ಹ್ಯಾಂಡ್‌ರೈಟಿಂಗ್ ಚೆನ್ನಾಗಿಲ್ಲವೆಂದು ಬಾಲಕನ ಕೈ ಸುಟ್ಟ ಪಾಪಿ ಶಿಕ್ಷಕಿ..!

ಮುಂಬೈ:

    ಹ್ಯಾಂಡ್‌ರೈಟಿಂಗ್ ಸುಂದರವಾಗಿಲ್ಲ  ಎಂದು ಮೇಣದ ಬೆಂಕಿಯಿಂದ 8 ವರ್ಷದ ವಿದ್ಯಾರ್ಥಿಯ ಕೈಯನ್ನು ಸುಟ್ಟ ಆರೋಪದ ಮೇಲೆ ಮುಂಬೈನ  ಮಲಾಡ್ ಪ್ರದೇಶದ ಖಾಸಗಿ ಶಿಕ್ಷಕಿ  ರಾಜ್‌ಶ್ರೀ ರಾಠೋಡ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಘಟನೆ ಜುಲೈ 28ರ ಸಂಜೆ ಮಲಾಡ್ ಈಸ್ಟ್‌ನ ಜೆಪಿ ಡೆಕ್ಸ್ ಬಿಲ್ಡಿಂಗ್‌ನಲ್ಲಿರುವ ರಾಠೋಡ್‌ ಅವರ ಮನೆಯಲ್ಲಿ ನಡೆದಿದೆ.

    ವಿದ್ಯಾರ್ಥಿ ಮೊಹಮ್ಮದ್ ಹಂಜಾ ಖಾನ್, ಲಕ್ಷಧಾಮ್ ಶಾಲೆಯ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಪ್ರತಿದಿನ ಸಂಜೆ 7 ರಿಂದ 9 ಗಂಟೆಯವರೆಗೆ ರಾಠೋಡ್‌ ಅವರ ಮನೆಯಲ್ಲಿ ಟ್ಯೂಶನ್‌ಗೆ ಹಾಜರಾಗುತ್ತಿದ್ದ. ವಿದ್ಯಾರ್ಥಿಯ ಅವರ ತಂದೆ ಮುಸ್ತಕೀನ್ ಖಾನ್ ಪ್ರಕಾರ, ಹಂಜಾ ಅವರ ಸಹೋದರಿ ರುಬಿನಾ ಆತನನ್ನು ಟ್ಯೂಶನ್‌ಗೆ ಕರೆದೊಯ್ದಿದ್ದಳು. ರಾತ್ರಿ 9 ಗಂಟೆ ಸುಮಾರಿಗೆ ರಾಠೋಡ್, ಮುಸ್ತಕೀನ್‌ಗೆ ಕರೆ ಮಾಡಿ, ಹಂಜಾ ಖಾನ್ ಅಳುತ್ತಿದ್ದಾನೆ, ತಕ್ಷಣ ಬಂದು ಕರೆದುಕೊಂಡು ಹೋಗಿ ಎಂದು ತಿಳಿಸಿದ್ದರು.

   ಮನೆಗೆ ಮರಳಿದಾಗ, ಹಂಜಾ ಖಾನ್ ತನ್ನ ಶಿಕ್ಷಕಿ ಕೈಬರಹದ ತಪ್ಪಿಗೆ ಶಿಕ್ಷೆಯಾಗಿ ತನ್ನ ಬಲಗೈಯನ್ನು ಉರಿಯುವ ಮೇಣದ ಬೆಂಕಿಯ ಮೇಲೆ ಇರಿಸಿದ್ದಾಗಿ, ಇದರಿಂದ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ ಎಂದು ಬಾಯಿಬಿಟ್ಟಿದ್ದಾನೆ. ವಿದ್ಯಾರ್ಥಿಯನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಲಾಯಿತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.

   ಮುಸ್ತಕೀನ್ ಖಾನ್ ದೂರು ದಾಖಲಿಸಿದ ನಂತರ, ಪೊಲೀಸರು ಶಿಕ್ಷಕಿ ರಾಠೋಡ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆಯು ಮುಂದುವರಿದಿದ್ದು, ಈ ಘಟನೆಯು ಶಿಕ್ಷಕರಿಂದ ವಿದ್ಯಾರ್ಥಿಗಳ ಮೇಲಿನ ಕ್ರೂರ ಶಿಕ್ಷೆಯ ಬಗ್ಗೆ ಗಂಭೀರ ಚರ್ಚೆಗೆ ದಾರಿಮಾಡಿದೆ. ಸ್ಥಳೀಯ ಸಮುದಾಯವು ಈ ಕೃತ್ಯವನ್ನು ಖಂಡಿಸಿದ್ದು, ಶಿಕ್ಷಕರ ವರ್ತನೆಯಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ತೀವ್ರಗೊಳಿಸಿದ್ದಾರೆ. ಈ ಘಟನೆಯು ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ನೀತಿಗಳ ಮೇಲೆ ಗಮನ ಸೆಳೆದಿದೆ. 

   ಇನ್ನು ಈ ಹಿಂದೆ ಗುಜರಾತ್​ನ ವಲ್ಸಾದ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಾಮೂಹಿಕವಾಗಿ ನಡೆಯುವ ಪ್ರಾರ್ಥನೆಗೆ ತಡವಾಗಿ ಬಂದಿದ್ದಕ್ಕಾಗಿ ಶಾಲಾ ಶಿಕ್ಷಕರೊಬ್ಬರು 40 ವಿದ್ಯಾರ್ಥಿಗಳಿಗೆ ಥಳಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿತ್ತು. ಧರ್ಮಪುರದಿಂದ 35 ಕಿ.ಮೀ ದೂರದಲ್ಲಿರುವ ವಲ್ಸಾದ್​ ಜಿಲ್ಲೆ ಖಡ್ಕಿ ಗ್ರಾಮದಲ್ಲಿ ಮಹಾರಾಷ್ಟ್ರ ಗಡಿಗೆ ಸಮೀಪದಲ್ಲಿ ಈ ಘಟನೆ ನಡೆದಿತ್ತು, ಶಾಲೆಯನ್ನು ಸರ್ವೋದಯ ಪರಿವಾರ ಟ್ರಸ್ಟ್ ನಡೆಸುತ್ತಿದೆ ಎಂದು ತಿಳಿದು ಬಂದಿತ್ತು. ಘಟನೆ ಕುರಿತು ಆಕ್ರೋಶಗೊಂಡ ಗ್ರಾಮಸ್ಥರು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ವಿರುದ್ಧ ದೂರು ನೀಡಿದ್ದರು. ಅಗತ್ಯ ಕ್ರಮಕ್ಕಾಗಿ ಘಟನೆಯ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿ ತಿಳಿಸಿದ್ದರು. ಶಾಲೆಗೆ ಬರುವ ಮುನ್ನವೇ ಆಕ್ರೋಶಗೊಂಡ ಗ್ರಾಮಸ್ಥರು ಶಾಲೆಗೆ ಬೀಗ ಕೂಡಾ ಜಡಿದು ಪ್ರತಿಭಟನೆ ನಡೆಸಿದ್ದರು.

Recent Articles

spot_img

Related Stories

Share via
Copy link