
ಕಿರುತೆರೆಯಲ್ಲಿ ಪ್ರಸಾರವಾಗುವ ಕಾಮಿಡಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಹಲವು ಕಲಾವಿದರು ಈಗ ಚಿತ್ರರಂಗದಲ್ಲೂ ಬಿಜಿಯಾಗಿದ್ದಾರೆ. ಅದೇ ತರಹ, ‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾ ಭಾರತ’ ರಿಯಾಲಿಟಿ ಶೋಗಳಲ್ಲಿ ಮಿಂಚಿದ ನಟ-ನಟಿಯರನ್ನಿಟ್ಟುಕೊಂಡು, ಇದೀಗ ಸದ್ದಿಲ್ಲದೆ ಒಂದು ಚಿತ್ರ ಮಾಡಲಾಗಿದೆ.
ಅದೇ ‘ಹಳ್ಳಿ ಹೈಕ್ಳ ಪ್ಯಾಟೆ ಲೈಫು’. ಈ ಚಿತ್ರ ಇಂದು (ಫೆ. 4) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮೂವರು ವಿದ್ಯಾವಂತ ಹಳ್ಳಿ ಯುವಕರು ವ್ಯವಸಾಯ ಮಾಡುವುದು ಅವಮಾನ ಎಂದುಕೊಂಡು, ಪಟ್ಟಣಕ್ಕೆ ಪ್ರಯಾಣ ಬೆಳೆಸುವುದು ಚಿತ್ರದ ಕಥೆಯಂತೆ. ಅಲ್ಲಿನ ಕಲರ್ಫುಲ್ ಜೀವನಕ್ಕೆ ಮಾರುಹೋಗುವ ಅವರು, ಅಲ್ಲಿ ಏನೆಲ್ಲ ಅನುಭವಿಸುತ್ತಾರೆ ಮತ್ತು ಹಳ್ಳಿಯೇ ವಾಸಿ ಎಂದು ಹೇಗೆ ವಾಪಸ್ಸಾಗುತ್ತಾರೆ ಎನ್ನುವುದನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಈ ಚಿತ್ರವನ್ನು ಮಂಜು ಗಂಗಾವತಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
‘ಪದ್ಮಾವತಿ’ ಖ್ಯಾತಿಯ ತ್ರಿವಿಕ್ರಂ, ಮಡೆನೂಡು ಮನು, ಜಗ್ಗಪ್ಪ, ರಾಘು, ಶರಣ್ಯ, ಹಿಮಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ‘ಬಿಗ್ ಬಾಸ್’ ವಿಜೇತ ಮಂಜು ಪಾವಗಡ, ಗೋವಿಂದೇಗೌಡ, ಮೀಸೆ ಆಂಜನಪ್ಪ ಮುಂತಾದವರು ಸಹ ಚಿತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು, ಮಂಡ್ಯ, ಸಕಲೇಶಪುರ, ರಾಮನಗರ ಮುಂತಾದ ಕಡೆ ಚಿತ್ರೀಕರಣವಾಗಿರುವ ‘ಹಳ್ಳಿ ಹೈಕ್ಳ ಪ್ಯಾಟೆ ಲೈಫು’ ಚಿತ್ರಕ್ಕೆ ಯುಗಾಂತ್ ಸಂಗೀತ ಮತ್ತು ನಾಗರಾಜಮೂತಿರ್ ಛಾಯಾಗ್ರಹಣವಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
