ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರಿಗೆ ಟಕ್ಕರ್ ನೀಡಿದ ಸರ್ಕಾರ

ಬೆಂಗಳೂರು

    ಕರ್ನಾಟಕದಲ್ಲಿ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ನಡುವಣ ಜಟಾಪಟಿ ಸದ್ಯಕ್ಕೆ ಬಗೆಹರಿಯು ಲಕ್ಷಣ ಕಾಣಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರದ ಪ್ರಕರಣಗಳ ವಿವರ ಕೋರಿ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಪತ್ರ ಬರೆದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಸಚಿವ ಸಂಪುಟ ಸಭೆಯ ಮೂಲಕ ಅವರಿಗೆ ಟಕ್ಕರ್ ನೀಡಿದ್ದಾರೆ.

   ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯಪಾಲರ ಧೋರಣೆ ಬಗ್ಗೆ ಆಕ್ರೋಶ ವ್ಯಪ್ತವಾಯಿತು. ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಂಪುಟ ಸಹೋದ್ಯೋಗಿಗಳು ರಾಜ್ಯಪಾಲರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

   ರಾಜ್ಯಪಾಲರ ಇತ್ತೀಚಿನ ನಡೆ ಸರಿಯಾದುದಲ್ಲ. ಅನಗತ್ಯವಾಗಿ ಪತ್ರ ಬರೆದು ವಿವರಣೆ ಕೇಳುತ್ತಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವಿವರಣೆ‌ ಕೇಳಿ ಪತ್ರ ಬರೆದಿದ್ದಾರೆ. ರಾಜ್ಯಪಾಲರ ಈ ನಡೆ ಸರಿಯಾದುದಲ್ಲ. ಸರ್ಕಾರದ ವಿರುದ್ಧ ಗೊಂದಲ ಸೃಷ್ಟಿಯಾಗುವಂತೆ ಮಾಡುತ್ತಿದ್ದಾರೆ. ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆಂದು ರಾಜ್ಯಪಾಲರ ವಿರುದ್ಧ ಸಚಿವರು ಕಿಡಿ ಕಾರಿದರು. ಅಷ್ಟೇ ಅಲ್ಲದೆ, ರಾಜ್ಯಪಾಲರಿಗೆ ಟಕ್ಕರ್ ನೀಡಲು ನಿರ್ಧರಿಸಿದರು.

   ಕುಲಪತಿ ನೇಮಕದ ನಿರ್ಧಾರವನ್ನು ರಾಜ್ಯ ಸರ್ಕಾರ ತನ್ನ ಸುಪರ್ದಿಗೆ ಪಡೆಯುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ನೇಮಕದ ತೀರ್ಮಾನ ಕೈಗೊಳ್ಳಲಾಯಿತು. ಈ ಮೂಲಕ ಇದುವರೆಗೂ ರಾಜ್ಯಪಾಲರಿಗೆ ಇದ್ದ ಅಧಿಕಾರವನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಂತಾಗಿದೆ. ಈ ಮೂಲಕ ರಾಜ್ಯಪಾಲರಿಗೆ ತಿರುಗೇಟು ನೀಡಿದೆ.

  ‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ತಿದ್ದುಪಡಿ ವಿಧೇಯಕ 2024’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿತು. ಇದರಿಂದ ಕುಲಪತಿ ನೇಮಕ ಮಾಡಲು ರಾಜ್ಯ ಸರ್ಕಾರಕ್ಕೇ ಅವಕಾಶ ದೊರೆಯುತ್ತದೆ. 

  ಮುಡಾ ಪ್ರಾಸಿಕ್ಯೂಷನ್ ಅನುಮತಿ ವಿರುದ್ಧ ಸಿಡಿದೆದ್ದಿದ್ದ ಕಾಂಗ್ರೆಸ್ ನಾಯಕರು ರಾಜಭವನ ಚಲೋ ಹಮ್ಮಿಕೊಂಡಿದ್ದಲ್ಲದೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಪ್ರಕರಣಗಳ ತುರ್ತು ಇತ್ಯರ್ಥಕ್ಕೆ ಮತ್ತು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಆಗ್ರಹಿಸಿದ್ದರು. ಇದಾದ ಕೆಲವು ದಿನಗಳ ನಂತರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ರಾಜ್ಯಪಾಲರು, 20-05-2023 ರಿಂದ, ಅಂದರೆ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಈವರೆಗೆ ಲೋಕಾಯುಕ್ತ ಸಂಸ್ಥೆಯಿಂದ ಸ್ವೀಕೃತವಾಗಿರುವ ಸ್ವೀಕೃತಗೊಂಡಿರುವ ಪ್ರಕರಣಗಳ ಮಾಹಿತಿ ನೀಡುವಂತೆ ಕೋರಿದ್ದರು.

Recent Articles

spot_img

Related Stories

Share via
Copy link
Powered by Social Snap