ಹುಬ್ಬಳ್ಳಿ:
ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ಮೋದಿ ನಾಯಕತ್ವ ಸಹಕಾರಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಅವರು ಬುಧವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ನಾಯಕತ್ವವನ್ನು ಬಿಜೆಪಿಯ ಕೇಂದ್ರ ನಾಯಕತ್ವ ನಿರ್ಧರಿಸಲಿದೆ. ಸಾಮಾನ್ಯ ಜನರ ಬಗೆಗಿನ ಕಾಳಜಿ ಮತ್ತು ಅವರು ನೀಡಿದ ಉತ್ತಮ ಆಡಳಿತದಿಂದಾಗಿ ಪ್ರಧಾನಿ ಮೋದಿಯವರ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. ರಾಷ್ಟ್ರದಾದ್ಯಂತ ಬಿಜೆಪಿ ಅಗಾಧವಾಗಿ ಬೆಳೆದಿದ್ದು, ಅದಕ್ಕೆ ಯಾವುದೇ ಪಕ್ಷ ಸರಿಸಾಟಿಯಾಗುವುದಿಲ್ಲ. ಮತ್ತೊಂದೆಡೆ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಪ್ರಸ್ತುತತೆ ಕಳೆದುಕೊಂಡು ನಾಯಕತ್ವದ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಪಕ್ಷವು ಶೆಟ್ಟರ್ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಅವರು, “ಕೆಲವು ದೋಷಗಳು ಕಂಡುಬಂದಾಗ, ಅವುಗಳನ್ನು ತಕ್ಷಣವೇ ಸರಿಪಡಿಸಲಾಗಿದೆ. ಇತ್ತೀಚಿನ ಕೋರ್ ಕಮಿಟಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಪಕ್ಷದ ವ್ಯವಹಾರಗಳ ಬಗ್ಗೆ 15-20 ನಿಮಿಷಗಳ ಕಾಲ ಮಾತನಾಡಲು ನನಗೆ ಅವಕಾಶ ಮಾಡಿಕೊಟ್ಟರು. ಹಾಗಾಗಿ ಪಕ್ಷವು ಎಂದಿಗೂ ನನ್ನನ್ನು ದುರ್ಬಲಗೊಳಿಸಿಲ್ಲ ಎಂದು ತಿಳಿಸಿದರು.