ಅರುಣಾಚಲ ಪ್ರದೇಶ:
ಭರತ್ ಮಾತಾ ಕಿ ಜೈ ಎನ್ನಲು ಮುಸ್ಲಿಂ ಧರ್ಮ ಗುರುವೊಬ್ಬರು ನಿರಾಕರಿಸಿರುವ ಘಟನೆ ಅರುಣಾಚಲ ಪ್ರದೇಶದ ನಹರ್ಲಗುನ್‌ನ ಜಾಮಾ ಮಸೀದಿಯಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ನವೆಂಬರ್ 27 ರಂದು ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಬಳಿಕ ಗುರುತು, ವಲಸೆ ಮತ್ತು ರಾಷ್ಟ್ರೀಯತೆಯ ಬಗ್ಗೆ ಉದ್ವಿಗ್ನತೆಯನ್ನು ಉಂಟು ಮಾಡಿದೆ.
ಅರುಣಾಚಲ ಪ್ರದೇಶದ ನಹರ್ಲಗುನ್‌ನ ಜಾಮಾ ಮಸೀದಿಯಲ್ಲಿ ಅರುಣಾಚಲ ಪ್ರದೇಶ ಸ್ಥಳೀಯ ಯುವ ಸಂಘದ ಇಬ್ಬರು ನಾಯಕರು ಮುಸ್ಲಿಂ ಧರ್ಮಗುರುವಿನ ಬಳಿ ದೇಶಭಕ್ತಿಯ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಧರ್ಮಗುರು ನಿರಾಕರಿಸಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಜಾಮಾ ಮಸೀದಿಯೊಳಗೆ ಉಂಟಾದ ಘರ್ಷಣೆಯನ್ನು ಕಾಣಬಹುದು.ನವೆಂಬರ್ 27 ರಂದು ಚಿತ್ರೀಕರಿಸಲಾಗಿರುವ ಈ ವಿಡಿಯೊದಲ್ಲಿ ಯುವ ಸಂಘದ ಇಬ್ಬರು ನಾಯಕರು ಮುಸ್ಲಿಂ ಧರ್ಮ ಗುರುವಿನ ಬಳಿ “ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಮಾಡಲು ಹೇಳಿದ್ದು, ಇದನ್ನು ಧರ್ಮಗುರು ನಿರಾಕರಿಸಿದ್ದಾರೆ. ಆಗ ಹೆಚ್ಚಿನ ಜನರು ಒಟ್ಟುಗೂಡಿ ಜೋರಾಗಿ ಘೋಷಣೆ ಕೂಗುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಅರುಣಾಚಲ ಪ್ರದೇಶ ಸ್ಥಳೀಯ ಯುವ ಸಂಘದ ಪ್ರಧಾನ ಕಾರ್ಯದರ್ಶಿ ಟ್ಯಾಪರ್ ಮೇಯಿಂಗ್ ಮತ್ತು ಅಧ್ಯಕ್ಷ ಟಾರೊ ಸೋನಮ್ ಲಿಯಾಕ್ ಎಂಬವರು ಧರ್ಮಗುರುವಿನ ಬಳಿ ದೇಶಭಕ್ತಿಯ ಘೋಷಣೆ ಕೂಗಲು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಅವರು “ಇಂಡಿಯಾ ಜಿಂದಾಬಾದ್” ಎಂದು ಹೇಳುತ್ತಾರೆ. ಆದರೆ ಯುವ ಸಂಘದ ಸದಸ್ಯರು ತಾವು ಹೇಳಿದ ಪದಗುಚ್ಛವನ್ನೇ ಹೇಳಬೇಕೆಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಲಿಯಾಕ್ ಪ್ರತಿಯೊಬ್ಬ ಮುಸ್ಲಿಮ್ ಭಯೋತ್ಪಾದಕನಲ್ಲ. ಆದರೆ ಪ್ರತಿಯೊಬ್ಬ ಭಯೋತ್ಪಾದಕರು ಯಾಕೆ ಮುಸ್ಲಿಂ ಆಗಿರುತ್ತಾರೆ ಎಂದು ಪ್ರಶ್ನಿಸಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ತಮ್ಮ ನಿಲುವನ್ನು ಸಮರ್ಥಿಸಿಕೊಂಡ ಧರ್ಮಗುರು, ಇಂಡಿಯಾ ಜಿಂದಾಬಾದ್ ಸಾಕು. ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ ಎಂದಿದ್ದಾರೆ.
ಅರುಣಾಚಲ ಪ್ರದೇಶಕ್ಕೆ ಅಕ್ರಮ ವಲಸೆ ಹೆಚ್ಚುತ್ತಿರುವುದರಿಂದ ಅರುಣಾಚಲ ಪ್ರದೇಶ ಸ್ಥಳೀಯ ಯುವ ಸಂಘ ಕಳೆದ ಒಂದು ತಿಂಗಳಿನಿಂದ ಜಾಗೃತಿ ಅಭಿಯಾನ ನಡೆಸುತ್ತಿದ್ದು, ಇದು ಉದ್ವಿಗ್ನತೆಯನ್ನು ಉಂಟು ಮಾಡಿದೆ. ನವೆಂಬರ್ 25 ರಂದು ಈ ಗುಂಪು ನಹರ್ಲಗುನ್ ಹೆಲಿಪ್ಯಾಡ್ ಬಳಿ ಜಾಮಾ ಮಸೀದಿಯ ಅಕ್ರಮ ನಿರ್ಮಾಣವನ್ನು ಪ್ರಶ್ನಿಸಿ ರಾಜ್ಯಾದ್ಯಂತ ಬಂದ್ ಗೆ ಘೋಷಣೆ ಮಾಡಿತ್ತು. ಬಳಿಕ ಗೃಹ ಇಲಾಖೆ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಅದನ್ನು ರದ್ದುಗೊಳಿಸಲಾಗಿತ್ತು.








