ಮುಡಾ ಹಗರಣ: ರಿಟ್ ಅರ್ಜಿ ತೀರ್ಪು ಪ್ರಕಟಕ್ಕೆ ಕೌಂಟ್‌ಡೌನ್ ಶುರು…..!

ಬೆಂಗಳೂರು

   ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಸುಳಿಗೆ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ಇವತ್ತು ಅಕ್ಷರಶಃ ನಿರ್ಣಾಯಕ ದಿನ. ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿ ತೀರ್ಪು ಪ್ರಕಟಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಚಿತ್ತ ರಾಜ್ಯಹೈಕೋರ್ಟ್‌ನತ್ತ ನೆಟ್ಟಿದೆ.

  ಸಿದ್ದರಾಮಯ್ಯ ಪತ್ನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಂದ್ರೆ ಮುಡಾದಿಂದ ಅಕ್ರಮವಾಗಿ 14 ಸೈಟ್‌ಗಳನ್ನು ಪಡೆದಿರುವ ಆರೋಪವಿದೆ. ಇದೇ ಪ್ರಕರಣ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟಿದೆ. ಸಾವಿರಾರು ಪುಟಗಳ ದಾಖಲೆ, 6 ದಿನಗಳ ಸುದೀರ್ಘ ವಾದ ಮಂಡನೆ ಆಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತೀರ್ಪು ಪ್ರಕಟಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಇಂದು ಮಧ್ಯಾಹ್ನ 12 ಗಂಟೆ ವೇಳೆಗೆ ತೀರ್ಪು ಪ್ರಕಟಿಸಲಿದೆ.

   ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದರೆ ಸಿದ್ದರಾಮಯ್ಯ ನಿರಾಳರಾಗಬಹುದು. ಒಂದು ಅರ್ಥದಲ್ಲಿ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಂತಾಗಲಿದೆ. ಅಷ್ಟೇ ಅಲ್ಲ ರಾಜ್ಯ ರಾಜಕೀಯದಲ್ಲಿ ಮತ್ತು ಸರ್ಕಾರದಲ್ಲಿ ಸಿದ್ದರಾಮಯ್ಯ ಶಕ್ತಿ ಮತ್ತಷ್ಟು ಹೆಚ್ಚಲಿದೆ. ಪಕ್ಷದೊಳಗೆ ಸಿಎಂ ಬದಲಾವಣೆಯ ಕೂಗಿಗೂ ಫುಲ್‌ಸ್ಟಾಪ್ ಬೀಳಲಿದೆ. ಇನ್ನು ಸಿಎಂ ರಾಜೀನಾಮೆಗೆ ಪಟ್ಟುಹಿಡಿದಿರುವ ವಿಪಕ್ಷಗಳಿಗೂ ಹಿನ್ನಡೆಯಾಗಲಿದೆ.

  ಇನ್ನು ಹೈಕೋರ್ಟ್ ರಾಜ್ಯಪಾಲರ ಆದೇಶ ಎತ್ತಿಹಿಡಿದರೆ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ. ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರುಗಳಿಗೆ ಮತ್ತೆ ಜೀವ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶಿಸುವ ಸಾಧ್ಯತೆಯಿದೆ. ಒಂದು ವೇಳೆ ಸಿಎಂ ವಿರುದ್ಧ ಎಫ್ಐಆರ್ ದಾಖಲಾದರೆ ರಾಜೀನಾಮೆ ಒತ್ತಡ ಹೆಚ್ಚಾಗಲಿದೆ. ಪ್ರತಿಪಕ್ಷಗಳು ಕೂಡ ಸಿಎಂ ರಾಜೀನಾಮೆಗೆ ಪಟ್ಟು ಹಿಡಿಯಲಿವೆ.

  ಸೆಕ್ಷನ್ 17 ಎ ಅಡಿಯಲ್ಲಿ ರಾಜ್ಯಪಾಲರು ಮೇಲ್ನೋಟಕ್ಕೆ ಅಪರಾಧದ ಅಂಶಗಳಿವೆಯೇ ಎಂಬುದನ್ನಷ್ಟೇ ನೋಡಬೇಕು. ರಾಜ್ಯಪಾಲರು ತೀರ್ಪು ನೀಡುತ್ತಿಲ್ಲ, ತನಿಖೆಗೆ ಅನುಮತಿಯನ್ನಷ್ಟೇ ನೀಡುತ್ತಿರುವುದರಿಂದ ವಿವರವಾದ ಕಾರಣಗಳನ್ನು ಕೊಡಬೇಕಿಲ್ಲ. ಕೊಟ್ಟರೆ ತನಿಖಾಧಿಕಾರಿ ಮೇಲೆ ಪ್ರಭಾವವಾಗುವ ಸಾಧ್ಯತೆ ಇರುತ್ತದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿ ಖಾಸಗಿ ದೂರುದಾರರು ಕೂಡಾ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಬಹುದು. ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಸಚಿವ ಸಂಪುಟದ ಶಿಫಾರಸು ಒಪ್ಪದೇ ಇರಲು ರಾಜ್ಯಪಾಲರು ಕಾರಣ ಕೊಟ್ಟಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದ ಸಿಎಂ ವಿರುದ್ಧವೇ ಸಚಿವ ಸಂಪುಟ ನಿರ್ಣಯ ಕೈಗೊಳ್ಳುವುದೆಂದು ರಾಜ್ಯಪಾಲರು ಭಾವಿಸುವಂತಿಲ್ಲ. ರಾಜ್ಯಪಾಲರು ದೂರಿನ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಡತಗಳನ್ನೂ ಅಧ್ಯಯನ ಮಾಡಿಯೇ ಅನುಮತಿ ನೀಡಿದ್ದಾರೆ. ಹೀಗಾಗಿ ರಾಜ್ಯಪಾಲರ ಆದೇಶ ಸಮರ್ಪಕವಾಗಿದೆ ಎಂದು ತುಷಾರ್ ಮೆಹ್ತಾ ಹೀಗಂತಾ ವಾದ ಮುಂದಿಟ್ಟಿದ್ದರು.

   ಸಿದ್ದರಾಮಯ್ಯ ಯಾವ ರಾಜೀನಾಮೆ ಕೊಡುತ್ತಾರೆ ಎಂದು ಕಾಂಗ್ರೆಸ್‌ನವರೇ ಕಾಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬಿದ್ದರೂ ಸಹ ಅಚ್ಚರಿ ಪಡಬೇಕಿಲ್ಲ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ಒಟ್ಟಾರೆ ಇಂದು ಹೈಕೋರ್ಟ್ ನೀಡುವ ತೀರ್ಪು ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧರಿಸಲಿದೆ. ರಾಜ್ಯ ರಾಜಕೀಯದ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆಯೂ ಇದೆ.

Recent Articles

spot_img

Related Stories

Share via
Copy link
Powered by Social Snap