ಬೆಂಗಳೂರು
ಭಾರತದಲ್ಲಿ ಸೋಂಕು ಇನ್ನೂ ಕಂಡು ಬಂದಿಲ್ಲ. ಹೀಗಾಗಿ ರಾಜ್ಯದ ಜನರು ಆತಂಕ ಪಡುವ ಅವಶ್ಯಕತೆಯಿಲ್ಲ. ಆದರೂ, ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ.
ಮಂಕಿಪಾಕ್ಸ್ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಶುಕ್ರವಾರ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಕಿಪಾಕ್ಸ್ ಸೋಂಕು ಎದುರಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎನ್‌ಸಿಡಿಸಿ ಜಂಟಿ ನಿರ್ವಹಣೆ ಸಂಸ್ಥೆ ಅದರ ಹರಡುವಿಕೆ ಅಪಾಯದ ಮೌಲ್ಯಮಾಪನ ನಡೆಸುತ್ತಿದೆ. ಒಂದು ವೇಳೆ ಸೋಂಕು ಪ್ರಕರಣಗಳಿದ್ದರೆ ಪ್ರವೇಶ ಹಂತದಲ್ಲೇ ಎಚ್ಚರಿಸಲಾಗುತ್ತದೆ. ಅಲ್ಲದೆ, ಬಂದರು, ವಿಮಾನ ನಿಲ್ದಾಣಗಳಲ್ಲೂ ಮುನ್ನೆಚರಿಕೆ ವಹಿಸಲಾಗುತ್ತಿದೆ. ಆದರೂ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡುವ ಬಗ್ಗೆ ಆರೋಗ್ಯ ಇಲಾಖೆಗೆ ಸರ್ಕಾರ ಸೂಚನೆ ನೀಡುತ್ತದೆ ಎಂದರು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕು ತಪಾಸಣೆ ಸೌಲಭ್ಯವಿದ್ದು, ಉಚಿತವಾಗಿ ತಪಾಸಣೆ ನಡೆಸಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಸದ್ಯ 50 ಹಾಸಿಗೆಗಳ 5 ಐಸಿಯು ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಜತೆಗೂ ಚರ್ಚಿಸಲಾಗಿದೆ ಎಂದು ತಿಳಿಸಿದರು.
