ಮುಂಬೈ :
ಈ ವರ್ಷ ಶಾರುಖ್ ಖಾನ್ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ‘ಜವಾನ್’ ಸಿನಿಮಾದ ನಟನೆಗೆ ಅವರಿಗೆ ಅವಾರ್ಡ್ ಕೊಡಲಾಗಿದೆ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದರು. ಇದು ಸರಿ ಅಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಇನ್ನು ಅನೇಕರು ‘ಏಕ್ ಬಂದಾ ಕಾಫಿ ಹೇ’ ಚಿತ್ರದ ನಟನೆಗೆ ಮನೋಜ್ ಬಾಜ್ಪಾಯಿ ಅವರಿಗೆ ಅವಾರ್ಡ್ ಸಿಗಬೇಕಿತ್ತು ಎಂದು ಹೇಳಿದ್ದು ಇದೆ. ಈ ವಿಚಾರವಾಗಿ ಸ್ವತಃ ಮನೋಜ್ ಅವರು ಮಾತನಾಡಿದ್ದಾರೆ.
ಮನೋಜ್ ಹಾಗೂ ಶಾರುಖ್ ಖಾನ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಹೀಗಿರುವಾಗಲೇ ಅನೇಕರು ಇಬ್ಬರ ಮಧ್ಯೆ ಹೋಲಿಕೆ ಮಾಡಿದ್ದರು. ಈ ಹೋಲಿಕೆಗಳ ಬಗ್ಗೆ ಅವರು ಮೌನ ಮುರಿದಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, ಆ ಮಾತುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. ‘ಅದು ಮುಗಿದು ಹೋದ ಕಾಲ ಆದ್ದರಿಂದ ಅದನ್ನು ಮಾತನಾಡೋದು ನಿಷ್ಪ್ರಯೋಜಕ .
ಸಿರ್ಫ್ ಏಕ್ ಬಂದಾ ಕಾಫಿ ಹೈ ವಿಷಯಕ್ಕೆ ಬಂದಾಗ, ಹೌದು, ಇದು ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ಬಹಳ ವಿಶೇಷವಾದ ಚಿತ್ರ. ಆದರೆ ನಾನು ಈ ವಿಷಯಗಳನ್ನು ಚರ್ಚಿಸುವುದಿಲ್ಲ ಏಕೆಂದರೆ ಲೂಸರ್ಗಳು ಮಾತ್ರ ಹೀಗೆ ಮಾತನಾಡಲು ಸಾಧ್ಯ. ಇದು ಮುಗಿದು ಹೋದ ಮಾತು, ಅದನ್ನು ಹಾಗೆಯೇ ಬಿಡಬೇಕು’ ಎಂದು ಅವರು ಹೇಳಿದರು.
‘ಇದು ಕೇವಲ ರಾಷ್ಟ್ರೀಯ ಪ್ರಶಸ್ತಿಗಳ ಬಗ್ಗೆ ಅಲ್ಲ. ಎಲ್ಲಾ ಪ್ರಶಸ್ತಿಗಳ ಬಗ್ಗೆ. ಅವರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ನಾನು ಸಿನಿಮಾ ಆಯ್ಕೆ ಮಾಡುವಾಗಲೇ ನನ್ನ ಗೌರವದ ಬಗ್ಗೆ ಯೋಚಿಸುತ್ತೇನೆ. ನಾನು ನಟನಾಗಿ ತುಂಬಾ ಜವಾಬ್ದಾರನಾಗಿರುತ್ತೇನೆ. ಆದರೆ ಪ್ರತಿಯೊಂದು ಸಂಸ್ಥೆಯು ತಮ್ಮ ಬಗ್ಗೆ ಯೋಚಿಸಬೇಕು, ಅದು ನನ್ನ ಕೆಲಸವಲ್ಲ. ಬೇರೆ ಯಾರಾದರೂ ತಮ್ಮ ಗೌರವವನ್ನು ಕಳೆದುಕೊಳ್ಳುತ್ತಿದ್ದರೆ, ಅವರು ಅದರ ಬಗ್ಗೆ ಯೋಚಿಸಬೇಕು’ ಎಂದು ಅವರು ಹೇಳಿದ್ದಾರೆ.
ಶಾರುಖ್ ಖಾನ್ ಅವರಿಗೆ ‘ಜವಾನ್’ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಅವರು ಇನ್ನೂ ಹಲವು ಉತ್ತಮ ಸಿನಿಮಾಗಳನ್ನು ಈ ಮೊದಲು ನೀಡಿದ್ದು ಇದೆ. ಆದರೆ, ಆಗ ಅವರಿಗೆ ಅವಾರ್ಡ್ ಬಂದಿರಲಿಲ್ಲ. ಈಗ ‘ಜವಾನ್’ ಸಿನಿಮಾ ನಟನೆಗೆ ಈ ಪ್ರಶಸ್ತಿ ಬಂದಿದ್ದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ.
