ಭಾರತದಲ್ಲಿ ತಯಾರುಗೊಂಡಿರುವ ಕೋವಿಡ್ ಲಸಿಕೆಯನ್ನು ನಾನು ಪಡೆದುಕೊಂಡಿದ್ದೇನೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.ಎರಡು ದಿನಗಳ ಭಾರತದ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆಯಲ್ಲಿ ಭಾಗಿಯಾದರು.
ಈ ವೇಳೆ ಭಾರತದಲ್ಲೇ ತಯಾರುಗೊಂಡಿರುವ ಕೋವಿಡ್ ಲಸಿಕೆಯನ್ನು ತಾವು ಪಡೆದುಕೊಂಡಿರುವ ವಿಚಾರ ಬಹಿರಂಗಪಡಿಸಿದರು. ಹೈದರಾಬಾದ್ ಹೌಸ್ನಲ್ಲಿ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಬೋರಿಸ್, ಕೋವಿಡ್ ಲಸಿಕೆ ವಿಚಾರವಾಗಿ ಮಾತನಾಡುತ್ತಾ, ‘ನನ್ನ ತೋಳಿಗೆ ಭಾರತದ ಕೋವಿಡ್ ಲಸಿಕೆ ಹಾಕಲಾಗಿದೆ. ಇದಕ್ಕಾಗಿ ನಾನು ಭಾರತಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದರು.
ಭಾರತ-ಇಂಗ್ಲೆಂಡ್ ನಡುವಿನ ಸಂಬಂಧ ಈ ಹಿಂದಿನಿಗಿಂತಲೂ ಇದೀಗ ಬಹಳ ಗಟ್ಟಿಯಾಗಿದೆ. ಭಾರತದಲ್ಲಿ ಸಾಫ್ಟ್‌ವೇರ್ ಇಂಜಿನಿಯರಿಂಗ್ನಿಂದ ಆರೋಗ್ಯ ಕ್ಷೇತ್ರದಲ್ಲಿ 1 ಶತಕೋಟಿ ಮೌಲ್ಯದ ಹೂಡಿಕೆ ಮಾಡಲು ಸಿದ್ಧರಾಗಿದ್ದೇವೆ. ಭಾರತ ರಕ್ಷಣಾ ವಲಯ, ವ್ಯಾಪಾರ, ಹವಾಮಾನ ಸೇರಿದಂತೆ ಅನೇಕ ವಲಯಗಳ ಕುರಿತಾಗಿ ಪ್ರಧಾನಿ ಜೊತೆ ಚರ್ಚಿಸಲಾಗಿದೆ ಎಂದು ಬೋರಿಸ್ ಹೇಳಿದರು.
ಇದೇ ವೇಳೆ, ಇಂಡೋ-ಪೆಸಿಫಿಕ್ ಪ್ರದೇಶವನ್ನು ನಿರಂಕುಶಾಧಿಕಾರದ ಬೆದರಿಕೆಗಳಿಂದ ಮುಕ್ತಗೊಳಿಸಬೇಕು ಎಂದಿರುವ ಬ್ರಿಟನ್ ಪ್ರಧಾನಿ, ಯುಕೆ ಮತ್ತು ಭಾರತ ನಿರ್ದಿಷ್ಟ ಮುಕ್ತ ಸಾಮಾನ್ಯ ರಫ್ತು ಪರವಾನಗಿಯನ್ನು ರಚನೆ ಮಾಡಲು ಇಷ್ಟಪಡುತ್ತದೆ ಎಂದರು.
‘ಮೋದಿ ನನ್ನ ವಿಶೇಷ ಗೆಳೆಯ’: ನರೇಂದ್ರ ಮೋದಿ ನನ್ನ ಸ್ಪೆಷಲ್ ಹಾಗೂ ಕ್ಲೋಸ್ ಫ್ರೆಂಡ್ ಎಂದ ಹೇಳಿರುವ ಬೋರಿಸ್, ಭಾರತದಲ್ಲಿನ ಕೋವಿಡ್ ವ್ಯಾಕ್ಸಿನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇದೇ ವೇಳೆ ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್ ಅವರನ್ನು ನೆನಪಿಸಿಕೊಂಡ ಅವರು, ಭಾರತದಲ್ಲಿ ಎರಡು ದಿನ ಅದ್ಭುತ ಅನುಭವ ಪಡೆದುಕೊಂಡಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ