ಬೆಂಗಳೂರು : 26 ಕಿಮೀ ಕ್ರಮಿಸಿದ ಮೋದಿ

ಬೆಂಗಳೂರು

     ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಐತಿಹಾಸಿಕ ರೋಡ್ ಶೋ ನಡೆಸಿದ್ದು, ಹಿಂದೆಂದೂ ಇಲ್ಲದಷ್ಟು ದೂರ ಮತ್ತು ಜನರನ್ನು ಆಕರ್ಷಿಸಿತು. ರಸ್ತೆಯುದ್ದಕ್ಕೂ ಪಕ್ಷದ ಕಾರ್ಯಕರ್ತರು, ಜನಸಾಗರ, ಜನೋತ್ಸಾಹ, ಸಂಭ್ರಮೋಲ್ಲಾಸದೊಂದಿಗೆ ರೋಡ್ ಶೋ ನಡೆಯಿತು.

     ಸಾವಿರಾರು ಜನರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಭಾರತ್ ಮಾತಾ ಕಿ ಜೈ , ಬಿಜೆಪಿಗೆ ಜಯವಾಗಲಿ ಮೋದಿ ಮೋದಿ , ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತ, ಹೂವಿನ ಸುರಿಮಳೆಗೈಯುತ್ತ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಪ್ರಮುಖ ವೃತ್ತಗಳಲ್ಲಿ ವಿವಿಧ ಕಲಾತಂಡಗಳ ಕುಣಿತವನ್ನೂ ಏರ್ಪಡಿಸಲಾಗಿತ್ತು.

    ಸೋಮೇಶ್ವರ ಸಭಾಭವನ ಬಳಿಯಿಂದ ಆರಂಭವಾದ ರೋಡ್ ಶೋ ಸುಮಾರು 26 ಕಿಮೀ ಕ್ರಮಿಸಿತು. ಜೆ.ಪಿ. ನಗರ, ಜಯನಗರ, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ವೃತ್ತ, ಮೈಸೂರು ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರ ಮಠ ಸರ್ಕಲ್, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆಯ 18ನೇ ಅಡ್ಡರಸ್ತೆ ಜಂಕ್ಷನ್ ಮೂಲಕ ಈ ರೋಡ್ ಷೋ ತೆರಳಿ ಮುಕ್ತಾಯವಾಯಿತು.

    ಮೋದಿಯವರನ್ನು ಹತ್ತಿರದಿಂದ ಕಾಣಲು ಮತ್ತು ಪ್ರಧಾನಿಯವರ ವಾಹನ ಮತ್ತು ಮೋದಿಯವರತ್ತ ಹೂವುಗಳನ್ನು ಎಸೆದು ಅವರನ್ನು ಸ್ವಾಗತಿಸಲು ಈ ರಸ್ತೆಯುದ್ದಕ್ಕೂ ಮಕ್ಕಳು, ಹಿರಿಯರು ಸೇರಿ ಅಭಿಮಾನಿಗಳು, ಸಾರ್ವಜನಿಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾಯುತ್ತಿದ್ದರು. ಇಂದು ಮತ್ತು ನಾಳೆ ಎರಡು ದಿನಗಳ ರೋಡ್ ಷೋ ನಡೆಯಲಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಮುಖಂಡರು ತಿಳಿಸಿದರು.

    ಮೋದಿಜಿ ಅವರ ಆಗಮನದಿಂದ ಬಿಜೆಪಿ ತನ್ನ ಶಕ್ತಿ ಹೆಚ್ಚಿಸಿಕೊಂಡಂತೆ ಭಾಸವಾಗುತ್ತಿತ್ತು. ಹಲವು ಗಂಟೆಗಳ ಕಾಲ ಕಾದು ನಿಂತಿದ್ದ ಮಹಿಳೆಯರು, ಮಕ್ಕಳು, ಯುವಜನರು, ಹಿರಿಯರು ಒಂದು ಕ್ಷಣ ಮೋದಿಯವರ ಮುಖ ನೋಡಿ ಹೂಗಳನ್ನು ಅವರತ್ತ ಚೆಲ್ಲಿ ಸಂತಸಪಟ್ಟರು.

   ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರು ರೋಡ್ ಶೋ ಸಂದರ್ಭದಲ್ಲಿ ಪ್ರಧಾನಿಯವರ ಜೊತೆಗೆ ಇದ್ದರು.

 ನರೇಂದ್ರ ಮೋದಿ ಅವರನ್ನು ರೋಡ್ ಶೋದಲ್ಲಿ ಕಂಡಿದ್ದೇನೆ. ಮತದಾನ ಮಾಡುವ ಮತ್ತು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸಲು ಉತ್ಸುಕನಾಗಿದ್ದೇನೆ

ನರೇಶ್, ಯುವ ಮತದಾರ (ಟೋಲ್ ಗೇಟ್ ಬಳಿ)

ಪ್ರಧಾನಿ ಮೋದಿ ಅವರ ರೋಡ್ ಷೋದಿಂದ ಬಿಜೆಪಿ ಬಲ ಹೆಚ್ಚಾಗಿದೆ. ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ ಹೇಳುತ್ತಿದ್ದು, ಕಾರ್ಯಕರ್ತರು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕೆಂದು ಕೆಲಸ ಮಾಡುತ್ತಿದ್ದಾರೆ.

ಗಣಪತಿ, (ಮಾಗಡಿ ರಸ್ತೆ)

Recent Articles

spot_img

Related Stories

Share via
Copy link
Powered by Social Snap