ಹಾಗಲವಾಡಿ ಕೆರೆಗೆ ಡಿಸೆಂಬರ್ ವೇಳೆಗೆ ನೀರು ; ಅಧಿಕಾರಿಗಳ ಭರವಸೆ

ಎಂ.ಎನ್.ಕೋಟೆ :

      ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದಶಕಗಳಿಂದ ನೀರು ಕಾಣದ ಗುಬ್ಬಿ ತಾಲ್ಲೂಕಿನ ಶಾಪಗ್ರಸ್ಥ ಹೋಬಳಿ ಎಂಬ ಹಣೆಪಟ್ಟಿಗೆ ಪಾತ್ರವಾಗಿದ್ದ ಹಾಗಲವಾಡಿ ಗ್ರಾಮದ ಕೆರೆಗೆ ಈ ವರ್ಷದ ನವೆಂಬರ್ ಅಂತ್ಯದ ವೇಳೆಗೆ ನೀರಾವರಿ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಡಿಸೆಂಬರ್ ವೇಳೆಗೆ ಹೇಮಾವತಿ ನೀರನ್ನು ಹರಿಸಲಾಗುತ್ತದೆ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಯಪ್ರಕಾಶ್ ಅವರು ಭರವಸೆ ನೀಡಿದ್ದು, ಅಧಿಕಾರಿಗಳು ನುಡಿದಂತೆ ನಡೆದರೇ ಹಾಗಲವಾಡಿ ಹೋಬಳಿಯ ಶಾಪ ವಿಮೋಚನೆ ಶೀಘ್ರದಲ್ಲಿಯೇ ಕಳೆಯಲಿದ್ದು, ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ರೈತರಿಂದ ಸಮಸ್ಯೆ ಆಲಿಸಿದ್ದೇನೆ :

      ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಹರದಗೆರೆ ಗ್ರಾಮದಿಂದ ಹಿಡಿದು ಹಾಗಲವಾಡಿಯವರೆಗೆ ಹೇಮಾವತಿ ನಾಲೆಗಳನ್ನು ಹಾಗೂ ಹಾಗಲವಾಡಿ ಮತ್ತು ಹರದಗೆರೆ ಕೆರೆಗಳನ್ನು ಬುಧವಾರ ವೀಕ್ಷಣೆ ಮಾಡಿ ಮಾತನಾಡಿದ ಜಯಪ್ರಕಾಶ್ ಅವರು ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರ ನಿರ್ದೇಶನದಂತೆ, ಕಲಾಪ ನಡೆಯುತ್ತಿದ್ದರೂ ಸಹ ಅದನ್ನು ಬದಿಗಿಟ್ಟು ಹಾಗಲವಾಡಿ ಕೆರೆಗೆ ನೀರು ಹರಿಸಲೇಬೇಕು ಎಂದು ತೀರ್ಮಾನಿಸಿ ನಮಗೆ ಆದೇಶಿಸಿದ್ದಾರೆ. ಹಾಗಾಗಿ ಖುದ್ದು ನಾನೇ ನಮ್ಮ ಅಧಿಕಾರಿಗಳ ಜೊತೆಯಲ್ಲಿ ಬಂದಿದ್ದು ಇಲ್ಲಿರುವಂತಹ ಎಲ್ಲಾ ಸಮಸ್ಯೆಗಳನ್ನು ರೈತರ ಮೂಲಕ ಕೇಳಿಕೊಂಡಿದ್ದೇನೆ ಎಂದರು.

ನೀರು ಪೋಲಾಗಲು ಬಿಡುವುದಿಲ್ಲ :

      ಕೆರೆಗೆ ನೀರು ಹರಿಸುವ ನಾಲೆಗಳಲ್ಲಿ ಸೀಪೇಜ್ ನೀರು ಹರಿದು ಬೇರೆ ತೋಟ-ಹೊಲಗಳಿಗೆ ಹೋಗುತ್ತಿರುವುದು ಸಹ ಕಂಡು ಬರುತ್ತಿದ್ದು, ಕೂಡಲೇ ಗುಣ ಮಟ್ಟದಿಂದ ಸಿಮೆಂಟ್ ಮಾಡಿ ಎಲ್ಲಿಯೂ ಕೂಡ ನೀರು ಅನಗತ್ಯವಾಗಿ ವ್ಯರ್ಥವಾಗದಂತೆ ಸಲೀಸಾಗಿ ಕೆರೆಗೆ ನೀರು ಸೇರಬೇಕು ಎಂಬುದನ್ನು ಸಹ ಅಧಿಕಾರಿಗಳಿಗೆ ಸೂಚಿಸಿದರು.

ನೀರು ಹರಿಸಲು ಸಕಲ ಸಿದ್ಧತೆ :

     ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್‍ಕುಮಾರ್ ಅವರು ಮಾತನಾಡಿ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿಯವರ ಪರಿಶ್ರಮದಿಂದಾಗಿ ಹಾಗೂ ಅವರ ಆಲೋಚನೆಗಳಿಂದಾಗಿ ಹಾಗಲವಾಡಿ ಕೆರೆಗೆ ನೀರನ್ನು ಹರಿಸಲು ಎಲ್ಲಾ ರೀತಿಯ ಸಿದ್ಧತೆಗಳು ಆಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಸ್ಯೆಯಾಗಿದ್ದು, ಈಗ ಖುದ್ದು ಸಚಿವರೆ ನಿಗಮದ ಎಂಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ ಹಾಗೂ ಬೋಗಸಂದ್ರ ಗ್ರಾಮದಿಂದ ಹಾಗಲವಾಡಿ ಕೆರೆವರೆಗೂ ನಾಲೆಗಳಿಗೆ ಗುಣಮಟ್ಟದ ಸಿಮೆಂಟ್ ಲೈನಿಂಗ್ ಮಾಡಿದಾಗ ನೀರು ಪೋಲಾಗುವುದನ್ನು ತಡೆದು ಬರುವಂತಹ ಎಲ್ಲಾ ನೀರು ಸಹ ಕೆರೆಗೆ ತಲುಪುವುದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಪ್ರಕಾಶ್, ಮೆಡಿಕಲ್‍ಬಾಬು, ವಿಶ್ವನಾಥ್, ದಯಾನಂದ, ಲೋಕೇಶ್, ವಿಜಯಕುಮಾರ್, ಉದಯ್‍ಪುರ, ಚಿದಾನಂದ, ಕೃಷ್ಣಜಟ್ಟಿ ಅಧಿಕಾರಿಗಳಾದ ಇಇ ಮೋಹನ್ ಸಿಇ ಮಹೇಶ್, ವಿಶೇಷ ಭೂಸ್ವಾಧೀನ ಅಧಿಕಾರಿ ಯಶೋಧಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.

ಶೀಘ್ರದಲ್ಲಿಯೇ ಪರಿಹಾರ ವಿತರಣೆ :

      ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಹಾಗಲವಾಡಿ ಕೆರೆಗೆ ನೀರನ್ನು ಹರಿಸುವ ಯೋಜನೆಯನ್ನು ಮಾಡಲಾಗುತ್ತದೆ. ಹಾಗಲವಾಡಿ ಕೆರೆಗೆ ನೀರು ಹರಿಸುವ ಮಾರ್ಗ ಮಧ್ಯದಲ್ಲಿ ಕೆಲವು ರೈತರಿಗೆ ಪರಿಹಾರವನ್ನು ನೀಡಿಲ್ಲ ಎನ್ನುವ ವಿಚಾರ ತಿಳಿದಿದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರದಲ್ಲಿಯೇ ಅವರಿಗೆ ಪರಿಹಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈಗಾಗಲೇ ರೈತರಿಗೆ ಅಂತಿಮವಾಗಿ ಪರಿಹಾರದ ಅವಾರ್ಡ್ ನೋಟಿಸ್ ಅನ್ನು ನೀಡಿ ಅವರಿಂದ ಜಾಗವನ್ನು ಬಿಡಿಸಿಕೊಂಡು ಕೆರೆಗೆ ನೀರನ್ನು ಹರಿಸಲಾಗುತ್ತದೆ ಎಂದು ಜಯಪ್ರಕಾಶ್ ಅವರು ಭರವಸೆಯ ನುಡಿಗಳನ್ನಾಡಿದರು.

     ನಾಲೆ ತೆಗೆಯುವಂತಹ ಸಂದರ್ಭದಲ್ಲಿ ಬ್ಲಾಸ್ಟಿಂಗ್ ಮಾಡಿದಾಗ ಕೆಲವು ಮನೆಗಳಿಗೆ ಹಾನಿಯಾಗಿದೆ ಅವುಗಳಿಗೂ ಸಹ ಪರಿಹಾರವನ್ನು ಕೂಡಲೇ ವಿತರಿಸಲಾಗುವುದು. ಹಲವು ಭಾಗಗಳಲ್ಲಿ ತುಂಬಾ ಆಳವಾಗಿ ನಾಲೆಯನ್ನು ತೋಡಿರುವುದರಿಂದ ಮಣ್ಣು ಕುಸಿಯುವ ಸಾಧ್ಯತೆಯಿದ್ದು ಆ ಭಾಗದಲ್ಲಿ ಪೈಪ್‍ಲೈನ್ ಮೂಲಕವೇ ನೀರನ್ನು ಹರಿಸುವಂತೆ ನಮ್ಮ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ.

-ಜಯಪ್ರಕಾಶ್, ಎಂಡಿ, ಕಾವೇರಿ ನೀರಾವರಿ ನಿಗಮ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap