ತುಮಕೂರು:
ಹಾಲನ್ನು ಕಲಬೆರಕೆ ಮಾಡುವವರ ವಿರುದ್ಧ ಎಚ್ಚರಿಕೆಯ ಸಂದೇಶವನ್ನು ನೀಡಿರುವ ಸುಪ್ರೀಂಕೋರ್ಟ್ ಈ ಸಂಬಂಧ ವ್ಯಕ್ತಿಯೊಬ್ಬನನ್ನು ಜೈಲಿಗೆ ಕಳುಹಿಸಿದೆ. ಕುಡಿಯುವ ಹಾಲಿಗೆ ಸಂಬಂಧಿಸಿದಂತೆ ಕಲಬೆರಕೆ ಮಾಡುವ ಎಲ್ಲರಿಗೂ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.
24 ವರ್ಷಗಳ ಸುದೀರ್ಘ ಅವಧಿಯ ಕಾನೂನು ಹೋರಾಟಗಳಲ್ಲಿ ಕಲಬೆರಕೆ ಮಾಡಿದಾತನಿಗೆ ಕೊನೆಗೂ ತಾನು ಮಾಡಿದ ಅನ್ಯಾಯವನ್ನು ಜಯಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೆಳಗಿನ ಹಂತದ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‍ವರೆಗೂ ಹಾದಿ ಸವೆಸಿದ್ದ ವ್ಯಕ್ತಿಗೆ ಅಕ್ಟೋಬರ್ 4 ರಂದು ಸುಪ್ರೀಂಕೋರ್ಟ್ 6ತಿಂಗಳ ಸೆರೆ ಮನೆವಾಸ ವಿಧಿಸಿ ತೀರ್ಪು ನೀಡಿದೆ.
ಏನಿದು ಪ್ರಕರಣ?
ಉತ್ತರ ಪ್ರದೇಶದ ಗ್ರಾಮವೊಂದರ ರಾಜ್ ಕುಮಾರ್ ಎಂಬ ಹಾಲು ಉತ್ಪಾದಕ ವ್ಯಕ್ತಿಯೊಬ್ಬ ಹಾಲಿಗೆ ನೀರು ಬೆರೆಸಿ ಮಾರಾಟ ಮಾಡುವಲ್ಲಿ ನಿರತನಾಗಿದ್ದ. 1995ರ ನವೆಂಬರ್ ತಿಂಗಳಿನಲ್ಲಿ ಈತ ಸರಬರಾಜು ಮಾಡುವ ಹಾಲನ್ನು ಪರೀಕ್ಷಿಸಲಾಗಿ ಶೇ.4.6ರಷ್ಟು ಹಾಲಿನ ಫ್ಯಾಟ್ ಅಂಶ, 7.7ರಷ್ಟು ಫ್ಯಾಟ್ ರಹಿತ ಅಂಶ ಇರುವುದು ಪತ್ತೆಯಾಗಿತ್ತು. ಹಾಲಿನ ಗುಣಮಟ್ಟ ಸರಿಯಿಲ್ಲ ಎಂದು ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಸ್ಥಳೀಯ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್‍ತನಕ ಈ ಪ್ರಕರಣ ಒಯ್ಯಲ್ಪಟ್ಟಿತ್ತು.
ಕಳೆದ ಅ.4 ರಂದು ತೀರ್ಪು ನೀಡಿದ ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರುಗಳಿದ್ದ ವಿಭಾಗೀಯ ಪೀಠವು ಎಷ್ಟೇ ವರ್ಷಗಳಾಗಲಿ, ಪ್ರಕರಣ ಸಣ್ಣ ಮಟ್ಟದ್ದೇ ಆಗಿರಲಿ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಆಹಾರ ಸುರಕ್ಷತೆ ಕಾಯ್ದೆ ಅಡಿಯಲ್ಲಿ ಆತನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತು.
ಶಿಕ್ಷೆ ಪ್ರಕಟಿಸಿರುವುದು ಮಾತ್ರವಲ್ಲ, ಇನ್ನು ಮುಂದೆ ಇಂತಹ ಪ್ರಕರಣಗಳು ಕಂಡುಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಸಹ ಸುಪ್ರೀಂಕೋರ್ಟ್ ಎಚ್ಚರಿಸಿದೆ. ಹಾಲನ್ನು ಮಕ್ಕಳಿಗೆ, ಕಾಯಿಲೆ ಇರುವವರಿಗೆ ಸೇರಿದಂತೆ ಎಲ್ಲರೂ ಕುಡಿಯುತ್ತಾರೆ. ಇಂತಹ ಅತ್ಯವಶ್ಯಕ ಜೀವನೋಪಯೋಗಿ ಆಧಾರವಾಗಿರುವ ಹಾಲಿಗೆ ಕಲಬೆರಕೆ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ತೀರ್ಪು ನೀಡುವುದಕ್ಕೂ ಮುನ್ನ ಈವರೆಗಿನ ಹಲವು ಪ್ರಕರಣಗಳನ್ನು ಮತ್ತು ಉದಾಹರಣೆಗಳನ್ನು ಮುಂದಿಟ್ಟುಕೊಂಡಿದೆ.
ಹೆಚ್ಚಿರುವ ಕಲಬೆರಕೆ ಪ್ರಕರಣಗಳು
ಆಹಾರೋತ್ಪನ್ನಗಳ ಕಲಬೆರಕೆ ಪ್ರಕರಣಗಳು ದೇಶಾದ್ಯಂತ ವರದಿಯಾಗುತ್ತಲೇ ಇವೆ. ಅದರಲ್ಲೂ ವಿಶೇಷವಾಗಿ ಕುಡಿಯುವ ಹಾಲಿಗೂ ಕಲಬೆರಕೆ ಮಾಡಿ ಹಾಲನ್ನು ಕಲುಷಿತಗೊಳಿಸುತ್ತಿರುವ ಪ್ರಕರಣಗಳು ದಿಗ್ಬ್ರಮೆ ಮೂಡಿಸುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಇದು ಆತಂಕಕಾರಿಯಾಗಿರುವ ವಿಷಯ. ಕರ್ನಾಟಕದಲ್ಲಿಯೂ ಕಲಬೆರಕೆ ಪ್ರಕರಣಗಳು ವರದಿಯಾಗುತ್ತಿದ್ದರೂ ಉತ್ತರ ಭಾರತದಷ್ಟು ಗಂಭೀರವಾಗಿಲ್ಲ.
2006 ರಲ್ಲಿ ರೂಪಿತವಾದ ಆಹಾರ ಸುರಕ್ಷತಾ ಅಧಿನಿಯಮದ ಪ್ರಕಾರ 2011 ರಲ್ಲಿ ನಿಯಮಗಳನ್ನು ರೂಪಿಸಲಾಯಿತು. ಆಹಾರದ ಗುಣಮಟ್ಟ ಹೇಗಿರಬೇಕು ಎಂಬ ಅಂಶ ಇದರಲ್ಲಿ ಅಡಕವಾಗಿದೆ. ಆಹಾರ ಮತ್ತು ಸುರಕ್ಷತಾ ಇಲಾಖೆಯು ನಂತರದ ದಿನಗಳಲ್ಲಿ ಕೈಗೊಂಡ ತನಿಖೆಗಳಿಂದ ಹಲವು ಅಕ್ರಮಗಳು ಹೊರಬರತೊಡಗಿದವು. ಹಾಲು ಹೆಚ್ಚಿನ ಫ್ಯಾಟ್ ಬರಲೆಂದು ಹಾಗೂ ಕೆಡದಂತೆ ಮಾಡಲು ಕುಡಿಯುವ ಹಾಲಿಗೂ ಯೂರಿಯಾ, ಡಿಟರ್ಜೆಂಟ್, ಸಿಂಥಟಿಕ್‍ನಂತಹ ಕೆಲವು ಕೃತಕ ವಸ್ತುಗಳನ್ನು ಸೇರಿಸಿ ಕಲಬೆರಕೆ ಮಾಡುವ ಪ್ರಕರಣಗಳು ಬಹಿರಂಗವಾಗತೊಡಗಿದವು.
ಕುಡಿಯುವ ಹಾಲಿಗೂ ಕಲಬೆರಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ಸ್ವಾಮಿ ಅಚ್ಯುತಾನಂದ ತೀರ್ಥರ ವಿರುದ್ಧ ಕೇಂದ್ರ ಸರ್ಕಾರ ಪ್ರಕರಣ ಗಮನ ಸೆಳೆಯುವ ಒಂದು ಪ್ರಕರಣವಾಯಿತು. ಉತ್ತರಖಂಡ್, ಉತ್ತರ ಪ್ರದೇಶ, ರಾಜಸ್ಥಾನ್, ಹರಿಯಾಣ, ದೆಹಲಿ ಮತ್ತಿತರ ರಾಜ್ಯಗಳಲ್ಲಿ ಹಾಲಿನ ಕಲಬೆರಕೆ ಯಾಗುತ್ತಿದೆ.
ರೀಫೈಂಡ್ ಆಯಿಲ್, ಕಾಸ್ಟಿಕ್ ಸೊಡಾ ಇತ್ಯಾದಿಗಳನ್ನು ಮಿಶ್ರಣ ಮಾಡಲಾಗುತ್ತಿದೆ ಎಂಬ ದೂರುಗಳನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ಪರಿಗಣಿಸಿತು. 2011 ರಲ್ಲಿ ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರವು ಸಲ್ಲಿಸಿರುವ ವರದಿಯನ್ನು ಪರಿಗಣಿಸಿತು. ಶೇ.68 ರಷ್ಟು ಪ್ರಮಾಣದ ಹಾಲು ಕಲಬೆರಕೆಯಾಗುತ್ತಿದೆ ಎಂದು ಆಹಾರ ಸುರಕ್ಷತಾ ಪ್ರಾಧಿಕಾರವು ವರದಿಯಲ್ಲಿ ತಿಳಿಸಿತ್ತು.
ಇದೆಲ್ಲವನ್ನೂ ಪರಿಗಣಿಸಿದ ಸುಪ್ರೀಂಕೋರ್ಟ್ 2012 ರಲ್ಲಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒಂದು ಸೂಚನೆ ನೀಡಿ, ಆಹಾರ ಸುರಕ್ಷತಾ ಕಾಯ್ದೆ ಅನುಗುಣವಾಗಿ ಆಹಾರ ಮತ್ತು ಹಾಲು ಇದೆಯೆ ಎಂಬುದನ್ನು ಪರೀಕ್ಷಿಸಬೇಕು, ಕೆಮಿಕಲ್ ಮತ್ತಿತರ ಸಾಮಗ್ರಿಗಳನ್ನು ಬಳಸಿ ಹಾಲು ಮತ್ತು ಆಹಾರ ಪದಾರ್ಥಗಳನ್ನು ಕಲಬೆರಕೆ ಮಾಡಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು, ಸೂಕ್ತ ಉಪಕರಣಗಳನ್ನು ಬಳಸಿ ಲ್ಯಾಬೋರೇಟರಿ ಟೆಸ್ಟಿಂಗ್ ಮೂಲಕ ಹಾಲು ಪರೀಕ್ಷಿಸಬೇಕು, ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಬೇಕು, ಆಹಾರ ಸುರಕ್ಷತಾ ಕಾಯಿದೆಯ ಕಲಂ 18ರ ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು ಎಂಬ ಸೂಚನೆಯನ್ನು ನೀಡಿತ್ತು.
ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಆಹಾರ ಸುರಕ್ಷತಾ ಪ್ರಾಧಿಕಾರವು ಕಲಬೆರಕೆ ಮಾಡುವ ವ್ಯಕ್ತಿಗಳ ವಿರುದ್ಧ ಈಗ ಇರುವ ಶಿಕ್ಷೆಯ ಪ್ರಮಾಣವನ್ನು 6ತಿಂಗಳಿನಿಂದ ಕನಿಷ್ಠ 7ವರ್ಷಗಳವರೆಗೆ ಗರಿಷ್ಠ ಜೀವಾವಧಿ ಶಿಕ್ಷೆಗೆ ಒಳಪಡಿಸುವಂತೆ ತಿದ್ದುಪಡಿಗೆ ಶಿಫಾರಸ್ಸು ಮಾಡಿದೆ.
ಕಾನೂನಿನ ಕಠಿಣ ಶಿಕ್ಷೆಗಳು ಏನೇ ಇರಲಿ. ಕುಡಿಯುವ ಹಾಲಿಗೂ ಕಲಬೆರಕೆ ಮಾಡಿ ಮಾರುತ್ತಾರೆಂದರೆ, ಅದರಲ್ಲಿಯೂ ಹಣ ಮಾಡುವ ದಂಧೆ ಮಾಡಿಕೊಳ್ಳುತ್ತಾರೆಂದರೆ ಅದೊಂದು ಕ್ಷಮಿಸಲಾರದ ಅಕ್ಷಮ್ಯ ಅಪರಾಧ. ಹಾಲಿಗೆ ಮಿಶ್ರಣ ಮಾಡುವುದು ಒಂದು ಕಡೆಯಾದರೆ ಹಾಲಿನ ಪುಡಿಗೂ ಕೆಲವೊಂದು ರಾಸಾಯನಿಕ ಅಂಶಗಳನ್ನು ಬಳಸುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡದೇ ಇರದು.
ಹಾಲು ಉತ್ಪಾದನೆ, ಸರಬರಾಜು ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಅಧಿಕೃತ, ಅನಧಿಕೃತ ಸಂಸ್ಥೆಗಳು ಬಹಳಷ್ಟಿವೆ. ಕೆಲವು ಸಂಸ್ಥೆಗಳು ಗುಣಮಟ್ಟ ಪರಿಶೀಲನೆಗೆ ಒಳಪಡಿಸಿದರೆ ಮತ್ತೆ ಕೆಲವು ಕಡೆ ಈ ಯಾವುದೇ ಮಾನದಂಡಗಳು ಇರುವುದಿಲ್ಲ. ಈ ಬಗ್ಗೆ ಸರಿಯಾದ ನಿಗಾ ಮತ್ತು ಕ್ರಮ ಜರುಗಿಸುವ ವ್ಯವಸ್ಥೆ ಯಾಗಬೇಕು. ಯಾರೇ ಆಗಲಿ ಹಾಲಿಗೆ ಇತರೆ ಅಂಶಗಳನ್ನು ಮಿಶ್ರಣ ಮಾಡುವುದು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸುವ ವ್ಯವಸ್ಥೆ ಜಾರಿಯಾಗಬೇಕು. ತಪ್ಪಿತಸ್ಥರು ಜೈಲು ಕಂಬಿ ಎಣಿಸಬೇಕು. ಇಂತಹವರಿಗೆಲ್ಲ ಇತ್ತೀಚೆಗಷ್ಟೇ ಹೊರ ಬಂದ ಸುಪ್ರಿಂಕೋರ್ಟ್ ತೀರ್ಪು ಒಂದು ಎಚ್ಚರಿಕೆಯ ಸಂದೇಶ.