ಬೆಂಗಳೂರು:
ಸಿಬಿಐ ಮೂಲಕ ಏನೇನು ಮಾಡಿಸುತ್ತಿದ್ದಾರೆ, ಬೇರೆಯವರ ಮೂಲಕ ಏನು ಮಾಡಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ಸಮಯ ಬಂದಾಗ ಮಾತನಾಡುತ್ತೇನೆ ಎಂದು ತಿಳಿಸಿದರು. ಡಿ.ಕೆ ಸಹೋದರರನ್ನು ರಾಮನಗರದಲ್ಲಿ ಕಟ್ಟಿಹಾಕಲು ಬದ್ಧವೈರಿಗಳು ಒಂದಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಏನಾದರೂ ಮಾಡಲಿ. ಅವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ರಾಜಕಾರಣ ಮಾಡುವವರನ್ನು ನಾವು ಬೇಡ ಎನ್ನಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಈ ಹಿಂದೆಯೂ ಸುರೇಶ್ ಅವರು ಚುನಾವಣೆಗೆ ನಿಂತಾಗ ಜೆಡಿಎಸ್ ಮತ್ತು ಬಿಜೆಪಿಯವರು ಮೈತ್ರಿ ಮಾಡಿಕೊಂಡು ಅನಿತಾ ಕುಮಾರಸ್ವಾಮಿ ಅವರನ್ನು ಮಾತ್ರ ಕಣಕ್ಕಿಳಿಸಿದ್ದರು. ಅವರ ರಾಜಕೀಯ ಅವರು ಮಾಡಲಿ, ನಮ್ಮ ರಾಜಕೀಯ ನಾವು ಮಾಡುತ್ತೇವೆ. ಕುಮಾರಸ್ವಾಮಿ ಕೆಲವೇ ತಿಂಗಳ ಹಿಂದೆ ಮಾತನಾಡಿದ ದಾಖಲೆ ಜನರ ಮುಂದೆ ಇದೆ. ರಾಜಕಾರಣ ಮಾಡುವವರನ್ನು ಬೇಡ ಎಂದು ಹೇಳಲು ಸಾಧ್ಯವೇ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ರಾಜ್ಯದ 28 ಸಂಸದರ ಪೈಕಿ ಸುರೇಶ್ ಅವರು ಮಾಡಿರುವ ಕೆಲಸ ಬೇರೆ ಯಾವುದೇ ಸಂಸದರು ಮಾಡಿಲ್ಲ. ಅದಕ್ಕೆ ದಾಖಲೆಗಳಿವೆ. ಕುಡಿಯುವ ನೀರಿನ ವಿಚಾರ, ಅರಣ್ಯ ಜಮೀನು ಕೊಡಿಸಿರುವುದು, ಕೆರೆ ತುಂಬಿಸಿರುವುದು, ನಿವೇಶನ ಹಂಚಿಕೆ ಸೇರಿದಂತೆ ಅನೇಕ ಕೆಲಸ ಮಾಡಿದ್ದಾರೆ.
ಈಗ ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮ ಬಳಿ ಅಧಿಕಾರ ಇದ್ದಾಗ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.”ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ದೇವೇಗೌಡ್ರು ಹೇಳಿದ್ದರು, ದೇಶ ಬಿಟ್ಟು ಹೋದ್ರಾ? ದೇಶ ಬಿಟ್ಟು ಹೋಗುವುದು ಬೇಡ, ನೀವು ಹಿರಿಯರು ನನ್ನ ಮನೆಯಲ್ಲೇ ಜಾಗ ಕೊಡುತ್ತೇನೆ ಎಂದು ಮೋದಿ ಹೇಳಿದ್ದರು. ಜೆಡಿಎಸ್ ನವರ ಇಂತಹ ರಾಜಕಾರಣ ಹೊಸದೇನಲ್ಲ” ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಳೆದ ಬಾರಿಯ ಅಂದರೆ 2019ರ ಚುನಾವಣೆಯಲ್ಲಿನ ಹೊಂದಾಣಿಕೆ ಮತ್ತು ಮುಂಬರುವ ಚುನಾವಣೆಯಲ್ಲಿನ ಮೈತ್ರಿಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ.ಶಿವಕುಮಾರ್ ತಮ್ಮದೇ ಆದ ವ್ಯಂಗ್ಯ ಧಾಟಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಜರಿದಿದ್ದಾರೆ. ಜೊತೆಗೆ, ಜೆಡಿಎಸ್ ನಾಯಕರ ಹಿಂದಿನ ಕೆಲವು ಘಟನೆಗಳನ್ನು ಹೇಳಿಕೆಯನ್ನು ದಳಪತಿಗಳಿಗೆ ಜ್ಞಾಪಿಸಿದ್ದಾರೆ.