ಥಿಂಪು:
ಭಾರತದ ಅನುದಾನದೊಂದಿಗೆ ಭೂತಾನ್ ನ ಥಿಂಪುವಿನಲ್ಲಿ ನಿರ್ಮಿಸಲಾಗಿರುವ ಗ್ಯಾಲ್ಟ್‌ಸುನ್ ಜೆಟ್ಸನ್ ಪೆಮಾ ವಾಂಗ್‌ಚುಕ್ ತಾಯಿ, ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ಭೂತಾನ್ ಪ್ರಧಾನಿ ಭೂತಾನ್‌ನ ದಾಶೋ ಶೆರಿಂಗ್ ಟೊಬ್ಗೆ ಅವರೊಂದಿಗೆ ಲೋಕಾರ್ಪಣೆ ಮಾಡಿದರು. ಅತ್ಯಾಧುನಿಕ ಆಸ್ಪತ್ರೆಯ ನಿರ್ಮಾಣಕ್ಕೆ ಸಂಪೂರ್ಣ ಧನಸಹಾಯ ನೀಡಿದ ಭಾರತ ಸರ್ಕಾರಕ್ಕೆ ಭೂತಾನ್ ಪ್ರಧಾನಿ ಟೊಬ್ಗೆ ಕೃತಜ್ಞತೆ ಸಲ್ಲಿಸಿದರು.
ಆಸ್ಪತ್ರೆಯ ಉದ್ಘಾಟನೆಗೂ ಮುನ್ನ ಮಾತನಾಡಿದ ಭೂತಾನ್ ಪಿಎಂ ಟೊಬ್ಗೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭಾರತ ಸರ್ಕಾರದಿಂದ ಸಂಪೂರ್ಣ ಹಣ ನೀಡಲಾಗಿದೆ. ಇದು ನಮ್ಮ ತಾಯಂದಿರು ಮತ್ತು ಮಕ್ಕಳ ಉತ್ತಮ ಆರೋಗ್ಯವನ್ನು ಖಾತ್ರಿಪಡಿಸುವ ಜೊತೆಗೆ ಭೂತಾನ್‌ನ ಜೀವನವನ್ನು ಸುಧಾರಿಸುವಲ್ಲಿ ಮಹತ್ವಪೂರ್ಣ ಕೊಡುಗೆ ನೀಡಲಿದೆ ಎಂದರು.
ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲಿ ಭೂತಾನ್‌ನ 13 ನೇ ಪಂಚವಾರ್ಷಿಕ ಯೋಜನೆಗೆ 10,000 ಕೋಟಿಗಳ ಗಣನೀಯ ನೆರವು ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಇದು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಭೂತಾನ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು “ಸ್ನೇಹಿತ ಮತ್ತು ಹಿರಿಯ ಸಹೋದರ” ಎಂದು ಟೊಬ್ಗೆ ಶ್ಲಾಘಿಸಿದ್ದಾರೆ. ಇದರೊಂದಿಗೆ ಎರಡು ದಿನಗಳ ಭೂತಾನ್ ಪ್ರವಾಸವನ್ನು ಯಶಸ್ವಿಗೊಳಿಸಿದ ಪ್ರಧಾನಿ ಮೋದಿ ಮರಳಿ ಥಿಂಪುವಿನಿಂದ ಭಾರತಕ್ಕೆ ಹೊರಟರು.