ತಿರುವನಂತಪುರಂ :
ಕೊಚ್ಚಿಯ ಜವಾಹರಲಾಲ್ ನೆಹರು ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇರಳದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ 20 ಅಡಿ ಎತ್ತರದ ಗ್ಯಾಲರಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ಉಮಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು, ಸದ್ಯ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ವೇದಿಕೆಯಿಂದ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ಪ್ರಕಾರ, ಉಮಾ ಅವರ ತಲೆ ಮತ್ತು ಬೆನ್ನುಹುರಿಯ ಮೇಲೆ ಗಾಯಗಳು ಕಂಡುಬಂದಿವೆ. ಮುಖ ಮತ್ತು ಪಕ್ಕೆಲುಬುಗಳ ಮೇಲೆ ಉಂಟಾದ ಮುರಿತಗಳಿಂದಾಗಿ, ಶ್ವಾಸಕೋಶದಲ್ಲಿ ಆಂತರಿಕ ರಕ್ತಸ್ರಾವವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಅವರನ್ನು ಸ್ವಾಗತಿಸಿದ ನಂತರ, ಶಾಸಕಿ ಥಾಮಸ್ ವಿಐಪಿ ಪೆವಿಲಿಯನ್‌ನಲ್ಲಿ ತಮ್ಮ ಆಸನದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಕೇರಳ ಸಚಿವ ಪಿ ರಾಜೀವ್ ಅವರು ಥಾಮಸ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದು, ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಈ ಬಗ್ಗೆ ಸಿಎಂ ಮತ್ತು ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದೇನೆ ಮತ್ತು ಅವರು ವೈದ್ಯಕೀಯ ತಂಡವನ್ನು ಕಳುಹಿಸುತ್ತಾರೆ. ವಿವಿಧ ವಿಭಾಗಗಳ ತಜ್ಞರು ಬರುತ್ತಾರೆ ಮತ್ತು ನಂತರ ಅವರು ಇಲ್ಲಿನ ವೈದ್ಯರೊಂದಿಗೆ ಸಮಾಲೋಚಿಸಿ ಏನು ಮಾಡಬೇಕು ಎಂದು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ಕೊಟ್ಟಾಯಂ ವೈದ್ಯಕೀಯ ಕಾಲೇಜು ಸೂಪರಿಂಟೆಂಡೆಂಟ್ ಡಾ.ಜಯಕುಮಾರ್ ನೇತೃತ್ವದ ತಂಡವು ಉಮಾ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಉಮಾ ಅವರು ದಿ. ಕಾಂಗ್ರೆಸ್ ಶಾಸಕ ಪಿಟಿ ಥಾಮಸ್ ಅವರ ಪತ್ನಿಯಾಗಿದ್ದಾರೆ. ಪಿಟಿ ಥಾಮಸ್ ಅವರು 2021 ರಲ್ಲಿ ನಿಧನರಾದರು, ಮತ್ತು ನಂತರ ಉಮಾ ಅವರು ಉಪಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದರು, ಕಾಂಗ್ರೆಸ್ ಪಕ್ಷದ ಮೊದಲ ಮಹಿಳಾ ಶಾಸಕರಾದರು.
