ತುಮಕೂರು:
ಸಿದ್ದಗಂಗಾ ಶ್ರೀಗಳ ಅಂತಿಮ ದರ್ಶನದ ವೇಳೆ ಕರ್ತವ್ಯದಲ್ಲಿದ್ದ ತುಮಕೂರು ಎಸ್ಪಿ ದಿವ್ಯಾ ಗೋಪಿನಾಥ್ ಮೇಲೆ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ರವರು ಗರಂ ಆದ ವಿಡಿಯೋ ವೈರಲ್ ಆಗಿ ಸಾಮಾಜಿಕ ಚರ್ಚೆಗೆ ಗ್ರಾಸವಾಗಿದೆ.
ಘಟನೆ:
ಶ್ರೀಗಳ ಕ್ರಿಯಾ ಸಮಾಧಿ ವಿಧಿವಿಧಾನ ವೀಕ್ಷಿಸಲು ಸಾ.ರಾ. ಮಹೇಶ್ ಗದ್ದುಗೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಸಚಿವರ ಪ್ರವೇಶವನ್ನು ತಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಕೋಪಗೊಂಡ ಸಚಿವರು, ಕೆಲಸಕ್ಕೆ ಬಾರದವರಿಗೆ ಪ್ರವೇಶ ನೀಡುತ್ತಿದ್ದೀರಿ. ನಾನು ಮಿನಿಸ್ಟರ್, ನನ್ನನ್ನೇ ಬಿಡುವುದಿಲ್ವಾ? ಬ್ಲಡಿ ಈಡಿಯಟ್ ಎಂದು ಎಸ್ಪಿ ಮೇಲೆ ರೇಗಾಡಿದ್ದಾರೆ. ಹಿರಿಯ ಅಧಿಕಾರಿಗಳ ಆದೇಶ ಪಾಲಿಸುತ್ತಿದ್ದೇನೆ ಎಂದರೂ ಕೂಡ ಸುಮ್ಮನಾಗದ ಸಚಿವರು ಮಹಿಳಾ ಅಧಿಕಾರಿ ಮೇಲೆ ದರ್ಪ ತೋರಿಸಿದ್ದಾರೆ.
ಎಸ್ಪಿ ಕಣ್ಣೀರು:
ಸಚಿವರ ಆಕ್ರೋಶಕ್ಕೆ ತುತ್ತಾದ ಎಸ್ಪಿ ದಿವ್ಯಾ ಗೋಪಿನಾಥ್ ರವರು ಸ್ಥಳದಲ್ಲೇ ಕಣ್ಣೀರಿಟ್ಟಿದ್ದಾರೆ. ಕೂಡಲೇ ಸ್ಥಳದಲ್ಲಿ ಇದ್ದಂತಹ ಸಚಿವ ಎಸ್. ಆರ್. ಶ್ರೀನಿವಾಸ್ ಮತ್ತು ಮಾಜಿ ಸಚಿವ ರೇಣುಕಾಚಾರ್ಯ ಅವರು ಐಪಿಎಸ್ ಅಧಿಕಾರಿ ದಿವ್ಯ ಗೋಪಿನಾಥ್ ಅವರನ್ನು ಸಮಾಧಾನಪಡಿಸಿದ್ದಾರೆ.
ಪ್ರವೇಶ ನಿರಾಕರಿಸಲು ಕಾರಣ:
ಸಿದ್ದಗಂಗಾ ಶ್ರೀಗಳ ಕ್ರಿಯಾವಿಧಿ ವೇಳೆ ಗದ್ದುಗೆಗೆ ಕೇವಲ 30 ಪ್ರಮುಖರನ್ನು ಮಾತ್ರ ಬಿಡಲು ಐಜಿ ದಯಾನಂದ್ ಆದೇಶಿಸಿದ್ದರು. ಆ ಪಟ್ಟಿಯಲ್ಲಿ ಸಚಿವ ಸಾ.ರಾ. ಮಹೇಶ್ ಹೆಸರಿಲ್ಲದ ಕಾರಣ ಒಳಬಿಡಲು ನಿರಾಕರಿಸದ ಎಸ್ಪಿ ದಿವ್ಯಾ ಅವರನ್ನು ತಡೆದಿದ್ದರು.
ಸಿಎಂ ಸಮರ್ಥನೆ:
ಅವರು ಮಾಡಿದ್ದು ಸರಿಯಾಗೇ ಇದೆ. ಒಬ್ಬ ಕ್ಯಾಬಿನೆಟ್ ದರ್ಜೆಯ ಸಚಿವರಿಗೆ ಪ್ರವೇಶ ನೀಡದೇ ಇದ್ರೆ ಹೇಗೆ? ಹಾಗಾಗಿಯೇ ಸಾ.ರಾ.ಮಹೇಶ್ ಅಧಿಕಾರಿ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲಿಯೇ ಅದನ್ನು ಬಗೆಹರಿಸಲಾಗಿದ್ದು, ಅದೊಂದು ಸಣ್ಣ ಘಟನೆ. ಸಾ.ರಾ.ಮಹೇಶ್ ಅವರದ್ದು ಯಾವುದೇ ತಪ್ಪಿಲ್ಲ ಎಂದು ಸಚಿವರ ನಡೆಯನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ