ಬೆಂಗಳೂರು
ಕರ್ನಾಟಕ – ತಮಿಳುನಾಡಿನ ಜೀವನಾಡಿಯಾಗಿರುವ ರಾಮನಗರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಲು ಹಾಗೂ ನೆರೆ ರಾಜ್ಯದ ಜನ ಮತ್ತು ಸರ್ಕಾರದಲ್ಲಿ ಮನೆ ಮಾಡಿರುವ ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶದಿಂದ ಮಾತುಕತೆ ನಡೆಸಲು ತಮಗೆ ಸಮಯಾವಕಾಶ ನೀಡುವಂತೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿ ಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಸಮಗ್ರ ಯೋಜನಾ ವರದಿಯನ್ನು ನಿಮ್ಮ ಮುಂದಿಡಲು ರಾಜ್ಯ ಸರ್ಕಾರ ಸಿದ್ಧವಾಗಿದ್ದು, ತಮಗೆ ಅನುಕೂಲವಾಗುವ ಸಮಯ ತಿಳಿಸಿದರೆ ರಾಜ್ಯ ಸರ್ಕಾರ ಮಾತುಕತೆ ನಡೆಸಲು ಸಿದ್ಧ ಎಂದು ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.
ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ತಗಾದೆ ಎತ್ತಿದೆ. ಯೋಜನೆಯ ಸಾಧ್ಯತಾ ವರದಿಗೆ ಸಮ್ಮತಿ ಸೂಚಿಸಿರುವ ಕ್ರಮ ನ್ಯಾಯಾಂಗ ನಿಂದನೆಯಾಗಲಿದೆ ಎಂದು ತಮಿಳುನಾಡು ಈಗಾಗಲೇ ಸುಪ್ರೀಂ ಕೋರ್ಟ್ ಕದ ತಟ್ಟಿದೆ.
ಈ ಬೆಳವಣಿಗೆಗಳ ನಡುವೆ ಡಿ.ಕೆ. ಶಿವಕುಮಾರ್ ಬರೆದಿರುವ ಪತ್ರದಲ್ಲಿ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಕುಡಿಯುವ ನೀರಿನ ಉದ್ದೇಶದಿಂದ ಮೇಕೆದಾಟು ಬಳಿ ನಿರ್ಮಿಸುತ್ತಿರುವ ಸಮತೋಲಿತ ಅಣೆಕಟ್ಟೆಯಿಂದ ತಮಿಳುನಾಡಿಗೂ ಅನುಕೂಲವಾಗಲಿದೆ. ಉತ್ತಮ ಮುಂಗಾರು ಸಂದರ್ಭದಲ್ಲಿ ಮೆಟ್ಟೂರು ಜಲಾಶಯದಿಂದ ಸಮುದ್ರಕ್ಕೆ ಹೆಚ್ಚುವರಿಯಾಗಿ ಹರಿದುಯೋಗುವ ನೀರನ್ನು ಹಿಡಿದಿಡಲು ಇದು ಸಹಕಾರಿಯಾಗಲಿದೆ. ಅಲ್ಲದೇ ತಮಿಳುನಾಡಿಗೆ ನ್ಯಾಯಯುತವಾಗಿ ನೀರು ಬಿಡುಗಡೆ ಮಾಡಲು ಈ ಅಣೆಕಟ್ಟೆಯಿಂದ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಆದರೆ ಈ ಪ್ರಸ್ತಾವಿತ ಯೋಜನೆ ಬಗ್ಗೆ ತಮಿಳು ನಾಡು ಜನ ಮತ್ತು ಸರ್ಕಾರದಲ್ಲಿ ತಪ್ಪು ಕಲ್ಪನೆಗಳಿದ್ದು, ಯೋಜನೆಯ ನಿಜವಾದ ವಾಸ್ತವಿಕತೆ ಬೇರೆಯೇ ಇದೆ. ಇದನ್ನು ವಿವರಿಸಲು ತಮಗೆ ಅವಕಾಶ ನೀಡಿ ಎಂದು ಡಿ.ಕೆ. ಶಿವಕುಮಾರ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ