ಡ್ರಗ್ಸ್‌ ಪ್ರಕರಣ : ತಮಿಳು ನಟ ಮನ್ಸೂರ್‌ ಅಲಿ ಖಾನ್‌ ಪುತ್ರ ಅರೆಸ್ಟ್‌

ಚೆನ್ನೈ: 

   ಗಾಂಜಾ ಮತ್ತು ಮಾದಕ ದ್ರವ್ಯ ದಂಧೆಕೋರರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ತಮಿಳು ಚಲನಚಿತ್ರ ನಟ ಮನ್ಸೂರ್ ಅಲಿ ಖಾನ್‌  ಪುತ್ರನನ್ನು ಚೆನ್ನೈ ಪೊಲೀಸರು ಮಂಗಳವಾರ (ಡಿ.3) ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

   ಸದ್ಯ ಅಲಿ ಖಾನ್ ತುಘಲಕ್  ನನ್ನು ತಿರುಮಂಗಲಂ  ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಗಾಂಜಾ ವ್ಯಾಪಾರದಲ್ಲಿ ತೊಡಗಿರುವ ವ್ಯಕ್ತಿಗಳು ಈ ಹಿಂದಿನಿಂದಲೂ ಆತನೊಂದಿಗೆ ಸಂಪರ್ಕ ಹೊಂದಿರುವುದಾಗಿ ಗುಪ್ತಚರ ಇಲಾಖೆಯು ಮಾಹಿತಿ ನೀಡಿದ ನಂತರ ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಹತ್ತು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸೆಯಾದ್ ಸಾಕಿ, ಮೊಹಮ್ಮದ್ ರಿಯಾಸ್ ಅಲಿ ಮತ್ತು ಫೈಸಲ್ ಅಹ್ಮದ್ ಸೇರಿದ್ದಾರೆ. 

   ಕಳೆದ ವರ್ಷವಷ್ಟೇ ಖಳ ನಟ ಮನ್ಸೂರ್‌ ಅಲಿ ಖಾನ್‌ ಬಹುಭಾಷಾ ನಟಿ ತ್ರಿಷಾ ಕೃಷ್ಣನ್  ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಭಾರೀ ಟೀಕೆ ಮತ್ತು ವಿವಾದಕ್ಕೆ ಗುರಿಯಾಗಿದ್ದರು. ಖ್ಯಾತ ನಟ ಚಿರಂಜೀವಿ ಮತ್ತು ನಟಿ ಖುಷ್ಭೂ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.

   ಆಗಷ್ಟೇ ತೆರೆಗೆ ಬಂದಿದ್ದ ‘ಲಿಯೋ’ ಸಿನಿಮಾದಲ್ಲಿ ನಟ ಮನ್ಸೂರ್ ಅಲಿ ಖಾನ್ ನಟಿಸಿದ್ದರು.ಸಿನಿಮಾ ರಿಲೀಸ್‌ ಆದ ನಂತರ ಸಂದರ್ಶನವೊಂದರಲ್ಲಿ ಮಾತನಾಡುವಾಗ, ‘ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಗೊತ್ತಾದಾಗ, ನನಗೆ ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ಭಾವಿಸಿದ್ದೆ. ನನ್ನ ಹಿಂದಿನ ಸಿನಿಮಾಗಳಲ್ಲೂ ನಾನು ಬೇರೆ ನಟಿಯ ಜೊತೆಗೆ ಮಾಡಿದಂತೆ ತ್ರಿಷಾರನ್ನು ಕೂಡ ಬೆಡ್ ರೂಮ್‌ಗೆ ಹೊತ್ತುಕೊಂಡು ಹೋಗಿ ಅತ್ಯಾಚಾರ ಮಾಡುವ ದೃಶ್ಯ ಇರುತ್ತದೆ ಎಂದುಕೊಂಡಿದ್ದೆ. ನಾನು ಹಲವು ಬಾರಿ ಅತ್ಯಾಚಾರದ ಸೀನ್‌ಗಳಲ್ಲಿ ನಟಿಸಿದ್ದೇನೆ. ಆದರೆ ‘ಲಿಯೋ’ ಸಿನಿಮಾದಲ್ಲಿ ತ್ರಿಷಾ ಮುಖವನ್ನು ಕೂಡ ನನಗೆ ತೋರಿಸಲಿಲ್ಲ’ ಎಂಬಂಥ ವಿವಾದಾತ್ಮಕ ಹೇಳಿಕೆಯನ್ನು ಮನ್ಸೂರ್ ನೀಡಿದ್ದರು.

   ʼಲಿಯೋ’ ಸಿನಿಮಾ ನಿರ್ದೇಶಕರಾದ ಲೋಕೇಶ್ ಕನಕರಾಜ್ ಮನ್ಸೂರ್ ಅಲಿ ಖಾನ್ ಗೆ ತೀರಾ ಆಪ್ತರಾದರೂ ಈ ವಿಷಯದಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ‘ನನ್ನ ಬಗ್ಗೆ ಅಸಹ್ಯವಾಗಿ ಮನ್ಸೂರ್ ಅಲಿ ಖಾನ್ ಮಾತನಾಡಿರುವ ವಿಡಿಯೋ ನೋಡಿದೆ. ಮನ್ಸೂರ್ ಅಲಿ ಖಾನ್ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರ ಮಾತುಗಳಲ್ಲಿ ಸ್ತ್ರೀದ್ವೇಷ, ಅಗೌರವ, ಕೆಟ್ಟ ಅಭಿರುಚಿ ಹಾಗೂ ಲೈಂಗಿಕ ವಾಂಛೆ ಇರುವುದು ಗೊತ್ತಾಗುತ್ತದೆ. ಅವರು ನನ್ನೊಂದಿಗೆ ನಟಿಸಲು ಆಸೆ ಪಡಬಹುದು. ಆದರೆ ಅಂತಹ ಕೆಟ್ಟ ವ್ಯಕ್ತಿಯೊಂದಿಗೆ ನಾನು ಎಂದಿಗೂ ಸ್ಕ್ರೀನ್ ಹಂಚಿಕೊಳ್ಳುವುದಿಲ್ಲ’ ಎಂದು ನಟಿ ತ್ರಿಷಾ ಕೃಷ್ಣನ್‌ ತೀರಾ ಸಿಟ್ಟಿನಿಂದ ಮಾತನಾಡಿದ್ದರು. ಅಸಭ್ಯವಾಗಿ ಮಾತನಾಡಿದ್ದಷ್ಟೇ ಅಲ್ಲದೆ ಮನ್ಸೂರ್‌ ಅಲಿ ಖಾನ್ ಚಿರಂಜೀವಿ ಮತ್ತು ಖುಷ್ಬು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ‌ ಮದ್ರಾಸ್ ಹೈಕೋರ್ಟ್‌ ಮನ್ಸೂರ್‌ ಅಲಿ ಖಾನ್‌ ಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತ್ತು.

Recent Articles

spot_img

Related Stories

Share via
Copy link