ರೈತರಿಂದ ಬೆಸ್ಕಾಂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಗಮನಕ್ಕೆ ಬಂದಿದೆ : ಇಂದಿರಾ ದೇನಾನಾಯ್ಕ್

ಮಧುಗಿರಿ

    2019-20 ರಲ್ಲಿ 107.92 ಕೋಟಿ ರೂ. ಅನುದಾನ ನಿಗದಿಯಾಗಿದ್ದು, 108.22 ಕೋಟಿ ರೂ.ಬಿಡುಗಡೆಯಾಗಿ 104.16 ಕೋಟಿ ರೂ. ಖರ್ಚಾಗಿದೆ. ಉಳಿಕೆ 8.55 ಕೋಟಿ ರೂ.ಗಳನ್ನು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಬಳಸಲು ಅನುಮೋದನೆಗೆ ಸಭೆ ಒಪ್ಪಿಗೆ ಸೂಚಿಸಿದೆ ಎಂದು ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯಕ್ ತಿಳಿಸಿದರು.

    ಅವರು ಪಟ್ಟಣದ ತಾಪಂ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಟ್ಟಡದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಭಿವೃದ್ಧಿ ಇಲಾಖೆಯು ಬಾಡಿಗೆಗೆ ಇದೆ. ಆದರೆ ವರ್ಷವಾದರೂ ಬಾಡಿಗೆ ನೀಡದ ಸಿಡಿಪಿಓಗೆ ಬಾಡಿಗೆ ನೀಡಲಿ, ಇಲ್ಲ ಕಚೇರಿ ಖಾಲಿ ಮಾಡಲಿ.

     ಕಚೇರಿಯನ್ನು ಖಾಲಿ ಮಾಡಿದರೆ ಅದನ್ನು ಅಕ್ಷರ ದಾಸೋಹ ಕಾರ್ಯ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿ, ಪಂಚಾಯತ್ ರಾಜ್ ಇಲಾಖೆಯು ಜೀವಗೊಂಡನಹಳ್ಳಿ-ಕದಿರೆಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುತ್ತಿದ್ದು, ಎಂಜಿನಿಯರ್ ಅನುಪಸ್ಥಿತಿಯಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆ. ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳ್ಳುವಂತೆ ಇಇ ಸುರೇಶ್ ರೆಡ್ಡಿಗೆ ಸೂಚಿಸಿದರು.

     ರೈತರಿಂದ ಟಿಸಿ ಅಳವಡಿಸಲು ಬೆಸ್ಕಾಂ ಅಧಿಕಾರಿಗಳು 14 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಆ ಹಣವನ್ನು ವಾಪಸ್ಸು ಕೊಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳ ಬೇಕೆಂದು ಬೆಸ್ಕಾಂ ಅಧಿಕಾರಿಗೆ ಸೂಚಿಸಿ, ರೇಷ್ಮೆ ಇಲಾಖೆಯ ಕೊಡಿಗೇನಹಳ್ಳಿ ವಿಭಾಗದ ಅಧಿಕಾರಿ ರಾಜು, ನರೇಗಾ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವೆಸಗಿರುವ ಬಗ್ಗೆ ನನ್ನ ಬಳಿ ದಾಖಲೆ ಇದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

     ಪಶು ಸಂಗೋಪನಾ ಇಲಾಖೆಯು ಮೇವು ಬ್ಯಾಂಕ್‍ನಲ್ಲಿ ಹಸಿ ಮೇವು ವಿತರಿಸುತ್ತಿದ್ದು, ರೈತರಿಗೆ ಒಣ ಮೇವನ್ನು ನ್ಯಾಯಯುತ ಬೆಲೆಯಲ್ಲಿ ನೀಡುವಂತೆ ತಾಕೀತು ಮಾಡಿದರು. ಇದಕ್ಕೆ ಸ್ಪಷ್ಟನೆ ನೀಡಿದ ಪಶು ಇಲಾಖೆ ಅಧಿಕಾರಿ ಡಾ. ನಾಗಭೂಷಣ್, ತಾಲ್ಲೂಕಿನಲ್ಲಿ 5,300 ಟನ್ ಮೇವು ವಿತರಿಸಲಾಗಿದೆ. ಎಲ್ಲಿಯೂ ಕಳಪೆ ಮೇವನ್ನು ನೀಡಿಲ್ಲ. ಟೆಂಡರ್‍ದಾರರು ತಂದ ಹಸಿ ಮೇವನ್ನು ತಿರಸ್ಕರಿಸಲಾಗಿದೆ ಹಾಗೂ ಮನೆಮನೆಗೆ ಮೇವನ್ನು ಸಮರ್ಪಕವಾಗಿ 2ನೇ ಸುತ್ತಿನಲ್ಲಿ ವಿತರಿಸಲಾಗುತ್ತಿದೆ ಎಂದರು.

      ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಮಾತನಾಡಿ, ಮುಂಗಾರು ಆರಂಭವಾಗಿದ್ದು, ಬಿತ್ತನೆ ಬೀಜವನ್ನು ವಿತರಿಸಲು ಇಲಾಖೆ ಕ್ರಮ ಕೈಗೊಂಡಿದೆ. ರಸಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದರು.ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಹಿಂದೆ ಪ.ಜಾ. ಹಾಗೂ ಇತರೆ ಜನಾಂಗದ ದಂಪತಿಗಳಿಗೆ ಸಹಾಯ ಧನವಿತ್ತು. ಈಗ ಸರಕಾರವು ಪ. ಪಂಗಡದ ವಧುವನ್ನು ವಿವಾಹವಾದ ಇತರೆ ಜನಾಂಗದ ಜೋಡಿಗೆ 3 ಲಕ್ಷ ರೂ. ಸಹಾಯ ಧನವನ್ನು ಘೋಷಿಸಿದೆ ಎಂದು ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.

      ಸಭೆಯಲ್ಲಿ ತಾಪಂ ಇಒ ಆರ್.ಬಿ.ನಂದಿನಿ, ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ರಾಜು, ಎಡಿ ದೊಡ್ಡಸಿದ್ದಪ್ಪ, ಎಒ ದೊಡ್ಡಲಿಂಗಪ್ಪ, ತಾಪಂ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link