ಡಾ:ರಾಜ್ ಕುಟುಂಬದ ಕನಸಿನ ‘ಶಕ್ತಿಧಾಮ’ ಸಂಸ್ಥೆಗೆ ಹೆಗಲಾಗಿದ್ದರು ಪುನೀತ್!!

     ಮಹಿಳೆ ಮತ್ತು ಮಕ್ಕಳ ಪುನರ್ ವಸತಿ ಸೇರಿದಂತೆ ಅಬಲೆಯರಿಗೆ ಆಶ್ರಯ ನೀಡಿರುವ ಸಮಾಲೋಚನಾ ಕೇಂದ್ರಗಳು ರಾಜ್ಯದಲ್ಲಿ ಬಹಳಷ್ಟಿವೆ. ಮೈಸೂರಿನಲ್ಲಿ ಒಡನಾಡಿ ಹಾಗು ಶಕ್ತಿಧಾಮ ಸರ್ಕಾರೇತರ ಸಂಸ್ಥೆಗಳು ಇಂತಹ ಕಾರ್ಯದಲ್ಲಿ ಎತ್ತಿದ ಕೈ.

     ಶಕ್ತಿಧಾಮದ ಉಗಮ ಹಾಗು ಕೆಲಸ ಕಾರ್ಯಗಳ ಬಗ್ಗೆ ಬಹಳಷ್ಟು ಜನರಿಗೆ ಅರಿವಿಲ್ಲ. ಸದ್ದಿಲ್ಲದಂತೆ ಕಾಯಕದಲ್ಲಿ ತೊಡಗಿರುವ ಸಂಸ್ಥೆ ಶಕ್ತಿಧಾಮವಾಗಿದೆ. ಡಾ.ರಾಜ್‍ಕುಮಾರ್ ಅವರ ಕನಸಿನ ಕೂಸು ಇದು. ಕನ್ನಡ ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನಮಾನ ಗಳಿಸಿದ ಡಾ.ರಾಜ್‍ಕುಮಾರ್ ಅವರಿಗೆ ಇಂತಹ ಒಂದು ಕೇಂದ್ರ ತೆರೆಯಬೇಕೆಂಬ ಮನಸ್ಸು ಬಂದದ್ದಾದರೂ ಹೇಗೆ ಎಂಬುದೇ ಒಂದು ಆಶ್ಚರ್ಯಕರ ಸಂಗತಿ.

      1998ರ ಸಮಯ ಇರಬಹುದು. ಅಶಕ್ತ ಮತ್ತು ಅನಾಥ ಮಹಿಳೆಯರು ಬೀದಿಗೆ ಬಿದ್ದು ವೇಶ್ಯಾವಾಟಿಕೆಯಂತಹ ಚಟುವಟಿಕೆಗಳಿಗೆ ಇಳಿಯುತ್ತಿದ್ದರು. ನೂರಾರು ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವುದು ಹೇಗೆ ಎಂಬುದು ಆಗಿನ ಕಾಲಕ್ಕೆ ಒಂದು ದೊಡ್ಡ ಸವಾಲು. ಪೊಲೀಸ್ ಕಮೀಷನರ್ ಕೆಂಪಯ್ಯ ಅವರು ಈ ವಿಷಯವನ್ನು ಡಾ.ರಾಜ್‍ಕುಮಾರ್ ಅವರಲ್ಲಿ ಪ್ರಸ್ತಾಪಿಸಿದ್ದರಂತೆ. ಈ ವಿಷಯ ಪಾರ್ವತಮ್ಮ ಅವರ ಬಳಿಗೂ ಹೋಯಿತು. ಹಿಂದೆ ಮುಂದೆ ನೋಡದೆ ಒಂದು ರೂಪುರೇಷೆ ಸಿದ್ಧವಾಯಿತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ನೀಡಿದ ಜಾಗದಲ್ಲಿ ಮಹಿಳೆಯರಿಗಾಗಿ ಒಂದು ಪುನರ್ವಸತಿ ಕೇಂದ್ರ ಆರಂಭಕ್ಕೆ ಎಲ್ಲ ಸಿದ್ಧತೆಗಳೂ ನಡೆದವು. ಡಾ.ರಾಜ್‍ಕುಮಾರ್ ಅವರು ಸಂಗೀತ ಸಂಜೆ ನಡೆಸಿ ಅದರಿಂದ ಬಂದ ಹಣವನ್ನು ಅದಕ್ಕೆ ಧಾರೆ ಎರೆದರು. ಶಕ್ತಿಧಾಮ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಪುನರ್ ವಸತಿ ಕೇಂದ್ರವಾಗಿ ಮೈಸೂರು ಊಟಿ ರಸ್ತೆಯ ಬಳಿ ತಲೆ ಎತ್ತಿ ನಿಂತಿತು.

     2001ನೇ ಇಸವಿಯಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಮೋಟಮ್ಮ ಅವರು ಮಹಿಳಾ ಇಲಾಖೆ ಸಚಿವರು. ಮೋಟಮ್ಮ ಅವರಲ್ಲಿಯೂ ಮಹಿಳೆಯರ ಬಗ್ಗೆ ಒಂದಷ್ಟು ಹೊಸ ಆಲೋಚನೆಗಳು ಮೂಡಿದವು. ಅಶಕ್ತರು, ನಿರ್ಗತಿಕ ಮಹಿಳೆಯರ ಮಾರ್ಗದರ್ಶನಕ್ಕಾಗಿ ಒಂದು ಕೇಂದ್ರವನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಬೇಕೆಂಬ ಉತ್ಕಟ ಬಯಕೆ ಅವರಲ್ಲಿತ್ತು. ಸಾಂತ್ವನ ಕೇಂದ್ರಗಳು ರೂಪುಗೊಂಡದ್ದೇ ಆಗ. ಪ್ರತಿ ಜಿಲ್ಲಾ ಮಟ್ಟದಲ್ಲಿ ಸಾಂತ್ವನ ಕೇಂದ್ರಗಳು ಆರಂಭವಾದಾಗ ಸಶಕ್ತ ಎನ್‍ಜಿಓಗಳನ್ನು ಗುರುತಿಸಿ ಅವುಗಳಿಗೆ ಸಾಂತ್ವನ ಕೇಂದ್ರದ ಜವಾಬ್ದಾರಿ ನೀಡಲಾಯಿತು. ಸರ್ಕಾರದಿಂದ ಸಾಧ್ಯವಾಗದ ಒಂದು ಉತ್ತಮ ಕಾರ್ಯ ಇಂತಹ ಸರ್ಕಾರೇತರ ಸಂಸ್ಥೆಗಳಿಂದ ಸಾಧ್ಯ ಎಂಬುದನ್ನು ನಂಬಿ ಗೌರವ ಧನದ ಆಧಾರದ ಮೇಲೆ ಈ ಕೇಂದ್ರಗಳು ಆಗ ರೂಪುಗೊಂಡವು. ಮೈಸೂರಿನಲ್ಲಿ ಒಡನಾಡಿ ಮತ್ತು ಶಕ್ತಿಧಾಮಕ್ಕೆ ಸಾಂತ್ವನ ಕೇಂದ್ರದ ಅನುಷ್ಠಾನದ ಹೊಣೆ ಹೊರಿಸಲಾಯಿತು.

SHAKTHIDHAMA® – Women's rehabilitation and development center

      ಶಕ್ತಿಧಾಮ ಆರಂಭವಾದಾಗಿನಿಂದ ಸಾವಿರಾರು ಮಹಿಳೆಯರು ಅಲ್ಲಿ ಆಶ್ರಯ ಪಡೆದಿದ್ದಾರೆ. ರಾಜ್ಯದ ಹಲವು ಕಡೆಗಳಿಂದ ಮಹಿಳೆಯರಿಗೆ ಅಲ್ಲಿ ಪುನರ್ವಸತಿ ನೀಡಲಾಗಿದೆ. ವೇಶ್ಯಾವೃತ್ತಿಗೆ ಬಲವಂತವಾಗಿ ನೂಕಲ್ಪಟ್ಟ ಮಹಿಳೆಯರು, ಮನೆಯಿಂದ ಹೊರ ಹಾಕಲ್ಪಟ್ಟ ಹೆಂಗಸರು, ಅತ್ಯಾಚಾರಕ್ಕೆ ಒಳಗಾಗಿ ಮಾನಸಿಕವಾಗಿ ನೊಂದವರು, ಶೋಷಣೆಗೆ ಒಳಗಾದವರು ಹೀಗೆ ಎಲ್ಲ ವರ್ಗದ ಮಹಿಳೆಯರಿಗೆ ಇಲ್ಲಿ ನೆಲೆ ಕಲ್ಪಿಸಲಾಗುತ್ತಿದೆ. ಯಾವುದೇ ಲಾಭದ ಉದ್ದೇಶವಿಲ್ಲದೆ ಸಾಮಾಜಿಕ ಕಳಕಳಿಯಿಂದ ಈ ಸರ್ಕಾರೇತರ ಸಂಸ್ಥೆ  ಕಾರ್ಯನಿರ್ವಹಿಸುತ್ತಿದ್ದು, ಇದರ ಶಕ್ತಿ ಮತ್ತು ಪ್ರೇರಣೆ ಎಲ್ಲವೂ ಡಾ.ರಾಜ್‍ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರದ್ದು.

INFRASTRUCTURE – SHAKTHIDHAMA®

      ಸಂತ್ರಸ್ತ್ರ ಮಹಿಳೆಯರಿಗೆ ಆಶ್ರಯದ ಜೊತೆಗೆ ಕೌಶಲ್ಯ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿದೆ. ಗೀತಾ ಶಿವರಾಜ್ ಕುಮಾರ್ ಇದರ ಅಧ್ಯಕ್ಷರಾಗಿದ್ದಾರೆ. ಈ ಶಕ್ತಿಧಾಮದ ಬಗ್ಗೆ ಅತಿ ಹೆಚ್ಚು ಅಕ್ಕರೆ ಮತ್ತು ಒಲವು ಹೊಂದಿದ್ದ ಪುನಿತ್ ರಾಜ್‍ಕುಮಾರ್ ಹೆಣ್ಣು ಮಕ್ಕಳೊಂದಿಗೆ ಹಾಡಿ ನಗಿಸಿ ಹೋಗಿರುವುದು. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಿಂದ ಮೊದಲ ಸರಣಿಯಲ್ಲಿ ತಮಗೆ ಬಂದ 18 ಲಕ್ಷ ರೂ.ಗಳನ್ನು ಪುನಿತ್ ರಾಜ್‍ಕುಮಾರ್ ಈ ಶಕ್ತಿಧಾಮಕ್ಕೆ ನೀಡಿದ್ದಾರೆ. ಮೈಸೂರು ಮಾರ್ಗಕ್ಕೆ ಹೋದಾಗಲೆಲ್ಲಾ ಶಕ್ತಿಧಾಮಕ್ಕೆ ಭೇಟಿ ನೀಡಿ ಅಲ್ಲಿರುವ ಮಹಿಳೆಯರು ಮತ್ತು ಮಕ್ಕಳೊಂದಿಗೆ ಮಾತನಾಡಿ ಹೋಗುತ್ತಿದ್ದುದನ್ನು ಪುನರ್ ವಸತಿ ಕೇಂದ್ರದ ನಿವಾಸಿಗಳು ತುಂಬಾ ಖುಷಿಯಿಂದ ನೆನೆಯುತ್ತಾರೆ.

      ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಸರ್ಕಾರವು ರಾಜ್ಯದ 71 ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಿದೆ. ಇದರಲ್ಲಿ ಶಕ್ತಿಧಾಮವೂ ಇದೆ. ಸರ್ಕಾರ ಇಂತಹ ಕೇಂದ್ರಗಳನ್ನು ಸ್ಥಗಿತಗೊಳಿಸಿದ್ದರೂ ರಾಜ್ಯದ ಹಲವು ಎನ್‍ಜಿಓಗಳು ತಮ್ಮ ಕಾಯಕವನ್ನು ನಿಲ್ಲಿಸಿಲ್ಲ. ಶಕ್ತಿಧಾಮವು ಸಹ ಸಾಂತ್ವನ ಕೇಂದ್ರ ಸ್ಥಗಿತಗೊಳಿಸದೆ ಅಬಲೆಯರಿಗೆ ಆಶ್ರಯ ತಾಣವಾಗಿ ಮುಂದುವರೆದಿದೆ. ಸರ್ಕಾರ ಯಾವುದ್ಯಾವುದಕ್ಕೋ ಅನಗತ್ಯವಾಗಿ ಹಣ ಖರ್ಚು ಮಾಡುತ್ತಿದೆ. ಇಂತಹ ಕೇಂದ್ರಗಳಲ್ಲಿರುವ ಸಿಬ್ಬಂದಿಗೆ ಗೌರವ ಧನ ನೀಡಿ ಯೋಜನೆ ಮುಂದುವರೆಸುವಂತಾದರೆ ನೊಂದ ಹೆಣ್ಣು ಮಕ್ಕಳ ಬದುಕಲ್ಲಿ ಮತ್ತಷ್ಟು ಆಶಾಕಿರಣ ಮೂಡಲಿದೆ.

      ಪುನಿತ್ ರಾಜ್ ಕುಮಾರ್ ಇಂದು ದೈಹಿಕವಾಗಿ ನಮ್ಮೊಡನೆ ಇಲ್ಲ. ಅವರ ನಟನೆ ಮತ್ತು ಚಿತ್ರಗಳು ಇಡೀ ಕನ್ನಡಿಗರ ಮನಸೊರೆಗೊಂಡಿವೆ. ಇದರ ಜೊತೆಗೆ ಅವರ ಸಾಮಾಜಿಕ ಕಾಳಜಿಯೂ ಮೆಚ್ಚುವಂತಹದ್ದು. ಯಾವುದೇ ಪ್ರಚಾರವಿಲ್ಲದೆ ಅಬಲಾಶ್ರಮ ನಡೆಸುತ್ತಾ ನೊಂದವರಿಗೆ ಬೆಳಕಾಗಿರುವ ಇಂತಹ ಮಾನವೀಯ ಕಾಳಜಿಯುಳ್ಳವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.

ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap