ಎಸ್‌ಪಿಪಿ ಬದಲಾವಣೆ : ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ : ಸಿಎಂ

ಬೆಂಗಳೂರು:

    ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎಸ್‌ಪಿಪಿ ಬದಲಾವಣೆ ಬಗ್ಗೆ ಸರ್ಕಾರದ ಮೇಲೆ ಯಾವುದೇ ಒತ್ತಡಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರ ನೇಮಿಸಿರುವ ಎಸ್‌ಪಿಪಿ ಪ್ರಸನ್ನಕುಮಾರ್‌ ಅವರನ್ನು ಬದಲಿಸುವಂತೆ ಯಾವುದೇ ಒತ್ತಡಗಳೂ ಬರುತ್ತಿಲ್ಲ. ಯಾವುದೇ ಸಚಿವರು, ಶಾಸಕರೂ ಒತ್ತಡ ಹಾಕಿಲ್ಲ, ಯಾವುದೇ ಒತ್ತಡಕ್ಕೂ ನಾವು ಮಣಿಯುವುದೂ ಇಲ್ಲ. ಕಾನೂನು ರೀತಿಯಲ್ಲಿಯೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆಂದು ಸ್ಪಷ್ಟಪಡಿಸಿದರು.

    ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರೂ ಕೂಡ ಮಾತನಾಡಿದ್ದು, ಆರೋಪಿ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ವಕೀಲ ​ಎಸ್​ಪಿಪಿ ಪ್ರಸನ್ನಕುಮಾರ್ ಅವರನ್ನು ಬದಲಾವಣೆ ಮಾಡಿದರೂ ತಪ್ಪಿಲ್ಲ. ಎಸ್​ಪಿಪಿ ಬದಲಾವಣೆ ಆಗಬೇಕಾದರೂ ಒಂದು ಕಾರಣ ಇರಲಿದೆ. ಮುಖ್ಯಮಂತ್ರಿಗಳಾಗಲಿ ಅಥವಾ ನಾನಾಗಲಿ, ಕಾನೂನು ಸಲಹೆ ಪಡೆದು ನಿರ್ಧಾರ ತೀರ್ಮಾನಿಸುತ್ತೇವೆ. ಯಾರನ್ನೇ ನೇಮಿಸಿದರೂ ಕಾನೂನು ಪ್ರಕಾರವೇ ಮಾಡಬೇಕು ಎಂದು ಹೇಳಿದರು.

   ದರ್ಶನ್ ತಪ್ಪೊಪ್ಪಿಕೊಂಡಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ನಾವು ಪ್ರಕರಣವನ್ನು ಯಾವುದೇ ಕಾರಣಕ್ಕೂ ಸಡಿಲ ಮಾಡಲ್ಲ. ಅಂತಹ ಚಿಂತನೆ ಕೂಡ ಸರ್ಕಾರದ ಮುಂದೆ ಇಲ್ಲ. ಯಾವುದೇ ಮುಲಾಜು, ಒತ್ತಡ ಇಲ್ಲದೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ದರ್ಶನ್ ಮ್ಯಾನೇಜರ್ ನಾಪತ್ತೆ ಬಗ್ಗೆ ಯಾವ ಮಾಹಿತಿ ಬಂದಿಲ್ಲ. ದರ್ಶನ್ ಇದರಲ್ಲಿ ಭಾಗಿಯಾಗಿದ್ದರೆ ಅದಕ್ಕೆ ಸರ್ಕಾರ ಕೂಡ ತನಿಖೆಗೆ ಅನುಮತಿ ಕೊಡಲಿದೆ. ಏನು ‌ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಬಿಜೆಪಿಯವರ ಪ್ರತಿಭಟನೆಗೆ ಏನು ಕ್ರಮ ತಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ. ಪ್ರತಿಭಟನೆ ಮಾಡುವುದಕ್ಕೆ ಬೇಡ ಅನ್ನಲ್ಲ, ಅದು ಅವರ ಹಕ್ಕು. ಆದರೆ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಲಾಠಿ ಚಾರ್ಜ್ ಮಾಡುತ್ತೇವೆ. ರಸ್ತೆಗೆ ಇಳಿದು ಪ್ರತಿಭಟನೆ ಮಾಡ್ತೇವೆ ಅಂದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರು ಅನುಮತಿ ಕೊಟ್ಟರೆ ಮಾತ್ರ ಪ್ರತಿಭಟನೆ ಮಾಡಬಹುದು ಎಂದು ಎಚ್ಚರಿಕೆ ನೀಡಿದರು.

    ಈಗಾಗಲೇ ತೈಲ ದರ ಹೆಚ್ಚಳ ಆದೇಶ ಹೊರಡಿಸಿದ್ದೇವೆ. ಜನರು ಸಹ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ. ನೆರೆ ರಾಜ್ಯದವರು ನಮ್ಮಲ್ಲಿ ಬಂದು ಹಾಕಿಸಿಕೊಳ್ಳುತ್ತಿದ್ದಾರೆ. ನೀರು, ಬಸ್ ದರ ಏರಿಕೆ ಬಗ್ಗೆ ಆಯ ಇಲಾಖೆ ನಿರ್ಧಾರ ಮಾಡುತ್ತೆ. ಹೀಗಾಗಿ ಇಲಾಖೆ ಸಚಿವರು ಗಮನಿಸ್ತಾರೆ. ನಮಗೆ ದೂರು ಬಂದರೆ, ಆ ಬಳಿಕ ನಾನು ಕ್ರಮ ವಹಿಸುತ್ತೇನೆ ಎಂದರು.

   ವಾಲ್ಮೀಕಿ ನಿಗಮ ಹಗರಣದಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಅದನ್ನ ಬಿಜೆಪಿಯವರು ಸಾಬೀತುಪಡಿಸಲಿ. ಸಿಬಿಐಗೆ ಕೊಡಿ ಅಂತ‌ ಕೂಗಾಡುತ್ತಿದ್ದರು, ಈಗ ಸಿಬಿಐ ಕೂಡ ಪ್ರಕರಣದ ತನಿಖೆ ನಡೆಸುತ್ತಿದೆ. ಬ್ಯಾಂಕ್​ನವರು ದೂರು ನೀಡಿದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.

   ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸರ್ಕಾರ ನೇಮಿಸಿರುವ ಎಸ್‌ಪಿಪಿ ಪ್ರಸನ್ನಕುಮಾರ್‌ ಅವರು ಖಡಕ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರನ್ನು ಬದಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಬಗ್ಗೆ ಸರ್ಕಾರ ಕೂಡ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿತ್ತು.

   ಎಸ್​ಪಿಪಿ ಪ್ರಸನ್ನಕುಮಾರ್​ ಅವರನ್ನು ಬದಲಿಸಿದರೆ ಅನುಮಾನ ಬರುವ ಸಾಧ್ಯತೆ ಇರುವುದರಿಂದ, ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap