ಬ್ರೆಸಿಲಿಯ:
ಓವರ್ ಹೀಟ್‌ನಿಂದಾಗಿ ಮೊಬೈಲ್ ಸ್ಫೋಟಗೊಳ್ಳುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಬ್ರೆಸಿಲಿಯದಲ್ಲಿ ನಡೆದಿದೆ. ಮಹಿಳೆಯೊಬ್ಬಳು ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟಿದ್ದರಿಂದ ಅನಾಹುತವೊಂದು ಸಂಭವಿಸಿದೆ. ಮಹಿಳೆ ಸೂಪರ್ ಮಾರ್ಕೇಟ್‍ನಲ್ಲಿದ್ದಾಗ ಆಕೆಯ ಪ್ಯಾಂಟ್ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದೆ. ಇದರಿಂದ ಆಕೆಯ ಹಿಂಭಾಗ ಹೊತ್ತಿ ಉರಿದಿದೆ. ಈ ಭಯಾನಕ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೊದಲ್ಲಿ, ಮಹಿಳೆ ಸೂಪರ್ ಮಾರ್ಕೆಟ್‌ನಲ್ಲಿದ್ದಾಗ ಇದ್ದಕ್ಕಿದ್ದಂತೆ ಆಕೆಯ ಡೆನಿಮ್ ಪ್ಯಾಂಟ್‍ಗೆ ಬೆಂಕಿ ಹೊತ್ತಿಕೊಂಡಿದೆ. ವಿಡಿಯೊ ನೋಡಿದ ನೆಟ್ಟಿಗರು ಭಾರೀ ಆಘಾತಗೊಂಡಿದ್ದಾರೆ.
ಮಹಿಳೆ ಸೂಪರ್ ಮಾರ್ಕೆಟ್‌ನಲ್ಲಿ ಪರ್ಚೇಸ್ ಮಾಡುತ್ತಿದ್ದಾಗ ಏಕಾಏಕಿ ಆಕೆಯ ಡೆನಿಮ್ ಪ್ಯಾಂಟ್‍ಗೆ ಬೆಂಕಿ ಹೊತ್ತಿಕೊಂಡಿದೆ. ಅವಳ ಪಕ್ಕದಲ್ಲಿ ನಿಂತಿದ್ದ ಆಕೆಯ ಪತಿ ಬೆಂಕಿ ನಂದಿಸಲು ಹರಸಾಹಸ ಮಾಡಿದ್ದಾನೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ಈ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಫೋನ್ ಮೊಟೊರೊಲಾ ಮೋಟೋ ಇ 32 ಆಗಿದ್ದು, ಇದನ್ನು ಒಂದು ವರ್ಷದ ಹಿಂದೆ ಖರೀದಿಸಲಾಗಿತ್ತಂತೆ.
ವರದಿಗಳ ಪ್ರಕಾರ, ಬ್ರೆಜಿಲಿಯನ್ ಸೂಪರ್ ಮಾರ್ಕೆಟ್‌ನಲ್ಲಿ ಶಾಪಿಂಗ್ ಮಾಡುವ ಸಮಯದಲ್ಲಿ ಮೊಬೈಲ್ ಫೋನ್ ಸ್ಫೋಟದಿಂದ ಮಹಿಳೆಗೆ ಗಂಭೀರ ಗಾಯಗಳಾಗಿವೆಯಂತೆ. ಆ ಮಹಿಳೆ ಮೊಟೊರೊಲಾ ಮೋಟೋ ಇ 32 ಮೊಬೈಲ್ ಅನ್ನು ಬಳಸುತ್ತಿದ್ದಳು, ಅದು ಅವಳ ಹಿಂಭಾಗದ ಜೇಬಿನಲ್ಲಿ ಸ್ಫೋಟಗೊಂಡು ಪ್ಯಾಂಟ್‌ಗೆ ಬೆಂಕಿ ತಾಗಿತ್ತು.ಘಟನೆಯ ನಂತರ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಅವಳ ಕೈ, ಮುಂಗೈ, ಬೆನ್ನು ಮತ್ತು ಪೃಷ್ಠದ ಮೇಲೆ ಸುಟ್ಟ ಗಾಯಗಳಾಗಿವೆ. ಅಲ್ಲದೇ ಈ ಭಯಾನಕ ಘಟನೆಯಲ್ಲಿ ಅವಳ ಕೂದಲಿನ ಕೆಲವು ಭಾಗವೂ ಸುಟ್ಟುಹೋಗಿದೆ ಎನ್ನಲಾಗಿದೆ.
