ನವದೆಹಲಿ:
ಇಂದು ಬೆಳಗಾಗುವ ಮುನ್ನವೇ ಪಾಕಿಸ್ತಾನದ 9 ಸ್ಥಳಗಳನ್ನು ಭಾರತ ದಾಳಿ ಮಾಡಿ ಪುಡಿಗಟ್ಟಿದೆ. ಮುಜಫರಾಬಾದ್, ಮುರ್ಡಿಕೆ, ಕೋಟ್ಲಿಯಲ್ಲಿರುವ ಭಯೋತ್ಪಾದಕರ ಪ್ರಮುಖ ಅಡುಗು ತಾಣಗಳು ಭಾರತೀಯ ಸೇನೆಯ ಕ್ಷಿಪಣಿ ದಾಳಿಗೆ ಧ್ವಂಸಗೊಂಡಿವೆ. ಇದೀಗ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಈ ತಿಂಗಳು ಕೈಗೊಳ್ಳಬೇಕಿದ್ದ ಯುರೋಪ್ ಪ್ರವಾಸವನ್ನು ಮೋದಿ ರದ್ದುಗೊಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಕ್ರೊಯೇಷಿಯಾ, ನಾರ್ವೆ ಮತ್ತು ನೆದರ್‌ಲ್ಯಾಂಡ್ಸ್ ಸೇರಿ ಮೂರು ರಾಷ್ಟ್ರಗಳ ಭೇಟಿಯನ್ನು ಈ ತಿಂಗಳು ಮಾಡಬೇಕಿತ್ತು. ಆದರೆ ಭಾರತ ಪಾಕ್ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇನ್ನು ಪ್ರಧಾನಿ ಮೋದಿ ವಿದೇಶ ಪ್ರವಾಸ ರದ್ದುಗೊಳ್ಳಲು ನಿಖರ ಕಾರಣ ಏನೆಂಬುದು ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಆದರೆ ಆಪರೇಷನ್ ಸಿಂಧೂರ್ ಕಾರಣಕ್ಕಾಗಿಯೇ ಈ ಪ್ರವಾಸ ರದ್ದಾಗಿರುವಂತೆ ಕಂಡು ಬಂದಿದೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಯನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಒಟ್ಟು 9 ಉಗ್ರರ ನೆಲೆಗಳನ್ನು ಗುರಿಯಾಗಿಸಿ ಬರೋಬ್ಬರಿ 24 ಕ್ಷಿಪಣಿ ದಾಳಿ ನಡೆಸಲಾಗಿತ್ತು. ಇನ್ನು ಈ ದಾಳಿ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಈ ದಾಳಿಗೆ ಹರ್ಷ ವ್ಯಕ್ತಪಡಿಸಿರುವ ಅಮಿತ್ ಶಾ, ಅಮಾಯಕ ಭಾರತೀಯ ಸಹೋದರರ ಹತ್ಯೆಗೆ ಪ್ರತೀಕಾರ ಎಂದಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು ನನ್ನ ಅಮಾಯಕ ಭಾರತೀಯ ಸಹೋದರರ ಹತ್ಯೆಗೆ ನ್ಯಾಯ ಒದಗಿಸುವ ಸಲುವಾಗಿ ಉಗ್ರರು ಮತ್ತು ಅವರ ತಾಣಗಳನ್ನು ಧ್ವಂಸಗೊಳಿಸಿರುವ ಸೇನೆಯ ಕಾರ್ಯ ಶ್ಲಾಘನೀಯ ಎಂದು ಪೋಸ್ಟ್ ಮಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
