ಬೆಂಗಳೂರು:
ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಕೆಲವು ಸುದ್ದಿವಾಹಿನಿಗಳು ಮೈತ್ರಿ ಸರ್ಕಾರದ ವಿರುದ್ಧ ಹಾಗೂ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಪರವಾಗಿ ಹಾಗೂ ಕಾಂಗ್ರೆಸ್ ವಿರುದ್ಧ ತೇಜೋವಧೆ ಮಾಡುತ್ತಿರುವ ವಾಹಿನಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಎಂದು ಅವರು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸುದ್ದಿ ವಾಹಿನಿಗಳು ಪತ್ರಿಕೋದ್ಯಮದ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿವೆ. ಊಹಾಪೋಹದ ಸುದ್ದಿಗಳನ್ನು ಹರಡುವ ಕೆಲಸ ಮಾಡುತ್ತಿವೆ. ಬಿಜೆಪಿಯ ಅಣತಿಯಂತೆ ಕಾರ್ಯನಿರ್ವಹಿಸುತ್ತಿವೆ. ಮೈತ್ರಿ ಸರ್ಕಾರವನ್ನು ಹತ್ತಿಕ್ಕಲು ಬಿಜೆಪಿ ಜತೆ ಕೈಜೋಡಿಸಿವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವುದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಾಂಶಗಳಲ್ಲಿ ಸರ್ಕಾರ ಅಪಾಯದಲ್ಲಿದೆ. ಇಂತಿಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ. ಮುಂಬೈ ತೆರಳಲಿದ್ದಾರೆ. ರೆಸಾಟ್ರ್ಸ್ ರಾಜಕಾರಣದಲ್ಲಿ ತೊಡಗಿದ್ದಾರೆ ಎಂಬ ಸುದ್ದಿಗಳನ್ನು ಮುಖ್ಯಾಂಶದಲ್ಲಿ ಬಿತ್ತರಿಸುತ್ತವೆ. ಆದರೆ ಸುದ್ದಿಯ ತಿರುಳಿನಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ. ಹೀಗೆ ಜನರನ್ನು ದಾರಿ ತಪ್ಪಿಸಿ, ಆಡಳಿತ ವೈಖರಿಯ ಮೇಲೆ ಪರಿಣಾಮ ಬೀರುವಂತೆ ವರದಿ ಮಾಡುತ್ತಿವೆ ಎಂದರು.
ಅಸ್ಥಿರ ಪರಿಸ್ಥಿತಿ ನಿರ್ಮಿಸುವುದರಿಂದ ಆಡಳಿತ ಯಂತ್ರ ಹಳಿ ತಪ್ಪುತ್ತದೆ. ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದರಿಂದ ಆಗುವ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆಯೇ ಇಲ್ಲದೇ ವರದಿ ಮಾಡುತ್ತಿವೆ. ಇಂತಹ ವಾಹಿನಿಗಳ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ ಎಂದು ಆಪಾದಿಸಿದರು.
ಸತ್ಯ ಸಂಗತಿ ವರದಿ ಮಾಡಿದರೆ ನಮ್ಮ ಯಾವುದೇ ಅಭ್ಯಂತರವಿಲ್ಲ. ತಪ್ಪು ಮಾಡಿದಾಗ ಎಚ್ಚರಿಸಿ, ನಮ್ಮ ಜಾತಕವನ್ನು ಬಯಲಿಗೆ ತನ್ನಿ. ಆದರೆ ಏನೂ ಇಲ್ಲದೇ ಸುಖಾ ಸುಮ್ಮನೆ ವರದಿಗಳನ್ನು ಮಾಡುವುದು ಸರಿಯಲ್ಲ. ಆದರೆ ಇಪ್ಪತ್ತು ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡುತ್ತಾರೆ ಎಂದು ಇಂದು ವರದಿ ಮಾಡಲಾಗಿದೆ. ಯಾವ ಶಾಸಕರು, ಯಾವಾಗ ಭೇಟಿ ಮಾಡುತ್ತಾರೆ ಎನ್ನುವ ವಿವರಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾಗೆಂದು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿದೆ ಎಂದು ನಾನು ಹೇಳುವುದಿಲ್ಲ. ನಮ್ಮಲ್ಲೂ ಸಣ್ಣಪುಟ್ಟ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಕಂಡುಕೊಂಡಿದ್ದೇವೆ. ಇನ್ನೂ ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಆದರೆ ನಮ್ಮ ಸಮಸ್ಯೆಗಳು ಹತ್ತಿಪ್ಪತ್ತು ಶಾಸಕರು ರಾಜೀನಾಮೆ ನೀಡುವ ಮಟ್ಟದಲ್ಲಿಲ್ಲ. ಸರ್ಕಾರ ಪತನವಾಗುಷ್ಟು ಗಂಭೀರವಾಗಿಲ್ಲ. ಜಾರಕಿಹೊಳಿ ಸಹೋದರರು ತಾವು ಪಕ್ಷ ತೊರೆಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನಮ್ಮ ಯಾವುದೇ ಶಾಸಕರು ಪಕ್ಷ ಬಿಟ್ಟು ಬಿಜೆಪಿ ಸೇರುವುದಾಗಿ ಹೇಳಿಲ್ಲ.
ಹೀಗಿರುವಾಗ ಇಂತಿಷ್ಟು ಶಾಸಕರು ರೆಸಾಟ್ರ್ಸ್‍ಗೆ ಹೋಗುತ್ತಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ವರದಿ ಮಾಡಲಾಗುತ್ತಿದೆ. ಇದು ಒಳ್ಳೆಯ ಪತ್ರಿಕೋದ್ಯಮವಲ್ಲ ಎಂದು ದಿನೇಶ್ ಗುಂಡೂರಾವ್ ಸುದ್ದಿ ವಾಹಿನಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ರಾಷ್ಟ್ರಮಟ್ಟದಲ್ಲೂ ಕೆಲವು ವಾಹಿನಿಗಳು ಕಾಂಗ್ರೆಸ್ ವಿರುದ್ಧ ಕಾರ್ಯನಿರ್ವಹಿಸುತ್ತಿವೆ. ಐದರಿಂದ ಹತ್ತು ನಿಮಿಷ ಅಂತಹ ಸುದ್ದಿ ವಾಹಿನಿಗಳನ್ನು ನೋಡಿದೆ ಅದು ಯಾರ ಪಕ್ಷದ ಪರವಾಗಿದೆ ಎನ್ನುವುದು ಬಹಿರಂಗವಾಗುತ್ತದೆ. ಪತ್ರಿಕೋದ್ಯಮಕ್ಕೆ ವಿಶ್ವಾಸಾರ್ಹತೆ ಮುಖ್ಯ. ವಿಶ್ವಾಸ ಕೆಳೆದುಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಿವಿ ಮಾತು ಹೇಳಿದರು.
ಮೈತ್ರಿ ಸರ್ಕಾರ ವಿರುದ್ಧ ಇದೇ ಧೋರಣೆ ಮುಂದುವರೆಸಿದರೆ ಬಿಜೆಪಿ ವಿರುದ್ಧ ದಂಗೆ ಏಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಅಸ್ಥಿರಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿಂದೆ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿದ ಕೆಟ್ಟ ಉದಾಹರಣೆ ಇದೆ. ಇಂತಹ ಸಂದರ್ಭದಲ್ಲಿ ಕುಮಾರ ಸ್ವಾಮಿ ಅವರು ಭಾವನಾತ್ಮಕವಾಗಿ ಹೀಗೆ ಹೇಳಿರಬಹುದು. ಇದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ ಎಂದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಿದ್ದು ಸರಿಯಲ್ಲ. ಇದನ್ನು ಪಕ್ಷ ಒಪ್ಪುವುದಿಲ್ಲ. ಯಾರದೇ ಮನೆಯ ಮುಂದೆ ಪ್ರತಿಭಟನೆ ಮಾಡುವುದನ್ನು ಪಕ್ಷ ಒಪ್ಪುವುದಿಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








