ನಗರ ಆಕಾಂಕ್ಷಿಗಳಲ್ಲಿ ಅವರನ್ ಬಿಟ್, ಇವರನ್ ಬಿಟ್, ಟಿಕೆಟ್ ಯಾರಿಗೆ ಎನ್ನುವ ಸ್ಥಿತಿ..
ಎಸ್.ಹರೀಶ್ ಆಚಾರ್ಯ, ತುಮಕೂರು
ತುಮಕೂರು
ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಂತೆ ಕಾಂಗ್ರೆಸ್‌ನಲ್ಲೂ ಟಿಕೆಟ್ ಫೈಟ್ ದಿನದಿಂದ ದಿನಕ್ಕೆ ಬಿರುಸಾಗಿದ್ದು, ಮುಸ್ಲಿಂರಲ್ಲೇ ಹೆಚ್ಚಾದ ಆಕಾಂಕ್ಷಿತರಿAದಾಗಿ ಸಮುದಾಯದ ಮತ ಬ್ಯಾಂಕ್ ಚದುರುವಂತಾಗಿದೆ.
ಮಾಜಿ ಶಾಸಕ ಡಾ.ರಫೀಕ್ ಅಹಮದ್, ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಇಕ್ಬಾಲ್ ಅಹಮದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆಮಠ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್, ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯ ಕಾರ್ಯದರ್ಶಿ ಡಾ.ರ‍್ಹಾನಾ ಬೇಗಂ, ಧಾರ್ಮಿಕ ದತ್ತಿ ಪರಿಷತ್‌ನ ರಾಜ್ಯ ಮಾಜಿ ಉಪಾಧ್ಯಕ್ಷ ಹಿರಿಯ ಮುಖಂಡ ಎಚ್.ಸಿ.ಹನುಮಂತಯ್ಯ, ಜಿ.ಎಲ್.ನರೇಂದ್ರಬಾಬು ನಗರ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, 8ನೇ ಅರ್ಜಿಯಾಗಿ ಪಿ.ಎಸ್.ಅಯೂಬ್ ಹೆಸರಲ್ಲಿ ಅಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಬಾಬು ಅರ್ಜಿ ಹಾಕಿ ತಮಗೆ ಟಿಕೆಟ್ ಎಂದು ವ್ಯಾಪಕ ಪ್ರಚಾರಕ್ಕೆ ಧುಮುಕಿರುವುದು ‘ಅವರನ್ ಬಿಟ್, ಇವರನ್ ಬಿಟ್, ಟಿಕೆಟ್ ಯಾರಿಗೆ ?’ ಎಂಬ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಹುಟ್ಟಿಹಾಕಿದೆ.
ಮತ ವಿಭಜನೆ:
ತುಮಕೂರು ನಗರ ಕ್ಷೇತ್ರದಲ್ಲಿ 50 ಸಾವಿರಕ್ಕೂ ಮಿಗಿಲಾಗಿರುವ ಮುಸ್ಲೀಂ ಮತದಾರರು ಹಿಂದಿನಿಂದಲೂ ಕೈ ಮುಸ್ಲಿಂ ಅಭ್ಯರ್ಥಿಗಳ ಪರ ಹೆಚ್ಚಾಗಿ ಒಲವು ತೋರುತ್ತಾ ಬಂದಿದ್ದು, ಈ ಬಾರಿ ಐವರು ಮುಸ್ಲಿಂ ಆಕಾಂಕ್ಷಿಗಳೇ ಇರುವುದರಿಂದ ಮುಸ್ಲಿಂ ಮತ ಬ್ಯಾಂಕ್ ಈ ಆಕಾಂಕ್ಷಿಗಳ ನಡುವೆ ಮಾತ್ರವಲ್ಲದೆ ಬಿಜೆಪಿ, ಜೆಡಿಎಸ್ ಆಕಾಂಕ್ಷಿಗಳ ನಡುವೆಯೂ ಚದುರಿದೆ.
ಸಮುದಾಯದ ಕಾರ್ಯಕರ್ತರು, ಬೆಂಬಲಿಗರು ವಿಭಾಗವಾಗಿ ತಮ್ಮ ಆಯ್ಕೆಯ ಟಿಕೆಟ್ ಆಕಾಂಕ್ಷಿಗಳ ಪರ ಓಡಾಟ ನಡೆಸುತ್ತಿದ್ದು, ಮುಂದೆ ಟಿಕೆಟ್ ಒಬ್ಬರಿಗೆ ಘೋಷಣೆಯಾದ ಸಂದರ್ಭದಲ್ಲಿ ಇವರೆಲ್ಲ ಎತ್ತ ಹೋಗಲಿದ್ದಾರೆ. ತಮ್ಮ ಬೆಂಬಲಿತ ನಾಯಕನಿಗೆ ಟಿಕೆಟ್ ಸಿಕ್ಕಿಲ್ಲವೆಂದು ಅಸಮಾಧಾನಿತರಿಗೆ ಯಾರ ಪರ ಹೋಗುವರು ಎಂಬುದು ಸಹ ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲು-ಗೆಲುವಿನಲ್ಲಿ ಪ್ರಮುಖ ಸಂಗತಿಯಾಗಲಿದೆ.
‘ಪರಮ’ ನಾಯಕರ ಕೃಪೆಗೆ ಟಿಕೆಟ್ ಆಕಾಂಕ್ಷಿಗಳ ದುಂಬಾಲು:
ಇನ್ನೂ ಟಿಕೆಟ್ ಆಕಾಂಕ್ಷಿತರು ಪಕ್ಷದ ಅಧಿನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಅವಕಾಶ ಸಿಕ್ಕಾಗಲೆಲ್ಲ ಭೇಟಿಯಾಗುತ್ತಾ ತಮಗೆ ಟಿಕೆಟ್ ಕೊಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ಟಿಕೆಟ್ ಹಂಚಿಕೆಯ ಕಮಿಟಿ ಸದಸ್ಯರಾದ ಡಾ.ಜಿ.ಪರಮೇಶ್ವರ ಅವರ ಕೃಪೆಗಳಿಸಲು ಆಕಾಂಕ್ಷಿಗಳು ಮುಂದಾಗಿರುವುದು ಕಂಡುಬಂದಿದೆ.
ಟಿಕೆಟ್ ಗೊಂದಲದ ನಡುವೆಯೇ ತಮಗೆ ಟಿಕೆಟ್ ಖಚಿತ ಎಂದು ಘೋಷಿಸಿಕೊಂಡು ಈಗಾಗಲೇ ಮತದಾರರ ಮನೆ ಬಳಿಕ ಎಡತಾಕುತ್ತಿರುವ ಆಕಾಂಕ್ಷಿಗಳು, ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಗ್ಯಾರಂಟಿ ಕಾರ್ಡ್ಗಳನ್ನು ಮನೆ ಮನೆ ತಲುಪಿಸುವ ಅಭಿಯಾನಕ್ಕೆ ಆಗಲೇ ಚಾಲನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ