ಮೈಸೂರು ಸ್ಯಾಂಡಲ್ ಖಾಸಗೀಕರಣ ಮಾಡುವ ಹುನ್ನಾರ :ಕಾರ್ಮಿಕರ ಸಂಘಟನೆ ಆರೋಪ

ಬೆಂಗಳೂರು

     ಸರ್ಕಾರಿ ಸಾಬೂನು ಕಾರ್ಖಾನೆ ? ಕೆಎಸ್ ಡಿಎಲ್ ನ ಗತ ವೈಭವವನ್ನು ನಾಶ ಮಾಡಿ ಖಾಸಗೀಕರಣ ಮಾಡುವ ಹುನ್ನಾರ ನಡೆಯುತ್ತಿದ್ದು, ಸಾರ್ವಜನಿಕ ಉದ್ದಿಮೆಯನ್ನು ಉಳಿಸಿ, ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಉತ್ಕಷ್ಠ ಗುಣಮಟ್ಟದ ಮೈಸೂರು ಸ್ಯಾಂಡಲ್ ಸಾಬೂನು ಉತ್ಪನ್ನಗಳನ್ನು ಪೂರೈಸುವ ಮತ್ತು ಹತ್ತು ಸಾವಿರ ಅವಲಂಬಿತ ಕುಟುಂಬಗಳನ್ನು ರಕ್ಷಿಸಲು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಸರ್ಕಾರಿ ಸಾಬೂನು ಕಾರ್ಖಾನೆ ಕಾರ್ಮಿಕರ ಸಂಘ, ಸಾಬೂನು ಕಾರ್ಖಾನೆ ಕಾರ್ಮಿಕರ ಎಸ್.ಎಸ್.ಎಸ್.ಟಿ ಸಂಘ ಹಾಗೂ ಸರ್ಕಾರಿ ಸಾಬೂನು ಕಾರ್ಖಾನೆ ಅಧಿಕಾರಿಗಳ ಸಂಘ ಘೋಷಿಸಿದೆ.

     ಕೆಎಸ್ ಡಿಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ಆರ್. ಶಿವಶಂಕರ್ ಕಚ್ಚಾ ವಸ್ತುಗಳ ಖರೀದಿಯಲ್ಲಿ ಅಕ್ರಮವಾಗಿದೆ ಮತ್ತು ಸಾಬೂನು ಗುಣಮಟ್ಟದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕ ಸಾಬೂನು ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರದ ಹಿಂದೆ ಇವರು ಕಾರ್ಯನಿರ್ವಹಿಸುತ್ತಿರುವ ಸಂಶಯವಿದೆ. 1991 ರಿಂದ ನಿರಂತರವಾಗಿ ಕೆಎಸ್ ಡಿಎಲ್ ಬಗ್ಗೆ ನಿರಂತರವಾಗಿ ಆರೋಪ ಮಾಡುತ್ತಾ ಕಾರ್ಖಾನೆಯ ಘನತೆ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

    ಜಂಟಿ ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ಸಾಬೂನು ಕಾರ್ಮಿಕರ ಸಂಘದ ಅಧ್ಯಕ್ಷ ಮೈಖೆಲ್ ಬಿ. ಫರ್ನಾಂಡೀಸ್, ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಲೋಕೇಶ್, ಎಸ್.ಎಸ್-ಎಸ್.ಟಿ ನೌಕರರ ಸಂಘದ ಕಾರ್ಯಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಂ. ಪ್ರಕಾಶ್ ಮಾತನಾಡಿ, ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸಿದ್ದು, ಈ ಪಿತೂರಿಯ ಹಿಂದೆ ಜಿ.ಆರ್. ಶಿವಶಂಕರ್ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    1991ರಲ್ಲಿ ಅಂದಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಇವರ ವಿರುದ್ಧ ದೂರು ದಾಖಲಿಸಿದ್ದು, ಆಗ 20 ಸಾವಿರ ರೂಪಾಯಿ ದಂಡ ವಿಧಿಸಿದ್ದರು. 1998ರಲ್ಲಿ ಇವರ ವಿರುದ್ಧ ಕಾನೂನು ಹೋರಾಟ ನಡೆಸಿ 2008 ರವರೆಗೆ 10 ವರ್ಷಗಳ ಕಾಲ ಕಾರ್ಖಾನೆಯ ಯಾವುದೇ ವಿಷಯದ ಕುರಿತು ಚಟುವಟಿಕೆ ನಡೆಸಲು ಮತ್ತು ಪ್ರತಿಕ್ರಿಯಿಸಲು ನಿರ್ಬಂಧ ವಿಧಿಸಿದ್ದರು. 2015ರಲ್ಲಿ ಅಂದಿನ ವ್ಯವಸ್ಥಾಪಕ ನಿರ್ದೇಶಕರು ಇವರ ವಿರುದ್ಧ ಒಂದು ಕೋಟಿ ಮಾನನಷ್ಠ ಮೊಕದ್ದಮೆ ಹೂಡಿದ್ದರು. 2022ರಲ್ಲಿ ಇವರು ಮುಖ್ಯ ಕಚ್ಛಾಸಾಮಾಗ್ರಿ ಸೋಪ್ ನೂಡಲ್ಸ್ ಬಗ್ಗೆ ಅವ್ಯವಹಾರವಾಗಿದೆ ಎಂದು ಆಪಾದಿಸಿದಾಗ ಅಪರ ಮುಖ್ಯ ಕಾರ್ಯದರ್ಶಿಯವರು ಈ ಕುರಿತು ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಿ ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದೆ. ಇಷ್ಟಾದರೂ ಅಪಪ್ರಚಾರ ನಿಲ್ಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಮೈಖೆಲ್ ಫರ್ನಾಂಡೀಸ್ ಮಾತನಾಡಿ, 107 ವರ್ಷಗಳ ಕಾರ್ಖಾನೆಯನ್ನು ಹಲವಾರು ವರ್ಷಗಳಿಂದ ಸಾಬೂನು ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಯತ್ನಗಳು ನಡೆದಿತ್ತು. ಇದಕ್ಕೆ ಅವಕಾಶ ನೀಡಿಲ್ಲ. ಸಾರ್ವಜನಿಕ ಉದ್ದಿಮೆಯನ್ನು ಉಳಿಸಲು ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಲೋಕೇಶ್ ಮಾತನಾಡಿ, ಶಿವಶಂಕರ್ ಆರೋಪಗಳು ಆಧಾರ ರಹಿತ, ತಾವು 38 ವರ್ಷಗಳಿಂದ ಕೆಎಸ್ ಡಿಎಲ್ ನಲ್ಲಿ ಕೆಲಸ ಮಾಡುತ್ತಿದ್ದು, ಇಂತಹ ಅಪಪ್ರಚಾರಗಳಿಂದ ಸಂಸ್ಥೆಯ ಉತ್ಪನ್ನಗಳ ವರ್ಚಸ್ಸಿಗೆ ಮಸಿ ಬಳಿಯುವಂತಾಗಿದೆ. ಇತ್ತೀಚಿನ ಬೆಳವಣಿಗೆಗಳಿಂದ ಚಿತ್ರನಟ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ದೀರ್ಘಕಾಲದಿಂದ ಮೈಸೂರು ಸ್ಯಾಂಡಲ್ ಸೋಪ್ ಬಳಸುತ್ತಿದ್ದು, ಇದೀಗ ಸೋಪ್ ಬಳಕೆಗೆ ಹಿಂಜರಿಯುತ್ತಿದ್ದೇನೆ ಎಂದು ಹೇಳಿರುವುದು ಸರಿಯಲ್ಲ. ಇದರಿಂದ ಉತ್ಪನ್ನಗಳ ಮೇಲಿನ ಜನರ ವಿಶ್ವಾಸ ಕಡಿಮೆಯಾಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap