ವೆಸ್ಟ್ ಇಂಡೀಸ್:
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿ ವಿಶೇಷ ಸಾಧನೆ ಗೈದಿದ್ದ ಭಾರತ ಇದೀಗ ಐಪಿಎಲ್ 2022 ಮೆಗಾ ಆಕ್ಷನ್ ಬಳಿಕ ಟಿ20 ಸರಣಿಗೆ ಸಜ್ಜಾಗುತ್ತಿದೆ.
ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯ ಬುಧವಾರ ಆರಂಭವಾಗಲಿದ್ದು, ಇದಕ್ಕಾಗಿ ರೋಹಿತ್ ಪಡೆ ಕೋಲ್ಕತ್ತಾ ಈಡನ್ ಗಾರ್ಡನ್ಸ್ಗೆ ತಲುಪಿದೆ. ಇದರ ನಡುವೆ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಇಂಜುರಿಗೆ ತುತ್ತಾದ ಪರಿಣಾಮ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಸಂಪೂರ್ಣ ಹೊರಬಿದ್ದಿದ್ದಾರೆ.
ಗಾಯದಿಂದ ಚೇತರಿಸಿಕೊಂಡು ಸುದೀರ್ಘ ವಿರಾಮದ ನಂತರಸುಂದರ್ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಕಮ್ಬ್ಯಾಕ್ ಮಾಡಿದ್ದರು. ಆದರೆ, ಕೊನೆಯ ಏಕದಿನ ಪಂದ್ಯದ ವೇಳೆ ಎಡ ಮಂಡಿರಜ್ಜು ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಮತ್ತೆ ಭಾರತ ತಂಡದಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ (BCCI) ಹೇಳಿಕೆ ಬಿಡುಗಡೆ ಮಾಡಿದೆ.
ಕೋವಿಡ್-19 ಸೋಂಕಿನ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಿಸ್ ಮಾಡಿಕೊಂಡಿದ್ದ ವಾಷಿಂಗ್ಟನ್ ಸುಂದರ್ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ದರು. ಏಕದಿನ ಸರಣಿಯಲ್ಲಿ ಭಾಗವಹಿಸಿದ್ದ ಸುಂದರ್ 10 ತಿಂಗಳುಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿದಿದ್ದರು.
ಆದರೆ ಏಕದಿನ ಸರಣಿ ಆಡಿದ ಬೆನ್ನಲ್ಲೇ ಮತ್ತೆ ಅಲಭ್ಯರಾಗಿದ್ದು, ಗಾಯಾಳುವಾಗಿ ಟಿ20 ಸರಣಿ ಮಿಸ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಶ್ರೀಲಂಕಾ ವಿರುದ್ಧದ ಸರಣಿಗಳಿಂದಲೂ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಸುಂದರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರಕ್ಕೆ ಒಳಪಡಲಿದ್ದಾರೆ. ಕನಿಷ್ಠ ಮೂರು ವಾರಗಳ ಕಾಲ ವಾಷಿಂಗ್ಟನ್ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ.
ವಾಷಿಂಗ್ಟನ್ ಸುಂದರ್ ಹೊರಬಿದ್ದ ಬಿನ್ನಲ್ಲೇ ಇವರ ಬದಲಿಗೆ ಕುಲ್ದೀಪ್ ಯಾದವ್ರನ್ನು ಟಿ20 ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಸೀನಿಯರ್ ಆಯ್ಕೆ ಸಮಿತಿ ಸುಂದರ್ ಜಾಗಕ್ಕೆ ಇತ್ತೀಚಿಗಷ್ಟೇ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದ ಕುಲ್ದೀಪ್ ಯಾದವ್ರನ್ನು ಟಿ20 ತಂಡಕ್ಕೆ ಸೇರಿಸಿದೆ. ಕುಲ್ದೀಪ್ ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಆಡಿ 2 ವಿಕೆಟ್ ಪಡೆದಿದ್ದರು.
ರಾಹುಲ್ – ಅಕ್ಷರ್ ಕೂಡ ಔಟ್:
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಗಾಯದ ಸಮಸ್ಯೆ ಎದುರಿಸಿರುವ ಕೆ.ಎಲ್. ರಾಹುಲ್ ಮತ್ತು ಅಕ್ಷರ್ ಪಟೇಲ್ ಸೇವೆ ಕಳೆದುಕೊಂಡ ಭಾರತ ತಂಡಕ್ಕೆ ಈಗ ವಾಷಿಂಗ್ಟನ್ ಸೇವೆಯೂ ಇಲ್ಲವಾದಂತ್ತಾಗಿದೆ. ರಾಹುಲ್ ಬೆನ್ನು ನೋವಿನ ಸಮಸ್ಯೆ ಎದುರಿಸಿದರೆ, ಅಕ್ಷರ್ ತೊಡೆ ಸ್ನಾಯು ಸೆಳೆತದಿಂದ ಚೇತರಿಸುತ್ತಿದ್ದಾರೆ. ಹೀಗಾಗಿ ಇವರಿಬ್ಬರೂ ಟಿ20 ಸರಣಿಗೆ ಲಭ್ಯರಿಲ್ಲ.
ಭಾರತದ ಟಿ20 ತಂಡ:
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಯುಜ್ವೇಂದ್ರ ಚಾಹಲ್ , ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಕುಲ್ದೀಪ್ ಯಾದವ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ