17ನೇ ಲೋಕಸಭೆ ವಿಸರ್ಜನೆ; ಮೋದಿ ರಾಜೀನಾಮೆ

ನವದೆಹಲಿ: 

   ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ಇಂದು ಬುಧವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, 17ನೇ ಲೋಕಸಭೆಯನ್ನು ವಿಸರ್ಜಿಸಲಾಯಿತು.

   ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ನೂತನ ಸರ್ಕಾರ ರಚನೆಗೆ ಅವಕಾಶ ಕೋರಿದರು.

   ಪ್ರಧಾನ ಮಂತ್ರಿಗಳು ಹಾಗೂ ಅವರ ಸಂಪುಟ ಸದಸ್ಯರ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರಪತಿಗಳು ಹೊಸ ಸರ್ಕಾರ ರಚನೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಮನವಿ ಮಾಡಿದರು ಎಂದು ರಾಷ್ಟ್ರಪತಿ ಭವನದ ಪ್ರಕಟಣೆಯಲ್ಲಿ ತಿಳಿಸಿದೆ.

   ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (NDA) ಸ್ಪಷ್ಟ ಬಹುಮತ ದೊರೆತ ಹಿನ್ನೆಲೆಯಲ್ಲಿ ಜೂನ್ 8 ಶನಿವಾರದಂದು ನರೇಂದ್ರ ಮೋದಿಯವರು ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಅದೇ ದಿನ ಕೇಂದ್ರ ಸಚಿವ ಸಂಪುಟ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವೂ ನಡೆಯುವ ಸಾಧ್ಯತೆ ಇದೆ.

    ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಇಂದು ಬೆಳಗ್ಗೆ ಪ್ರಧಾನಿ ನಿವಾಸದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಲಾಯಿತು. ಸಭೆಯು ಬೆಳಗ್ಗೆ 11.30 ಕ್ಕೆ ಪ್ರಾರಂಭವಾಗಿ ನಂತರ ಮಂತ್ರಿ ಮಂಡಲದ ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

    ಇದು ಮೋದಿ 2.0 ರ ಕ್ಯಾಬಿನೆಟ್ ಮತ್ತು ಮಂತ್ರಿ ಮಂಡಳಿಯ ಕೊನೆಯ ಸಭೆಯಾಗಿದೆ. ಪ್ರಸ್ತುತ ಲೋಕಸಭೆಯ ವಿಸರ್ಜನೆಯ ಕುರಿತು ಕ್ಯಾಬಿನೆಟ್ ಶಿಫಾರಸು ಮಾಡಿದ್ದು 18 ನೇ ಲೋಕಸಭೆಗೆ ದಾರಿ ಮಾಡಿಕೊಡುತ್ತದೆ. ಪ್ರಸ್ತುತ 17ನೇ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿದೆ.

    ಇಂದಿನ ಸಂಪುಟ ಸಭೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಅವಲೋಕನ ಮಾಡಲಾಯಿತು. ಮುಂದಿನ ಸರ್ಕಾರ ರಚನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

    240 ಸ್ಥಾನಗಳನ್ನು ಪಡೆದು ಬಹುಮತದ ಕೊರತೆ ಎದುರಿಸುತ್ತಿರುವ ಬಿಜೆಪಿ ತನ್ನ ಮಿತ್ರಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸಲು ಮುಂದಾಗಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 293 ಸ್ಥಾನಗಳನ್ನು ಪಡೆದುಕೊಂಡಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿದ್ದು ಇಂಡಿಯಾ ಬ್ಲಾಕ್ ಒಟ್ಟಾಗಿ 233 ಸ್ಥಾನಗಳನ್ನು ಗೆದ್ದುಕೊಂಡಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap