ಡಾಬಸ್ ಪೇಟೆ:
ದರ್ಖಾಸು ಪೋಡಿ ಆಂದೋಲನದ ಭಾಗವಾಗಿ ರೈತರಿಗೆ ಬಹುಮಾಲಿಕತ್ವದ ಪಹಣಿಗಳನ್ನು ಏಕ ಮಾಲಿಕತ್ವಕ್ಕೆ ಮಾಡಿಕೊಡಲು ಯಾವುದೇ ಮಧ್ಯವರ್ತಿಗಳಿಗೆ ಆಸ್ಪದ ನೀಡದೆ ಕಂದಾಯ ಇಲಾಖೆ ಅಧಿಕಾರಿಗಳು ಶಾಸಕರ ಸೂಚನೆಯಂತೆ ತಾಲ್ಲೂಕಿನಾದ್ಯಂತ ರೈತರ ಬಳಿಗೆ ತೆರಳಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ನೆಲಮಂಗಲ ತಹಶೀಲ್ದಾರ್ ಅಮೃತ್ ಅತ್ರೇಶ್ ತಿಳಿಸಿದರು.
ಸೋಂಪುರ ಹೋಬಳಿಯ ಕರಿಮಣ್ಣೆ, ತಟ್ಟೇಗೆರೆ , ನಿಡವಂದ ಗ್ರಾಮಗಳಲ್ಲಿ ರೈತರ ಜಮೀನಿಗೆ ತೆರಳಿ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ ವಾರ ಸೋಂಪುರ ಹೋಬಳಿ ವ್ಯಾಪ್ತಿಯ ಅಗಳಕುಪ್ಪೆ, ಕೃಷ್ಣಾಪುರ, ಕಾಮಲಾಪುರ, ದೇವರಹೊಸಹಳ್ಳಿ, ಬೀರಗೊಂಡನಹಳ್ಳಿ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದು, ಇಂದು ಇನ್ನಷ್ಟು ಹಳ್ಳಿಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದು ಮುಂದೆ ಶೀಘ್ರವಾಗಿ ಇಡೀ ತಾಲ್ಲೂಕಿನಲ್ಲಿ ಸರ್ಕಾರದ ಆದೇಶದಂತೆ ಶಾಸಕರ ಸೂಚನೆಯಂತೆ ದರ್ಖಾಸು ಪೋಡಿ ಆಂದೋಲನ ಮುಗಿಸುವ ಗುರಿ ಹೊಂದಿದ್ದು ಇದರಿಂದ ೪೯೦ ಸರ್ವೇ ನಂಬರ್ ಗಳಲ್ಲಿ ಸರಿಸುಮಾರು ನಾಲ್ಕು ಸಾವಿರದಿಂದ ಐದು ಸಾವಿರ ರೈತರಿಗೆ ಇದರಿಂದ ಅನುಕೂಲವಾಗಲಿದ್ದು, ಜೊತೆಗೆ ರೈತರ ಜಮೀನುಗಳಿಗೆ ರಸ್ತೆ ಸಮಸ್ಯೆ ಬಗ್ಗೆ ರೈತರು ಮನವಿ ಮಾಡಿದ್ದು ನಕಾಶೆ ಕಂಡ ದಾರಿಗಳು ಎಲ್ಲೆಲ್ಲಿ ಮುಚ್ಚಲಾಗಿದೆ ಅವನ್ನು ಜರೂರಾಗಿ ತೆರವುಗೊಳಿಸಲಾಗುತ್ತಿದ್ದು, ಜೊತೆಗೆ ಹಿಡುವಳಿ ಜಮೀನುಗಳಿಗೆ ರಸ್ತೆ ಸಮಸ್ಯೆಗಳಿದ್ದು ಈ ಜಮೀನುಗಳಿಗೆ ಸರ್ಕಾರದ ಆದೇಶದಂತೆ ರೂಢಿ ರಸ್ತೆಗಳಿದ್ದಲ್ಲಿ ಅವನ್ನು ಕೂಡ ಬಿಡಿಸಿಕೊಡುವ ಇಲ್ಲವೇ ನ್ಯಾಯಾಲಯದ ಆದೇಶದಂತೆ ಬಿಡಿಸಿಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಮುಖಂಡ ಅಗಳಕುಪ್ಪೆ ಗೋವಿಂದರಾಜು ಮಾತನಾಡಿ ಹಲವು ವರ್ಷಗಳಿಂದ ರೈತರು ಜಮೀನಿನ ಮಾಲೀಕರಾಗಿದ್ದರೂ ಸರ್ಕಾರದ ಯಾವುದೇ ಸೌಲಭ್ಯ ಸಿಗದೆ ವಂಚಿತರಾಗುತ್ತಿದ್ದರು ಅಂತಹವರಿಗೆ ಆದ್ಯತೆ ನೀಡುವ ಉದ್ದೇಶದಿಂದ ನಮ್ಮ ಶಾಸಕರಾದ ಎನ್.ಶ್ರೀನಿವಾಸ್‌ರವರ ಸೂಚನೆಯಂತೆ ದರ್ಖಾಸು ಪೋಡಿ ಆಂದೋಲನ ನೆಲಮಂಗಲ ಕ್ಷೇತ್ರದಾದ್ಯಂತ ನಡೆಯುತ್ತಿದ್ದು ರೈತರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಮುನಿರಾಜು, ಮುಖಂಡರಾದ ನಾಗರಾಜು ಪಾರ್ಥ, ನಾರಾಯಣಸ್ವಾಮಿ, ಚಿಕ್ಕಣ್ಣ ಸೇರಿದಂತೆ ರೈತರು ಇದ್ದರು.
