ತುಮಕೂರು : ಮರಳೂರು ಕೆರೆ ದಂಡೆ ಮೇಲಿನ ತ್ಯಾಜ್ಯ ತೆರವು

ತುಮಕೂರು :

      ನಗರದ ಮರಳೂರು ಕೆರೆ ದಂಡೆ ಮೇಲೆ ಹಲವು ವರ್ಷಗಳಿಂದ ಬಿದ್ದಿದ್ದ ತ್ಯಾಜ್ಯಕ್ಕೆ ಮುಕ್ತಿ ದೊರೆಯಿತು. ಕೋಳಿ ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ, ಪ್ಲಾಸ್ಟಿಕ್ ಕಸ, ನಿರುಪಯೋಗಿ ವಸ್ತುಗಳ ರಾಶಿಯೇ ಕೆರೆಯ ದಂಡೆ ಮೇಲಿತ್ತು. ದುರ್ವಸನೆ, ಕಸ ಕೆದಕಲು ಹಂದಿ, ನಾಯಿಗಳ ಹಿಂಡು ಸೇರಿ ಈ ರಸ್ತೆಯಲ್ಲಿ ಸಂಚರಿಸುವವರಿಗೆ ನಿತ್ಯಾ ಕಿರಿಕಿರಿಯಾಗುತ್ತಿತ್ತು. ಈ ತ್ಯಾಜ್ಯ ವಿಲೇವಾರಿ ಮಾಡಿ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿದ್ದವು.

      ಬುಧವಾರ ಮರಳೂರು ಕೆರೆ ಏರಿ ಮೇಲಿನ ಕಸದ ರಾಶಿ ತೆರವು ಮಾಡುವ ದೊಡ್ಡ ಕಾರ್ಯಾಚರಣೆಯೇ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಾನಗರ ಪಾಲಿಕೆ, ಜಿಲ್ಲಾ ಮಾಲಿನ್ಯ ನಿಯಂತ್ರಣಾ ಮಂಡಳಿ ಆಶ್ರಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಹಾಗೂ ಪರಿಸರ ರಕ್ಷಣಾ ದಿನದ ಅಂಗವಾಗಿ ಕೆರೆ ದಂಡೆಯ ತ್ಯಾಜ್ಯ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

      ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೇಟ್ಟಿಗಾರ್ ಈ ಕಾರ್ಯಕ್ರಮಕ್ಕೆ ಚಲನೆ ನೀಡಿದರು. 2 ಜೆಸಿಬಿ, 3 ಟಿಪ್ಪರ್, ಟ್ರಾಕ್ಟರ್‍ಗಳನ್ನು ಬಳಿಸಿ ನಗರ ಪಾಲಿಕೆಯ 30ಕ್ಕೂ ಹೆಚ್ಚು ಪೌರಕಾರ್ಮಿಕರು ಕೆರೆ ದಂಡೆ ಸ್ವಚ್ಚತೆ ಕಾರ್ಯ ನಿರ್ವಹಿಸಿದರು. ಕೆರೆ ಏರಿ ಮೇಲೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೂ ಕಸದ ರಾಶಿ ಬಿದ್ದಿತ್ತು. ಅಷ್ಟನ್ನೂ ತೆರವು ಮಾಡಲಾಯಿತು.

      ಮರಳೂರು ಕೆರೆ ದಂಡೆ ಮೇಲೆ ಅಪಾಯಕಾರಿ ತ್ಯಾಜ್ಯ ಹಾಕಲಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ತ್ಯಾಜ್ಯ ವಿಲೇವಾರಿ ಮಾಡಿ, ಕೆರೆ ದಂಡೆ ಸ್ವಚ್ಚಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬ ದೂರು ಬಂದಿದ್ದವು. ಹಾಗಾಗಿ, ನಗರಪಾಲಿಕೆ, ಮತ್ತಿತರ ಇಲಾಖೆಗೆ ಸ್ವಚ್ಚತೆಗೆ ಸೂಚನೆ ನೀಡಿದ್ದು, ಇಂದು ಆ ಕಾರ್ಯ ಸಾಧ್ಯವಾಯಿತು ಎಂದು ನ್ಯಾಯಾಧೀಶರಾದ ರಾಘವೇಂದ್ರ ಶೇಟ್ಟಿಗಾರ್ ಹೇಳಿದರು.

      ಮರಳೂರು ಕೆರೆಯಲ್ಲಿ ಕುಡಿಯುವ ನೀರು ಸಗ್ರಹಿಸುವ ಯೋಜನೆ ಇದೆ. ಈ ಕೆರೆಗೆ ಒಳಚರಂಡಿ ನೀರು ಹರಿದುಬರುತ್ತಿದೆ ಎಂಬ ದೂರು ಬಂದಿದ್ದು, ಪರಿಶೀಲಿಸಿ, ಸಮಸ್ಯೆ ನಿವಾರಣೆ ಮಾಡಿ ಎಂದು ನಗರಪಾಲಿಕೆ ನ್ಯಾಯಾಧೀಶರು ಸೂಚನೆ ನೀಡಿದರು.

      ಈ ವೇಳೆ ಮಾತನಾಡಿದ ನಗರಪಾಲಿಕೆ ಮೇಯರ್ ಫರೀದಾ ಬೇಗಂ, ನಗರ ಸ್ವಚ್ಚತೆಗೆ ಪಾಲಿಕೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಪಾಲಿಕೆಕೆಯ ಎಲ್ಲಾ ವಿಭಾಗಗಳ ಅಧಿಕಾರಿಗಳೊಂದಿಗೆ ಸ್ಪಂದಿಸಿ, ಸಾರ್ವಜನಿಕ ಕೆಲಸಗಳು ಸುಗಮವಾಗಿ ನಡೆಯಲು ಸಹಕರಿಸಬೇಕು. ಎಲ್ಲೆಂದರಲಿ ಕಸ ಹಾಕದೆ ನಗರದ ನೈರ್ಮಲ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.

     ನಗರಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ, ಮತ್ತೆ ಮರಳೂರು ಕೆರೆಯಲ್ಲಿ ಕಸ ತಂದು ಸುರಿಯದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲಿ ಹಾಕದಂತೆ ನಿಗಾ ವಹಿಸಲು ಪಾಲಿಕೆ ಸಿಬ್ಬಂದಿ ತಂಡವನ್ನು ನಿಯೋಜಿಸಲಾಗಿದೆ. ಕಸ ಹಾಕುವವರಿಗೆ 5ರಿಂದ 10 ಸಾವಿರ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

      ನಗರದ ಎಲ್ಲಾ 35 ವಾರ್ಡ್‍ಗಳಲ್ಲೂ ಪಾಲಿಕೆಯ ಕಸದ ವಾಹನ ಮನೆ ಬಾಗಿಲಿಗೆ ಬರುತ್ತವೆ. ಕಸವನ್ನು ಗಾಡಿಗೇ ಹಾಕಬೇಕು, ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕದೆ, ಪಾಲಿಕೆ ಕಸದ ಗಾಡಿಗೆ ಹಾಕಿ ಸಮರ್ಪಕ ವಿಲೇವಾರಿಗೆ ಸಹಕರಿಸಬೇಕು ಎಂದರು.

      ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ಹಾಕಲಾಗುವುದು, ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣದಲ್ಲಿದೆ. ಆದರೆ, ಹೊರವಲಯದಲ್ಲಿ ಬಳಕೆಯಲ್ಲಿರುವುದು ಗಮನಕ್ಕೆ ಬಂದಿದೆ. ಪೊಲೀಸರು, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಸಹಕಾರದಿಂದ ದಾಳಿ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

      ನಗರ ಪಾಲಿಕೆ ಸದಸ್ಯ ಧರಣೇಂದ್ರಕುಮಾರ್, ಆರೋಗ್ಯಾಧಿಕಾರಿ ಡಾ.ನಾಗೇಶ್‍ಕುಮಾರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಮಂಜುನಾಥ್, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‍ಗಳು ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ಗಿಡನೆಡುವ ಕಾರ್ಯಕ್ರಮ :

      ರಾಷ್ಟ್ರೀಯ ಐಕ್ಯತಾ ಸಪ್ತಾಹ ಹಾಗೂ ಪರಿಸರ ರಕ್ಷಣಾ ದಿನದ ಅಂಗವಾಗಿ ನಗರದ ಅಮಾನಿಕೆರೆ ಉದ್ಯಾನವನದಲ್ಲಿ ನ್ಯಾಯಾಧೀಶರಾದ ರಾಘವೇಂದ್ರ ಶೇಟ್ಟಿಗಾರ್ ಅವರು ಗಿಡನೆಟ್ಟು, ನೀರೆರೆದರು. ಪ್ರತಿ ದಿನವೂ ಪರಿಸರ ದಿನ ಆಚರಣೆ ಆಗಬೇಕು ಅವಕಾಶ ಸಿಕ್ಕಾಗಲೆಲ್ಲಾ ಗಿಡನೆಟ್ಟು ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಬೇಕು, ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಗಮನ ಹರಿಸಬೇಕು ಎಂದು ನ್ಯಾಯಾಧೀಶರು ಹೇಳಿದರು.

     ವಲಯ ಅರಣ್ಯಾಧಿಕಾರಿ ನಟರಾಜ್, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಕೇಶವಮೂರ್ತಿ, ವೆಂಕಟೇಶ್, ಬಾಲಕೃಷ್ಣಗೌಡ, ಲ್ಯಾಂಡ್ ಸ್ಕೇಪರ್ ಕೋಡಿಹಳ್ಳಿ ಜಗದೀಶ್ ಮತ್ತಿತರರು ಭಾಗವಹಿಸಿದ್ದರು.

ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳುವುದು ಎಲ್ಲರ ಜವಾಬ್ದಾರಿ. ಪ್ರತಿದಿನ ಪರಿಸರ ಸಂರಕ್ಷಣಾ ದಿನ ಆಚರಿಸಬೇಕು. ಗಿಡನೆಟ್ಟು, ಬೆಳೆಸುವ ಹವ್ಯಾಸ ಎಲ್ಲರಲ್ಲೂ ಬೆಳೆಯಬೇಕು.

-ರಾಘವೇಂದ್ರ ಶೇಟ್ಟಿಗಾರ್, ನ್ಯಾಯಾಧೀಶರು.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬೇಡಿ. ಮನೆ ಬಾಗಿಲಿಗೆ ಬರುವ ನಗರಪಾಲಿಕೆಯ ಕಸದ ವಾಹನಗಳಿಗೆ ಕಸ ನೀಡಿ, ಸಮರ್ಪಕವಾಗಿ ಕಸ ವಿಲೇವಾರಿಗೆ ಸಾರ್ವಜನಿಕರು ಸಹಕರಿಸಬೇಕು.

_ಫರೀದಾ ಬೇಗಂ, ಮೇಯರ್.

ಮರಳೂರು ಕೆರೆಯಲ್ಲಿ ಕಸ ಹಾಕುವುದರ ತಡೆಗೆ ನಿಗಾವಹಿಸಲು ಪಾಲಿಕೆ ಸಿಬ್ಬಂದಿಯ ತಮಡ ಮಾಡಲಾಗಿದೆ. ಕಸ ಹಾಕುವವರಿಗೆ 5ರಿಂದ 10 ಸಾವಿರ ರೂ.ವರೆಗೆ ದಂಡ ವಿಧಿಸಲಾಗುವುದು.

-ರೇಣುಕಾ, ಆಯುಕ್ತರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap