ತುಮಕೂರು :
ನಗರದಲ್ಲಿ ಹತ್ಯೆಯಾದ ರೌಡಿ ಶೀಟರ್ ಮಂಜುನಾಥ್ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಬಂಧಿತನು ಗುಬ್ಬಿ ತಾಲ್ಲೂಕು ಗೌರಿಪುರದ ವಿಕಾಸ್ ಆಲಿಯಾಸ್ ವಿಕ್ಕಿ, ಈತ ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದು ತಲೆಮರೆಸಿಕೊಂಡಿದ್ದ ಎಂದು ಅಡಿಷನಲ್ ಎಸ್ಪಿ ಉದೇಶ್ ಹೇಳಿದ್ದಾರೆ.
ಈ ತಿಂಗಳ 2ರಂದು ಬುಧವಾರ ರಾತ್ರಿ 10.30ರ ಸಮಯದಲ್ಲಿ ರೌಡಿ ಶೀಟರ್ ಮಂಜುನಾಥನನ್ನು ಡ್ರಾಗರ್‍ನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಬಂಧನಕ್ಕೆ ಎಸ್ಪಿ ಡಾ.ವಂಶಿಕೃಷ್ಣ ಅವರು, ತಿಲಕ್‍ಪಾರ್ಕ್ ಸರ್ಕಲ್ ಇನ್ಸ್ಪೆಕ್ಟರ್ ಮುನಿರಾಜು, ತಿಲಕ್ ಪಾರ್ಕ್ ಹಾಗೂ ಜಯನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಒಳಗೊಂಡ ತಂಡ ರಚಿಸಿದ್ದರು.
ಆರೋಪಿ ವಿಕಾಸ್ ನಗರದ ಸಮೀಪದ ಅಜ್ಜಪ್ಪನಹಳ್ಳಿ ಬಳಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಸಬ್‍ಇನ್ಸ್‍ಪೆಕ್ಟರ್ ನವೀನ್, ಎಎಸ್‍ಐ ಪರಮೇಶ್, ಸಿಬ್ಬಂದಿಗಳಾದ ಸೈಮನ್, ಮುನ್ನಾ ಅವರೊಂದಿಗೆ ಭಾನುವಾರ ಬೆಳಿಗ್ಗೆ ತೆರಳಿದ್ದರು.
ಬಂಧಿಸಲು ಹೋದ ಸಂದರ್ಭದಲ್ಲಿ ಆರೋಪಿ ವಿಕಾಸ್ ಕೈಯಲ್ಲಿದ್ದ ಡ್ರಾಗರ್‍ನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಎಎಸ್‍ಐ ಪರಮೇಶ್ ಅವರ ಎಡಗೈ ಗಾಯಗೊಳಿಸಿದ. ಈ ವೇಳೆ ಆತ್ಮರ್ಷಣೆಗಾಗಿ ಸಬ್‍ಇನ್ಸ್‍ಪೆಕ್ಟರ್ ನವೀನ್ ಆತನ ಮೇಲೆ ಗುಂಡು ಹಾರಿಸಿದಾದ ಆರೋಪಿ ಎಡಗಾಲಿಗೆ ಬಿದ್ದು ಗಾಯವಾಗಿದೆ. ಆತನನ್ನು ವಶಕ್ಕೆ ಪಡೆದು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎಎಸ್‍ಪಿ ಉದೇಶ್ ಹೇಳಿದ್ದಾರೆ.
ವಿಕಾಸ್ ಮೇಲೆ ತುಮಕೂರು ಜಿಲ್ಲೆ ಹಾಗು ಬೆಂಗಳೂರು ಗ್ರಾಮಾಂತ ವ್ಯಾಪ್ತಿಯ ಠಾಣೆಗಳಲ್ಲಿ ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
