ಮುಂಬೈ:
ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಕಾಂಗ್ರೆಸ್ ಬಂಡಾಯ ನಾಯಕ ಮನೋಜ್ ಶಿಂಧೆ ಶಿವಸೇನೆ ಸೇರಿದ್ದಾರೆ.
ಕೊಪ್ರಿ-ಪಚ್ಪಖಾಡಿ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿದ್ದ ಸ್ಪರ್ಧಿಸಿದ್ದ ಮನೋಜ್ ಶಿಂಧೆ ಅವರು ನಾಮಪತ್ರ ಹಿಂಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದರು. ಇದೀಗ ಭಾನುವಾರ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.
ಶಿವಸೇನೆ ಸೇರಿದ ಬಳಿಕ ಪಿಟಿಐ ಜೊತೆ ಮಾತನಾಡಿದ ಮನೋಜ್ ಶಿಂಧೆ, ಕಾಂಗ್ರೆಸ್ ವಿಶೇಷವಾಗಿ ಥಾಣೆ ಮತ್ತು ಕೊಂಕಣ ಪ್ರದೇಶಗಳಿಗೆ ಗಮನ ಕೊಡಲಿಲ್ಲ ಎಂದು ಕಾಂಗ್ರೆಸ್ ನಾಯಕತ್ವದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. “ಕಾಂಗ್ರೆಸ್ ಎಂದಿಗೂ ಥಾಣೆ ಮತ್ತು ಕೊಂಕಣ ಪ್ರದೇಶಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದು ಪಕ್ಷ ಮತ್ತು ಅದರ ಕಾರ್ಯಕರ್ತರ ಭವಿಷ್ಯದ ಮೇಲೆ ಪರಿಣಾಮ ಬೀರಿದೆ” ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುವ ಬಗ್ಗೆಯೂ ಮಾತನಾಡಿದ ಶಿಂಧೆ, ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದರೂ ಅನೇಕ ಕಾರ್ಯಕರ್ತರನ್ನು ಗುರುತಿಸದೆ ಹೀನಾಯ ಸೋಲು ಅನುಭವಿಸಿದೆ ಎಂದು ಪ್ರತಿಪಾದಿಸಿದರು.