ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ತೆರಳಿದ್ದು, ಪ್ರಧಾನಿ ಭೇಟಿಯನ್ನು ರಷ್ಯಾ ಅಧ್ಯಕ್ಷರ ಕಚೇರಿ ಬಹಳ ಮುಖ್ಯವಾದ ಮತ್ತು ಪೂರ್ಣ ಪ್ರಮಾಣದ ಭೇಟಿ ಎಂದು ಬಣ್ಣಿಸಿದೆ.ಶೃಂಗಸಭೆ ಮಟ್ಟದ ಮಾತುಕತೆ ಉಭಯ ನಾಯಕರ ನಡುವೆ ನಡೆಯಲಿದ್ದು, ಪ್ರಧಾನಿ ಮೋದಿ ಅವರ ರಷ್ಯಾ ಭೇಟಿಯನ್ನು ಪಶ್ಚಿಮದ ದೇಶಗಳು ಹೊಟ್ಟೆಕಿಚ್ಚಿನಿಂದ ನೋಡುತ್ತಿವೆ ಎಂದು ಕ್ರೆಮ್ಲಿನ್ ಹೇಳಿದೆ.
22 ನೇ ಭಾರತ- ರಷ್ಯಾ ವಾರ್ಷಿಕ ಶೃಂಗಸಭೆ ನಡೆಯಲಿದ್ದು, ರಷ್ಯಾ ಅಧ್ಯಕ್ಷರ ಆಹ್ವಾನದ ಮೇರೆಗೆ ಜು.08 ರಿಂದ 9 ವರೆಗೆ ಪ್ರಧಾನಿ ಮೋದಿ ಮಾಸ್ಕೋದಲ್ಲಿರಲಿದ್ದಾರೆ.ಫೆಬ್ರವರಿ 2022 ರಲ್ಲಿ ರಷ್ಯ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದ ಬಳಿಕ ಪ್ರಧಾನಿ ಮೋದಿ ರಷ್ಯಾಗೆ ಕೈಗೊಂಡಿರುವ ಮೊದಲ ಭೇಟಿ ಇದಾಗಿದೆ.
ಉಭಯ ನಾಯಕರು ತಮ್ಮ ದೇಶಗಳ ನಡುವಿನ ಬಹುಮುಖಿ ಸಂಬಂಧಗಳನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಾರೆ ಮತ್ತು ಪರಸ್ಪರ ಹಿತಾಸಕ್ತಿಯ ಸಮಕಾಲೀನ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಮಾಸ್ಕೋದಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮವು ವಿಸ್ತಾರವಾಗಿದ್ದು, ಉಭಯ ನಾಯಕರು ಅನೌಪಚಾರಿಕ ಮಾತುಕತೆ ನಡೆಸಲು ಸಾಧ್ಯವಾಗುತ್ತದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ರಷ್ಯಾದ ಸರ್ಕಾರಿ ವಿಜಿಟಿಆರ್‌ಕೆ ಟೆಲಿವಿಷನ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.