನ್ನು ತೆಗೆದುಕೊಂಡರು. ದುರದೃಷ್ಟವಶಾತ್, ಪಕ್ಷದ ಒಂದು ಭಾಗ (ಕಾಂಗ್ರೆಸ್) ಅವರೊಂದಿಗೆ ನಿಲ್ಲಲಿಲ್ಲ, ಇಲ್ಲದಿದ್ದರೆ ದೇಶದ ಇತಿಹಾಸ ಬೇರೆಯೇ ಆಗಿರುತ್ತಿತ್ತು. ವಿಫಲರಾಗುವುದು ಆಗುವುದು ದೊಡ್ಡ ವಿಷಯವಲ್ಲ. ಅತ್ಯುತ್ತಮ ವ್ಯಕ್ತಿಗಳು ಸಹ ಕೆಲವೊಮ್ಮೆ ವಿಫಲರಾಗುತ್ತಾರೆ. ಆದರೆ ಅವರು ರಾಜಕೀಯದಲ್ಲಿ ವಿಫಲರಾಗಲಿಲ್ಲ. ಅವರಿಗೆ ಜವಾಬ್ದಾರಿ ನೀಡಿ ಪ್ರಧಾನಿಯಾದಾಗ, ಕೇವಲ ಐದು ವರ್ಷಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಪ್ರಧಾನಿಗಳು ನಮ್ಮ ದೇಶದಲ್ಲಿ ಬಹಳ ಕಡಿಮೆ ಎಂದಿದ್ದಾರೆ.
